ಹಾಸನ: ತಾಲೂಕಿನ ದೊಡ್ಡಹೊನ್ನೇನಹಳ್ಳಿ ಗ್ರಾಮದಲ್ಲಿ ಶನಿವಾರ ಹಾಡಹಗಲೇ ನಡೆದಿದ್ದ ಮನೆ ಕಳ್ಳತನ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ಮನೆಯ ಸೊಸೆಯೇ ತನ್ನ ಪ್ರಿಯಕರನೊಂದಿಗೆ ಸೇರಿ ಕಳ್ಳತನ ನಡೆಸಿರುವುದನ್ನು ಹಾಸನ ಗ್ರಾಮಾಂತರ ಠಾಣೆ ಪೊಲೀಸರು ತ್ವರಿತ ಕಾರ್ಯಾಚರಣೆ ನಡೆಸಿ ಕೆಲವೇ ಗಂಟೆಗಳಲ್ಲಿ ಪ್ರಕರಣವನ್ನು ಭೇದಿಸಿದ್ದಾರೆ.
ಗ್ರಾಮದ ಕೇಶವೇಗೌಡರ ಮನೆಯಲ್ಲಿ ಅಲ್ಮೇರನಲ್ಲಿಟ್ಟಿದ್ದ ಅಂದಾಜು 56 ಲಕ್ಷ ರೂ.ಗೂ ಹೆಚ್ಚು ಮೌಲ್ಯದ ಚಿನ್ನಾಭರಣ ಹಾಗೂ 13 ಲಕ್ಷಕ್ಕೂ ಹೆಚ್ಚು ನಗದು ಕಳವಾಗಿತ್ತು. ಶನಿವಾರ ಕೇಶವೇಗೌಡ, ಅವರ ಪತ್ನಿ ಜಯಲಕ್ಷ್ಮೀ ಹಾಗೂ ಪುತ್ರ ವೇಣುಗೋಪಾ ಜಮೀನಿನ ಕೆಲಸಕ್ಕೆ ತೆರಳಿದ್ದರು. ಮಗನನ್ನು ಶಾಲಾ ಬಸ್‌ಗೆ ಹತ್ತಿಸಿದ ಬಳಿಕ ಮನೆಯಲ್ಲಿ ಒಬ್ಬಳೇ ಇದ್ದ ಸೊಸೆ ಅಮೃತಾ, ತನ್ನ ಪ್ರಿಯಕರ ಪರಮೇಶನನ್ನು ಮನೆಗೆ ಕರೆಸಿಕೊಂಡು ಚಿನ್ನಾಭರಣ, ನಗದು ನೀಡಿದ ಬಳಿಕ ಜಮೀನಿನ ಕಡೆ ತೆರಳಿದ್ದಾಳೆ ಎನ್ನಲಾಗಿದೆ.
ಸಂಜೆ ಮನೆಗೆ ಮರಳಿದ ಕೇಶವೇಗೌಡರ ಕುಟುಂಬ ಅಲ್ಮೇರದಲ್ಲಿದ್ದ ಚಿನ್ನಾಭರಣ ಮತ್ತು ನಗದು ಕಾಣೆಯಾಗಿರುವುದನ್ನು ಕಂಡು ಆತಂಕಗೊಂಡಿದೆ. ಸೊಸೆ ಅಮೃತಾ ಸಹ ಏನೂ ತಿಳಿಯದಂತೆ ನಾಟಕವಾಡಿದ್ದಾಳೆ. ಪೊಲೀಸರ ತನಿಖೆಯಲ್ಲಿ ಪ್ರಕರಣದ ಸುಳಿವು ಸಿಕ್ಕಿದ್ದು, ಅಮೃತಾ ಹಾಗೂ ಆಕೆಯ ಪ್ರಿಯಕರ ಪರಮೇಶ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.






















