SK Home Ad
Home ಸುದ್ದಿ ದೇಶ ಭಾರತದ ಇತಿಹಾಸ ಕಂಡ ರಾಜೀನಾಮೆ ಪ್ರಸಂಗಗಳು

ಭಾರತದ ಇತಿಹಾಸ ಕಂಡ ರಾಜೀನಾಮೆ ಪ್ರಸಂಗಗಳು

0
53

ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯ ಹೊಣೆ ಹೊತ್ತು ಅಂತೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದರಿಂದಾಗಿ ಕಳೆದ ಎರಡು ತಿಂಗಳಿಗೂ ಹೆಚ್ಚು ಕಾಲದಿಂದ ಕಾಕ್ರೋಚ್ ಜನತಾ ಪಾರ್ಟಿ ಮತ್ತು ಇತರ ಕೆಲವು ವಿರೋಧ ಪಕ್ಷಗಳು ನಡೆಸುತ್ತಿದ್ದ ಹೋರಾಟದ ಮುಖ್ಯಬೇಡಿಕೆ ಈಡೇರಿದಂತಾಗಿದೆ.

ಒಂದು ತಿಂಗಳಿಂದ ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯುತ್ತಿದ್ದ ಸತ್ಯಾಗ್ರಹವು ಒಂದು ತಾರ್ಕಿಕ ಅಂತ್ಯ ಕಂಡಂತಾಗಿದೆ. ಧರ್ಮೇಂದ್ರ ಪ್ರಧಾನ್ ಕೂಡ ವಿದ್ಯಾರ್ಥಿಗಳ ಸಮಯ ಹಾಗೂ ಶ್ರಮ ವ್ಯರ್ಥ ಆಗಬಾರದು, ಅವರು ಓದಿನಲ್ಲೇ ತಲ್ಲೀನರಾಗಬೇಕು ಎಂಬ ಕಾರಣಕ್ಕೆ ತಾವು ರಾಜೀನಾಮೆ ನೀಡುತ್ತಿರುವುದಾಗಿ ಹೇಳುವ ಮೂಲಕ ಪರೋಕ್ಷವಾಗಿ ವಿದ್ಯಾರ್ಥಿಗಳು ಚಳವಳಿಗೆ ವಿದಾಯ ಹೇಳಬೇಕು ಎಂಬುದನ್ನು ವ್ಯಕ್ತಪಡಿಸಿದ್ದಾರೆ.

ಇಂತಹ ರಾಜೀನಾಮೆ ಪ್ರಸಂಗಗಳು ಸ್ವಾತಂತ್ರ್ಯೋತ್ತರ ಭಾರತದಲ್ಲಿ ಹಲವಾರು ಬಾರಿ ನಡೆದಿವೆ. ಅವುಗಳ ಒಂದು ಅವಲೋಕನ ಇಲ್ಲಿದೆ.

