ಬೆಂಗಳೂರು: ಪಶುವೈದ್ಯಾಧಿಕಾರಿಗಳ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಉದ್ಭವಿಸಿರುವ ಅಕ್ರಮದ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ಅಂತಿಮ ಆಯ್ಕೆ ಪಟ್ಟಿಯ ಜಾರಿಗೆ ತಾತ್ಕಾಲಿಕ ತಡೆ ನೀಡಿದ್ದು, ಆರೋಪಗಳ ಸಮಗ್ರ ಪರಿಶೀಲನೆಗಾಗಿ ಹಿರಿಯ ಸದಸ್ಯರ ಅಧ್ಯಕ್ಷತೆಯಲ್ಲಿ ಆಂತರಿಕ ತನಿಖಾ ಉಪಸಮಿತಿಯನ್ನು ರಚಿಸಿದೆ.
ಜು. 24ರಂದು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರಿನ ಹಿನ್ನೆಲೆಯಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳು ಮತ್ತು ವಿವಿಧ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ವರದಿಗಳನ್ನು ಪರಿಗಣಿಸಿ ಭಾನುವಾರ ನಡೆದ ತುರ್ತು ಸಭೆಯಲ್ಲಿ ಈ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ ಎಂದು ಕೆಪಿಎಸ್ಸಿ ಕಾರ್ಯದರ್ಶಿ ಕೆ. ಜ್ಯೋತಿ ತಿಳಿಸಿದ್ದಾರೆ.
ಆಯೋಗದ ಪ್ರಕಟಣೆಯ ಪ್ರಕಾರ, ಜು. 24ರಂದು ದಾಖಲಾಗಿರುವ ದೂರು, ವಿವಿಧ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಗಳು ಹಾಗೂ ಜುಲೈ 25ರಂದು ಪೊಲೀಸ್ ಇಲಾಖೆ ದಾಖಲಿಸಿರುವ ಪ್ರಾಥಮಿಕ ಮಾಹಿತಿ ವರದಿ (ಎಫ್ಐಆರ್)ಯನ್ನು ಆಯೋಗ ಗಂಭೀರವಾಗಿ ಪರಿಗಣಿಸಿದೆ. ಆರೋಪಗಳ ಸತ್ಯಾಸತ್ಯತೆ ಪರಿಶೀಲಿಸಲು ಆಯೋಗದ ಹಿರಿಯ ಸದಸ್ಯರ ನೇತೃತ್ವದಲ್ಲಿ ಆಂತರಿಕ ತನಿಖಾ ಉಪಸಮಿತಿಯನ್ನು ರಚಿಸಲಾಗಿದ್ದು, ಪರೀಕ್ಷಾ ಪ್ರಕ್ರಿಯೆಯ ಪ್ರತಿಯೊಂದು ಹಂತ, ದಾಖಲೆಗಳು ಹಾಗೂ ಸಂಬಂಧಿತ ಮಾಹಿತಿಯನ್ನು ಸಮಗ್ರವಾಗಿ ಪರಿಶೀಲಿಸಿ ಒಂದು ವಾರದೊಳಗೆ ವಿವರವಾದ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ತನಿಖಾ ವರದಿ ಬಂದ ಬಳಿಕ ಅದರ ಆಧಾರದ ಮೇಲೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಕಾರ್ಯದರ್ಶಿ ಕೆ. ಜ್ಯೋತಿ ತಿಳಿಸಿದ್ದಾರೆ.
ನೋಡಲ್ ಅಧಿಕಾರಿಗಳ ನೇಮಕ: ತನಿಖೆಗೆ ಅಗತ್ಯವಿರುವ ಆಡಳಿತಾತ್ಮಕ ದಾಖಲೆಗಳು ಹಾಗೂ ಮಾಹಿತಿಯನ್ನು ಒದಗಿಸಲು ಕೆಪಿಎಸ್ಸಿ ಕಾರ್ಯದರ್ಶಿಯನ್ನು ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದೆ. ಕಾನೂನು ಸಂಬಂಧಿತ ಸಲಹೆ ಮತ್ತು ನೆರವು ನೀಡಲು ಆಯೋಗದ ಕಾನೂನು ವಿಭಾಗದ ಮುಖ್ಯಸ್ಥರನ್ನು ಮತ್ತೊಬ್ಬ ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದೆ. ಆಂತರಿಕ ತನಿಖಾ ಉಪಸಮಿತಿ ತನ್ನ ಅಂತಿಮ ವರದಿ ಸಲ್ಲಿಸುವವರೆಗೆ, ಜು 17ರಂದು ಪ್ರಕಟಿಸಲಾಗಿದ್ದ ಪಶುವೈದ್ಯಾಧಿಕಾರಿಗಳ ಅಂತಿಮ ಆಯ್ಕೆ ಪಟ್ಟಿಯ ಜಾರಿಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲು ಆಯೋಗ ನಿರ್ಧರಿಸಿದೆ.






















