ಮೈಸೂರು: ಹಿರಿಯ ಹಿನ್ನೆಲೆ ಗಾಯಕಿ, ಗಾನಕೋಗಿಲೆ ಎಸ್. ಜಾನಕಿ ಅವರ ನಿಧನವು ಭಾರತೀಯ ಸಂಗೀತ ಲೋಕಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ. ಅವರ ಅಗಲಿಕೆಗೆ ಚಿತ್ರರಂಗದ ಅನೇಕ ಗಣ್ಯರು ಕಂಬನಿ ಮಿಡಿದಿದ್ದು, ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರು ಭಾವುಕರಾಗಿ ಮಹತ್ವದ ಮನವಿಯೊಂದನ್ನು ಮಾಡಿದ್ದಾರೆ.
ಎಸ್. ಜಾನಕಿ ಅವರೊಂದಿಗೆ ಅನೇಕ ಸೂಪರ್‌ಹಿಟ್ ಹಾಡುಗಳನ್ನು ನೀಡಿರುವ ಹಂಸಲೇಖ, ಮೈಸೂರಿನಲ್ಲಿ ಜಾನಕಿ ಅವರ ಸ್ಮಾರಕ ನಿರ್ಮಾಣವಾಗಬೇಕು ಎಂದು ಸರ್ಕಾರ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಶಾಸಕ ಸೈಯದ್ ಯಾಸೀನ್ ನಿಧನ
ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ವಿಡಿಯೋ ಸಂದೇಶದಲ್ಲಿ ಹಂಸಲೇಖ ಅವರು, “ಗಾನ ಕೋಗಿಲೆ ಜಾನಕಿ ಅಮ್ಮ ಕರುನಾಡಿನ ಮೈಸೂರಿನ ಮಣ್ಣಿನಲ್ಲಿ ತಮ್ಮ ಅಂತ್ಯವನ್ನು ಕಂಡಿದ್ದಾರೆ. ಅವರು ಮಣ್ಣಿಗೆ ಹೋಗುವುದಕ್ಕೂ ಮುಂಚೆ ಕರುನಾಡಿನ ಜನರು ಕಣ್ಣು ತೆರೆಯಬೇಕು. ಅವರಿಗಾಗಿ ಮೈಸೂರಿನಲ್ಲಿ ಒಂದು ಸ್ಮಾರಕ ನಿರ್ಮಿಸುವ ಯೋಜನೆಯನ್ನು ಅವರ ಕುಟುಂಬಕ್ಕೆ ನಾವು ವಿನಂತಿಸಬೇಕು” ಎಂದು ಹೇಳಿದ್ದಾರೆ.
ಸರ್ಕಾರ ಸೂಕ್ತ ಜಾಗ ಗುರುತಿಸಲಿ : ಜಾನಕಿ ಅವರ ಕುಟುಂಬದವರು ಒಪ್ಪಿಗೆ ನೀಡಿದರೆ, ಸರ್ಕಾರ ಸೂಕ್ತ ಸ್ಥಳವನ್ನು ಗುರುತಿಸಿ ಸ್ಮಾರಕ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಹಂಸಲೇಖ ಒತ್ತಾಯಿಸಿದ್ದಾರೆ. “ಕುಟುಂಬದವರು ಒಪ್ಪಿದರೆ, ಈಗಲೇ ಒಂದು ಸಿದ್ಧತೆ ಆಗುವ ಹಾಗೆ ಸೂಕ್ತವಾದ ಜಾಗವನ್ನು ನಿಗದಿಪಡಿಸಲು ಸರ್ಕಾರ ಹಾಗೂ ಸಂಬಂಧಪಟ್ಟವರೊಂದಿಗೆ ಚರ್ಚೆ ನಡೆಸಬೇಕು. ಈ ಬಗ್ಗೆ ದೊಡ್ಡ ಮನಸ್ಸು ಮಾಡಬೇಕು” ಎಂದು ಅವರು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಮೈಸೂರು: ಗಾನಕೋಗಿಲೆ ಎಸ್. ಜಾನಕಿ ಅಂತಿಮ ದರ್ಶನಕ್ಕೆ ಜನಸಾಗರ
‘ಜಾನಕಿ ಎಂದರೆ ಸೀತೆ, ಸೀತೆ ಎಂದರೆ ಗೀತೆ’ : ವಿಡಿಯೋದಲ್ಲಿ ಮತ್ತಷ್ಟು ಭಾವುಕರಾಗಿ ಮಾತನಾಡಿದ ಹಂಸಲೇಖ, “ಜಾನಕಿ ಅಂದರೆ ಸೀತೆ, ಸೀತೆ ಎಂದರೆ ನಮಗೆ ಗೀತೆ. ಆಕೆಯ ಆಸೆ ಕರುನಾಡಿನಲ್ಲಿ ಇರೋದು. ನಾವು ಅದಕ್ಕೆ ಇಂಬು ಕೊಡುವುದು ಬೇಡವೇ? ಈ ಸುದ್ದಿಯನ್ನು ಸರ್ಕಾರಕ್ಕೆ ತಲುಪಿಸಬೇಕು” ಎಂದು ಕೋರಿದ್ದಾರೆ.
ಹಂಸಲೇಖ ಅವರ ಈ ಮನವಿಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಅನೇಕ ಅಭಿಮಾನಿಗಳು ಮತ್ತು ಸಂಗೀತಾಸಕ್ತರು ಕೂಡ ಮೈಸೂರಿನಲ್ಲಿ ಎಸ್. ಜಾನಕಿ ಅವರ ಸ್ಮಾರಕ ನಿರ್ಮಾಣವಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: S. Janaki: ಐದು ದಶಕಗಳಿಗೂ ಮೀರಿದ ಅಮೋಘ ಸಂಗೀತ ಪಯಣ
ಮೈಸೂರಿನಲ್ಲೇ ಅಂತಿಮ ವಿದಾಯ : ತಮ್ಮ ಜೀವನದ ಕೊನೆಯ ದಿನಗಳನ್ನು ಮೈಸೂರಿನಲ್ಲಿ ಕಳೆದ ಎಸ್. ಜಾನಕಿ ಅವರು ಅಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಅವರ ಪಾರ್ಥಿವ ಶರೀರವನ್ನು ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇರಿಸಲಾಗಿದ್ದು, ಸಾವಿರಾರು ಅಭಿಮಾನಿಗಳು, ಕಲಾವಿದರು ಹಾಗೂ ಗಣ್ಯರು ಅಂತಿಮ ನಮನ ಸಲ್ಲಿಸುತ್ತಿದ್ದಾರೆ.
ಇಂದು ಮೈಸೂರಿನಲ್ಲಿಯೇ ಅವರ ಅಂತ್ಯಕ್ರಿಯೆ ನಡೆಯಲಿದ್ದು, ಗಾನಕೋಗಿಲೆಗೆ ಕರುನಾಡು ಭಾವಪೂರ್ಣ ವಿದಾಯ ಹೇಳಲು ಸಜ್ಜಾಗಿದೆ.






