  1. ಲಾಲ್ ಬಹಾದ್ದೂರ್ ಶಾಸ್ತ್ರಿ: 1956ರಲ್ಲಿ ತಮಿಳುನಾಡಿನ ಅರಿಯಲೂರ್‌ನಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತದ ಹೊಣೆ ಹೊತ್ತು ನೆಹರು ಸಂಪುಟದಲ್ಲಿ ರೈಲ್ವೆ ಮಂತ್ರಿಯಾಗಿ ಕೆಲಸ ಮಾಡುತ್ತಿದ್ದ ಲಾಲ್ ಬಹಾದ್ದೂರ್ ಶಾಸ್ತ್ರಿಯವರು ತಕ್ಷಣವೇ ರಾಜೀನಾಮೆ ನೀಡಿದ್ದರು.
  2. ಟಿ.ಟಿ. ಕೃಷ್ಣಮಾಚಾರಿ: 1958 ರಲ್ಲಿ ಮುಂದ್ರಾ ಹಣಕಾಸು ಹಗರಣ (ಮುಂದ್ರಾ ಸ್ಕ್ಯಾಂಡಲ್)ದ ಹಿನ್ನೆಲೆಯಲ್ಲಿ ಸರ್ಕಾರದ ವತಿಯಿಂದ ನಡೆದಿದ್ದ ಎಲ್‌ಐಸಿ ಹೂಡಿಕೆಗಳ ಬಗ್ಗೆ ತೀಕ್ಷ್ಣವಾದ ಟೀಕೆಗಳು ಕೇಳಿಬಂದಿದ್ದವು. ಇದರ ಹೊಣೆ ಹೊತ್ತು ಆಗಿನ ಹಣಕಾಸು ಸಚಿವ ಟಿ.ಟಿ. ಕೃಷ್ಣಮಾಚಾರಿಯವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.
  3. ವಿ.ಕೆ. ಕೃಷ್ಣ ಮೆನನ್: 1962ರಲ್ಲಿ ಭಾರತ-ಚೀನಾ ಯುದ್ಧ ನಡೆದಾಗ ಬೇರೆ ಬೇರೆ ಕಾರಣಗಳಿಂದಾಗಿ ಭಾರತಕ್ಕೆ ಹಿನ್ನಡೆಯಾಯಿತು. ಆ ಸಂದರ್ಭದಲ್ಲಿ ಪ್ರಧಾನಿ ನೆಹರು ನೀತಿಯ ಕುರಿತು ಹತ್ತು ಹಲವು ಟೀಕೆಗಳು ಕೇಳಿ ಬಂದವು. ಚೀನಾ ಬಗ್ಗೆ ನೆಹರು ವಹಿಸಿದ ಮೆದು ನೀತಿಯೇ ಹಿನ್ನೆಡೆಗೆ ಕಾರಣ ಎಂದು ವಿರೋಧ ಪಕ್ಷಗಳು ಆರೋಪ ಮಾಡಿದ ಹೊರತಾಗಿಯೂ ಆಗಿನ ರಕ್ಷಣಾ ಸಚಿವ ವಿ.ಕೆ. ಕೃಷ್ಣಮೆನನ್ ನೈತಿಕ ಹೊಣೆ ಹೊತ್ತು ರಾಜೀನಾಮೆ ಸಲ್ಲಿಸಿದ್ದರು.
  4. ಎಲ್.ಕೆ. ಆಡ್ವಾಣಿ: 1988 ರಿಂದ 1991 ರ ವೇಳೆ ಆಡ್ವಾಣಿಯವರಿಗೆ ಅನಧಿಕೃತ ಹವಾಲಾ ಹಣದ ವ್ಯವಹಾರ ನಡೆದಿದೆ ಎಂದು ಜೈನ್ ಡೈರಿಯಲ್ಲಿ ಉಲ್ಲೇಖವಿದ್ದ ಕಾರಣ, 1996ರಲ್ಲಿ ಆಡ್ವಾಣಿಯವರು ನೈತಿಕತೆ ಆಧಾರದಲ್ಲಿ ಲೋಕಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
  5. ನಿತೀಶ್ ಕುಮಾರ್: 1999 ರಲ್ಲಿ ಅಸ್ಸಾಂನ ಗೈಸಾಲ್‌ನಲ್ಲಿ ಭೀಕರ ರೈಲು ಅಪಘಾತ ಸಂಭವಿಸಿತು. ಆಗ ಕೇಂದ್ರದಲ್ಲಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರಕಾರ ಅಧಿಕಾರದಲ್ಲಿತ್ತು. ರೈಲ್ವೆ ಸಚಿವರಾಗಿ ಹೊಣೆ ನಿರ್ವಹಿಸುತ್ತಿದ್ದ ನಿತೀಶ್ ಕುಮಾರ್ ಅಪಘಾತದ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದರು.
  6. ಮಮತಾ ಬ್ಯಾನರ್ಜಿ: 2000ನೇ ಇಸವಿಯಲ್ಲಿ ವಾಜಪೇಯಿ ಸರ್ಕಾರದಲ್ಲಿ ಮಮತಾ ಬ್ಯಾನರ್ಜಿ ರೈಲ್ವೆ ಸಚಿವರಾಗಿದ್ದರು. ಆ ಸಂದರ್ಭದಲ್ಲಿ ಪಂಜಾಬ್‌ನಲ್ಲಿ ಹೌರಾ ಎಕ್ಸ್‌ಪ್ರೆಸ್ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದು 43 ಜನ ಸಾವನ್ನಪ್ಪಿದ್ದರು. ನೂರಾರು ಜನರಿಗೆ ಗಾಯಗಳಾಗಿದ್ದವು. ಆಗ ಮಮತಾ ನೈತಿಕ ಹೊಣೆ ಹೊತ್ತು ರಾಜೀನಾಮೆಗೆ ನೀಡಿದ್ದರು. ಆದರೆ ವಾಜಪೇಯಿ ಅದನ್ನು ಸ್ವೀಕರಿಸಲಿಲ್ಲ.
  7. ಶಿವರಾಜ್ ಪಾಟೀಲ್: 2008 ರಲ್ಲಿ ಪಾಕ್ ಭಯೋತ್ಪಾದಕರು(26/11) ಮುಂಬೈ ಮೇಲೆ ದಾಳಿ ಮಾಡಿ ತಾಜ್ ಹೋಟೆಲ್, ರೈಲ್ವೆ ನಿಲ್ದಾಣ ಮುಂತಾದ ಕಡೆ ನೂರಾರು ಜನರನ್ನು ಕೊಂದು ಹಾಕಿದಾಗ, ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರದಲ್ಲಿ ಕೇಂದ್ರ ಗೃಹ ಸಚಿವರಾಗಿದ್ದ ಶಿವರಾಜ್ ಪಾಟೀಲ್ ಭದ್ರತಾ ವೈಫಲ್ಯದ ಹೊಣೆ ಹೊತ್ತು ತಮ್ಮ ಸ್ಥಾನವನ್ನು ತ್ಯಜಿಸಿದ್ದರು.