ರಾಜ್ಯದಲ್ಲಿ 10 ಸಾವಿರ ‘ಭಾರತ್ ಜೋಡೋ ಯುವ ಸಂಘ’ ಸ್ಥಾಪನೆ; ಯುವ ಸಬಲೀಕರಣಕ್ಕೆ ಸರ್ಕಾರದ ಮಹತ್ವದ ಹೆಜ್ಜೆ
ಬೆಂಗಳೂರು: ರಾಜ್ಯದ ಯುವಜನರಲ್ಲಿ ಕ್ರೀಡೆ, ಸಂಸ್ಕೃತಿ, ವೈಜ್ಞಾನಿಕ ಮನೋಭಾವ ಹಾಗೂ ಸಾಮಾಜಿಕ ಸಾಮರಸ್ಯವನ್ನು ಬೆಳೆಸುವ ಉದ್ದೇಶದಿಂದ ಕರ್ನಾಟಕ ಸರ್ಕಾರ ಮಹತ್ವಾಕಾಂಕ್ಷೆಯ ಯೋಜನೆ ಘೋಷಿಸಿದೆ. ರಾಜ್ಯದ ಗ್ರಾಮ ಪಂಚಾಯಿತಿಗಳು ಮತ್ತು ನಗರ ವಾರ್ಡ್‌ಗಳ ವ್ಯಾಪ್ತಿಯಲ್ಲಿ 10 ಸಾವಿರ ‘ಭಾರತ್ ಜೋಡೋ ಯುವ ಸಂಘ’ಗಳನ್ನು ಸ್ಥಾಪಿಸಲು ಅಧಿಕೃತ ಆದೇಶ ಹೊರಡಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ಯುವ ಸಬಲೀಕರಣ ಮತ್ತು ಸಮುದಾಯ ಅಭಿವೃದ್ಧಿಗೆ ಈ ಯೋಜನೆ ಮಹತ್ವದ ಪಾತ್ರ ವಹಿಸಲಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಅಯೋಧ್ಯೆ ರಾಮ ಮಂದಿರಕ್ಕೆ CEO ನೇಮಕ: ಅರ್ಜಿ ಆಹ್ವಾನಿಸಿದ ಟ್ರಸ್ಟ್
ಎಲ್ಲೆಲ್ಲಿ ಯುವ ಸಂಘಗಳು? : ಸರ್ಕಾರದ ಮಾರ್ಗಸೂಚಿಯ ಪ್ರಕಾರ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದು ಭಾರತ್ ಜೋಡೋ ಯುವ ಸಂಘ, ಪ್ರತಿ ಪಟ್ಟಣ ಪಂಚಾಯಿತಿಯಲ್ಲಿ ಸರಾಸರಿ 4 ಸಾವಿರ ಜನಸಂಖ್ಯೆಗೆ ಒಂದು ಸಂಘ, ಪ್ರತಿ ಪುರಸಭೆಯಲ್ಲಿ 6 ಸಾವಿರ ಜನಸಂಖ್ಯೆಗೆ ಒಂದು ಸಂಘ, ಪ್ರತಿ ನಗರಸಭೆಯಲ್ಲಿ 8 ಸಾವಿರ ಜನಸಂಖ್ಯೆಗೆ ಒಂದು ಸಂಘ, ಮಹಾನಗರ ಪಾಲಿಕೆ ಹಾಗೂ ಜಿಬಿಎ ವ್ಯಾಪ್ತಿಯಲ್ಲಿ 10 ಸಾವಿರ ಜನಸಂಖ್ಯೆಗೆ ಒಂದು ಸಂಘ ಸ್ಥಾಪಿಸಲಾಗುತ್ತದೆ.
ವಾರ್ಷಿಕ ₹10 ಲಕ್ಷ ಅನುದಾನ : ಈ ಯೋಜನೆಯಡಿ ಪ್ರತಿ ಸಂಘಕ್ಕೆ ವಾರ್ಷಿಕ ₹10 ಲಕ್ಷ ಅನುದಾನ ನೀಡಲಾಗುತ್ತದೆ. ಅಲ್ಲದೆ, ಪ್ರತಿ ಸಂಘದಲ್ಲಿ ಕಾರ್ಯನಿರ್ವಹಿಸುವ ಒಬ್ಬ ತರಬೇತುದಾರರಿಗೆ ವಾರ್ಷಿಕ ₹24 ಸಾವಿರ ಗೌರವಧನ ನೀಡಲು ಸರ್ಕಾರ ನಿರ್ಧರಿಸಿದೆ.
ಇದನ್ನೂ ಓದಿ: ತಮಿಳುನಾಡಿನಲ್ಲಿ ಗೋಹತ್ಯೆ ನಿಷೇಧಕ್ಕೆ ಸುಪ್ರೀಂ ಕೋರ್ಟ್ ಬ್ರೇಕ್
ಹಲವು ಇಲಾಖೆಗಳ ಸಹಭಾಗಿತ್ವ : ಈ ಯೋಜನೆಯನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮೂಲಕ ಅನುಷ್ಠಾನಗೊಳಿಸಲಾಗುತ್ತದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ನಗರಾಭಿವೃದ್ಧಿ ಇಲಾಖೆ, ಕಂದಾಯ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಸಹ ಈ ಯೋಜನೆಗೆ ಸಹಕಾರ ನೀಡಲಿವೆ.
ಯುವಕರಲ್ಲಿ ನಾಯಕತ್ವ ಬೆಳೆಸುವುದು ಉದ್ದೇಶ : ಭಾರತ್ ಜೋಡೋ ಯುವ ಸಂಘಗಳ ಮೂಲಕ ಯುವಕರಲ್ಲಿ ನಾಯಕತ್ವದ ಗುಣಗಳು, ಸಾಮಾಜಿಕ ಜವಾಬ್ದಾರಿ, ಕ್ರೀಡಾ ಚಟುವಟಿಕೆಗಳು, ವೈಜ್ಞಾನಿಕ ಚಿಂತನೆ ಹಾಗೂ ಸಾಂಸ್ಕೃತಿಕ ಮೌಲ್ಯಗಳನ್ನು ಬೆಳೆಸುವ ಗುರಿಯನ್ನು ಸರ್ಕಾರ ಹೊಂದಿದೆ. “ಯುವಜನರನ್ನು ಸಬಲೀಕರಣಗೊಳಿಸಿ, ಅವರನ್ನು ನಾಡಿನ ಉತ್ತಮ ಪ್ರಜೆಗಳಾಗಿ ರೂಪಿಸುವುದೇ ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ” ಎಂದು ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.
ಇದನ್ನೂ ಓದಿ: H. D ರೇವಣ್ಣಗೆ ಮತ್ತೆ ಕಾನೂನು ಸಂಕಷ್ಟ: ಸುಪ್ರೀಂನಿಂದ ನೋಟಿಸ್
ರಾಜ್ಯ ಸರ್ಕಾರದ ಈ ಹೊಸ ಯೋಜನೆ ಗ್ರಾಮೀಣ ಮತ್ತು ನಗರ ಪ್ರದೇಶಗಳ ಯುವಕರಿಗೆ ಹೊಸ ವೇದಿಕೆಯನ್ನು ಒದಗಿಸುವುದರ ಜೊತೆಗೆ, ಯುವಜನರ ಸಂಘಟಿತ ಅಭಿವೃದ್ಧಿಗೆ ಪೂರಕವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.





















