ಚೆನ್ನೈ: ಕಾಲಿವುಡ್ ಸೂಪರ್‌ಸ್ಟಾರ್, ತಮಿಳುನಾಡಿನ ಮುಖ್ಯಮಂತ್ರಿ ದಳಪತಿ ವಿಜಯ್ ಅಭಿನಯದ ಬಹುನಿರೀಕ್ಷಿತ ಹಾಗೂ ಅವರ ವೃತ್ತಿಜೀವನದ ಕೊನೆಯ ಚಿತ್ರ ‘ಜನ ನಾಯಗನ್’ ಬಿಡುಗಡೆ ದಿನಾಂಕ ಅಧಿಕೃತವಾಗಿ ಘೋಷಣೆಯಾಗಿದೆ.
ಹಲವು ತಿಂಗಳ ಕಾನೂನು ಹೋರಾಟ, ಸೆನ್ಸಾರ್ ವಿವಾದ ಹಾಗೂ ಆನ್‌ಲೈನ್ ಲೀಕ್‌ನಂತಹ ಅಡೆತಡೆಗಳನ್ನು ದಾಟಿದ ಈ ಸಿನಿಮಾ ಇದೇ ಜುಲೈ 23ರಂದು ವಿಶ್ವಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.
ಚಿತ್ರದ ಬಿಡುಗಡೆ ದಿನಾಂಕವನ್ನು ವಿಜಯ್ ಅವರು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಹೊಸ ಪೋಸ್ಟರ್ ಹಂಚಿಕೊಳ್ಳುವ ಮೂಲಕ ಘೋಷಿಸಿದ್ದಾರೆ. ಇತ್ತೀಚೆಗಷ್ಟೇ ಸೆನ್ಸಾರ್ ಮಂಡಳಿಯಿಂದ ʻಎ’ ಪ್ರಮಾಣಪತ್ರ ಪಡೆದಿರುವ ಈ ಚಿತ್ರ, ಅಭಿಮಾನಿಗಳ ತಿಂಗಳುಗಳ ನಿರೀಕ್ಷೆಗೆ ಕೊನೆಗೂ ತೆರೆ ಎಳೆಯಲಿದೆ.
ಕೆವಿಎನ್ ಪ್ರೊಡಕ್ಷನ್ಸ್‌ನಿಂದ ಭರ್ಜರಿ ಘೋಷಣೆ: ಕನ್ನಡದ ಹೆಸರಾಂತ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ಸ್ ಈ ಬಿಗ್ ಬಜೆಟ್ ಚಿತ್ರವನ್ನು ನಿರ್ಮಿಸಿದ್ದು, ಬಿಡುಗಡೆ ದಿನಾಂಕವನ್ನು ಘೋಷಿಸುತ್ತಾ ಸಾಮಾಜಿಕ ಜಾಲತಾಣದಲ್ಲಿ ವಿಶೇಷ ಸಂದೇಶ ಹಂಚಿಕೊಂಡಿದೆ.
“ಬೆಂಕಿಯಿಂದ ಪರೀಕ್ಷಿಸಲ್ಪಟ್ಟಿದೆ. ಸಮಯದಿಂದ ರೂಪಿಸಲ್ಪಟ್ಟಿದೆ. ಇತಿಹಾಸ ನಿರ್ಮಿಸಲು ಸಜ್ಜಾಗಿದೆ. ಹೋರಾಟ ಎಷ್ಟು ಕಠಿಣವಾಗಿರುತ್ತದೆಯೋ, ಜಯ ಅಷ್ಟೇ ಭರ್ಜರಿಯಾಗಿರುತ್ತದೆ” ಎಂದು ಪೋಸ್ಟ್ ಮಾಡಿದ್ದು, ಅಭಿಮಾನಿಗಳಲ್ಲಿ ಮತ್ತಷ್ಟು ನಿರೀಕ್ಷೆ ಮೂಡಿಸಿದೆ.
ಏಳು ತಿಂಗಳ ಹೋರಾಟದ ಬಳಿಕ ಬಿಡುಗಡೆ: ʻಜನ ನಾಯಗನ್’ ಸಿನಿಮಾ ಮೂಲತಃ ಈ ವರ್ಷದ ಜನವರಿ 9ರಂದು ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾಗಬೇಕಿತ್ತು. ಆದರೆ ಸೆನ್ಸಾರ್ ಪ್ರಮಾಣಪತ್ರಕ್ಕೆ ಸಂಬಂಧಿಸಿದ ವಿವಾದ, ಮದ್ರಾಸ್ ಹೈಕೋರ್ಟ್‌ನಲ್ಲಿ ನಡೆದ ಕಾನೂನು ಪ್ರಕ್ರಿಯೆಗಳು ಹಾಗೂ ಇತರೆ ತಾಂತ್ರಿಕ ಅಡಚಣೆಗಳಿಂದ ಬಿಡುಗಡೆಯು ಮುಂದೂಡಿಕೆಯಾಗಿತ್ತು.
ಇದರ ನಡುವೆ ಚಿತ್ರದ ಕೆಲವು ಪ್ರಮುಖ ದೃಶ್ಯಗಳು ಹಾಗೂ ನಂತರ ಬಹುತೇಕ ಸಂಪೂರ್ಣ ಸಿನಿಮಾ ಆನ್‌ಲೈನ್‌ನಲ್ಲಿ ಸೋರಿಕೆಯಾಗಿರುವುದು ಚಿತ್ರತಂಡಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಈ ಎಲ್ಲ ಸವಾಲುಗಳನ್ನು ದಾಟಿ ಈಗ ಸಿನಿಮಾ ಬಿಡುಗಡೆಗೆ ಸಜ್ಜಾಗಿರುವುದು ವಿಜಯ್ ಅಭಿಮಾನಿಗಳಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿದೆ.
