ಬೆಂಗಳೂರು: ಕೃತಕ ಬುದ್ಧಿಮತ್ತೆ ಬಳಸಿ ದಾರಿತಪ್ಪಿಸುವ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚುತ್ತಿದ್ದು, ಅಂತವರ ವಿರುದ್ಧ ಕಾನೂನುಗಳ ಅಡಿಯಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, AI ಆಧಾರಿತ ನಕಲಿ ಚಿತ್ರಗಳು, ಮಾನಹಾನಿಕರ ವಿಷಯಗಳು ಮತ್ತು ತಪ್ಪು ಮಾಹಿತಿಯನ್ನು ಸೃಷ್ಟಿಸುವ, ಹಂಚಿಕೊಳ್ಳುವ ಅಥವಾ ಪ್ರಸಾರ ಮಾಡುವವರ ವಿರುದ್ಧ ಕ್ರಮಕೈಗೊಳ್ಳಲಾಗುವದು ಎಂದು ತಿಳಿಸಿದ್ದಾರೆ.
“ಇತ್ತೀಚಿನ ದಿನಗಳಲ್ಲಿ ಕೃತಕ ಬುದ್ಧಿಮತ್ತೆ (AI) ಬಳಸಿ ರಾಜಕೀಯ ನಾಯಕರುಗಳ ನಕಲಿ, ಅವಹೇಳನಕಾರಿ ಚಿತ್ರಗಳು ಹಾಗೂ ಸುಳ್ಳು ಮತ್ತು ದಾರಿತಪ್ಪಿಸುವ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ವ್ಯಕ್ತಿಗಳು ಮತ್ತು ಅಭಿಮಾನಿಗಳ ಹೆಸರಿನಲ್ಲಿ ಹಂಚುತ್ತಿರುವುದು ಗಮನಕ್ಕೆ ಬಂದಿದೆ” ಎಂದು ಹೇಳಿದ್ದಾರೆ.
“ಈ ರೀತಿಯ ಯಾವುದೇ ಪೋಸ್ಟ್‌ಗಳು, ಚಿತ್ರಗಳು ಅಥವಾ ತಪ್ಪು ಮಾಹಿತಿಗಳು ನಮ್ಮ ಅಧಿಕೃತ ನಿಲುವನ್ನು ಪ್ರತಿನಿಧಿಸುವುದಿಲ್ಲ. ಸಾರ್ವಜನಿಕರು ಇಂತಹ ಸುಳ್ಳು ಪ್ರಚಾರಗಳಿಗೆ ಮರುಳಾಗಬಾರದು ಹಾಗೂ ಅವುಗಳನ್ನು ಹಂಚಿಕೊಳ್ಳಬಾರದು” ಎಂದು ತಿಳಿಸಿದ್ದಾರೆ.
“AI ಆಧಾರಿತ ನಕಲಿ ಚಿತ್ರಗಳು, ಮಾನಹಾನಿಕರ ವಿಷಯಗಳು ಮತ್ತು ತಪ್ಪು ಮಾಹಿತಿಯನ್ನು ಸೃಷ್ಟಿಸುವ, ಹಂಚಿಕೊಳ್ಳುವ ಅಥವಾ ಪ್ರಸಾರ ಮಾಡುವವರ ವಿರುದ್ಧ ಸಂಬಂಧಿತ ಕಾನೂನುಗಳ ಅಡಿಯಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ಎಚ್ಚರಿಕೆ ನೀಡಿದ್ದಾರೆ.




