ವಿಜಯ್ ಅವರ ಕೊನೆಯ ಸಿನಿಮಾ: ರಾಜಕೀಯಕ್ಕೆ ಪ್ರವೇಶಿಸಿ ತಮಿಳುನಾಡಿನ ಮುಖ್ಯಮಂತ್ರಿಯಾಗಿರುವ ವಿಜಯ್ ಅಭಿನಯದ ಕೊನೆಯ ಸಿನಿಮಾ ಎಂಬ ಕಾರಣಕ್ಕೆ ʻಜನ ನಾಯಗನ್’ ಮೇಲೆ ಅಭಿಮಾನಿಗಳ ನಿರೀಕ್ಷೆ ದುಪ್ಪಟ್ಟಾಗಿದೆ. ಇದೇ ಕಾರಣದಿಂದ ಚಿತ್ರದ ಬಾಕ್ಸ್ ಆಫೀಸ್ ಪ್ರದರ್ಶನದ ಮೇಲೂ ಸಿನಿಪ್ರಿಯರ ಗಮನ ನೆಟ್ಟಿದೆ. ಆದರೆ ಚಿತ್ರ ಈಗಾಗಲೇ ಆನ್‌ಲೈನ್‌ನಲ್ಲಿ ಸೋರಿಕೆಯಾಗಿರುವ ಹಿನ್ನೆಲೆಯಲ್ಲಿ ಅದರ ವಾಣಿಜ್ಯ ಯಶಸ್ಸು ಹೇಗಿರಲಿದೆ ಎಂಬುದು ಕುತೂಹಲ ಮೂಡಿಸಿದೆ.
ಪೊಲೀಸ್ ಪಾತ್ರದಲ್ಲಿ ವಿಜಯ್: ನಿರ್ದೇಶಕ ಎಚ್. ವಿನೋದ್ ಆ್ಯಕ್ಷನ್-ರಾಜಕೀಯ ಥ್ರಿಲ್ಲರ್ ಶೈಲಿಯಲ್ಲಿ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ. ಚಿತ್ರದಲ್ಲಿ ವಿಜಯ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಇದು ತೆಲುಗಿನ ʻಭಗವಂತ್ ಕೇಸರಿ’ ಚಿತ್ರದ ರಿಮೇಕ್ ಎಂಬ ಮಾತುಗಳು ಕೇಳಿಬರುತ್ತಿವೆ.
ವಿಜಯ್‌ಗೆ ಜೋಡಿಯಾಗಿ ಪೂಜಾ ಹೆಗ್ಡೆ ನಟಿಸಿದ್ದು, ಬಾಬಿ ಡಿಯೋಲ್, ಪ್ರಕಾಶ್ ರಾಜ್, ಗೌತಮ್ ವಾಸುದೇವ್ ಮೆನನ್, ಪ್ರಿಯಾಮಣಿ, ಮಮಿತಾ ಬೈಜು ಹಾಗೂ ನರೇನ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ನೀಡಿದ್ದಾರೆ.
ಬೆಳಗ್ಗೆ 5 ಗಂಟೆಗೆ ಕರ್ನಾಟಕದಲ್ಲಿ ಮೊದಲ ಶೋ: ರಿಲೀಸ್ ಪೋಸ್ಟರ್ ಜೊತೆಗೆ ಮೊದಲ ಪ್ರದರ್ಶನದ ಮಾಹಿತಿಯೂ ಹೊರಬಿದ್ದಿದೆ. ತಮಿಳುನಾಡಿನಲ್ಲಿ ಸರ್ಕಾರದ ನಿಯಮದಂತೆ ಮುಂಜಾನೆ 5 ಗಂಟೆಯ ವಿಶೇಷ ಪ್ರದರ್ಶನ ಇರುವುದಿಲ್ಲ. ಅಲ್ಲಿ ಮೊದಲ ಶೋ ಬೆಳಿಗ್ಗೆ 9 ಗಂಟೆಗೆ ಆರಂಭವಾಗಲಿದೆ. ಆದರೆ ಕರ್ನಾಟಕ, ಕೇರಳ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಅಭಿಮಾನಿಗಳಿಗಾಗಿ ಬೆಳಗ್ಗೆ 5 ಗಂಟೆಯಿಂದಲೇ ವಿಶೇಷ ಪ್ರದರ್ಶನಗಳು ಆರಂಭವಾಗುವ ಸಾಧ್ಯತೆ ಇದೆ.
ʻಜನ ನಾಯಗನ್’ ಬಿಡುಗಡೆಯೊಂದಿಗೆ ದಳಪತಿ ವಿಜಯ್ ಅವರ ಸಿನಿ ಪಯಣಕ್ಕೆ ಅಧಿಕೃತ ತೆರೆ ಬೀಳಲಿದ್ದು, ಈ ಐತಿಹಾಸಿಕ ಕ್ಷಣವನ್ನು ಅಭಿಮಾನಿಗಳು ಕಾತರದಿಂದ ಎದುರು ನೋಡುತ್ತಿದ್ದಾರೆ.






















