SK Home Ad
Home ಸಿನಿ ಮಿಲ್ಸ್ ‘ಕರಾವಳಿ’ ವಿವಾದ ಏನೇ ಇರಲಿ ಸಿನಿಮಾ ಗೆಲ್ಲಿಸಿ: ಪ್ರಜ್ವಲ್ ಮನವಿ

‘ಕರಾವಳಿ’ ವಿವಾದ ಏನೇ ಇರಲಿ ಸಿನಿಮಾ ಗೆಲ್ಲಿಸಿ: ಪ್ರಜ್ವಲ್ ಮನವಿ

0
62

‘ಕರಾವಳಿ’ ಚಿತ್ರದ ಪ್ರಚಾರದಿಂದ ದೂರ ಉಳಿದ ಕಾರಣ ತಿಳಿಸಿದ ಪ್ರಜ್ವಲ್ ದೇವರಾಜ್

ಕನ್ನಡದ ಬಹುನಿರೀಕ್ಷಿತ ‘ಕರಾವಳಿ’ ಸಿನಿಮಾ ಬಿಡುಗಡೆಯ ಮುನ್ನವೇ ಡಬ್ಬಿಂಗ್ ಹಾಗೂ ಸಂಭಾವನೆ ವಿವಾದದ ಕಾರಣದಿಂದ ಸುದ್ದಿಯಲ್ಲಿದೆ. ಈ ವಿವಾದಕ್ಕೆ ಸಂಬಂಧಿಸಿದಂತೆ ನಟ ಪ್ರಜ್ವಲ್ ದೇವರಾಜ್ ಮೊದಲ ಬಾರಿಗೆ ಅಧಿಕೃತವಾಗಿ ಪ್ರತಿಕ್ರಿಯೆ ನೀಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಳ್ಳುವ ಮೂಲಕ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

ನಿರ್ದೇಶಕ ಗುರುದತ್ ಗಾಣಿಗ ಅವರು ಇತ್ತೀಚೆಗೆ ಪ್ರಜ್ವಲ್ ದೇವರಾಜ್ ವಿರುದ್ಧ ಕೆಲವು ಗಂಭೀರ ಆರೋಪಗಳನ್ನು ಮಾಡಿದ್ದರು. ಈ ಬೆನ್ನಲ್ಲೇ ನಟ ಪ್ರಜ್ವಲ್ ದೇವರಾಜ್, ಚಿತ್ರದ ಟ್ರೇಲರ್ ಬಿಡುಗಡೆಯ ಸಂದರ್ಭದಲ್ಲಿ ತಮ್ಮ ಅನುಮತಿ ಅಥವಾ ಮಾಹಿತಿಯಿಲ್ಲದೆ ತಮ್ಮ ಪಾತ್ರಕ್ಕೆ ಮತ್ತೊಬ್ಬರಿಂದ ಡಬ್ಬಿಂಗ್ ಮಾಡಿಸಿರುವ ವಿಚಾರ ತಿಳಿದುಬಂದಿತ್ತು ಎಂದು ಹೇಳಿದ್ದಾರೆ.

ಇದನ್ನೂ ಓದಿ: ‘ರಾಮಾಯಣ’ ಟ್ರೇಲರ್ ಬಿಡುಗಡೆ ಮುಂದೂಡಿಕೆ: ಹೊಸ ಡೇಟ್ ಫಿಕ್ಸ್

ಸಂಭಾವನೆಯೂ ಸಂಪೂರ್ಣ ಪಾವತಿಯಾಗಿರಲಿಲ್ಲ : ಪ್ರಜ್ವಲ್ ದೇವರಾಜ್ ಅವರ ಪ್ರಕಾರ, ಟ್ರೇಲರ್ ಬಿಡುಗಡೆಯ ವೇಳೆಗೆ ತಮಗೆ ಒಪ್ಪಂದದಂತೆ ನೀಡಬೇಕಿದ್ದ ಸಂಭಾವನೆಯೂ ಸಂಪೂರ್ಣವಾಗಿ ಪಾವತಿಯಾಗಿರಲಿಲ್ಲ. ಇದೇ ಎರಡು ಕಾರಣಗಳಿಂದ ಅವರು ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

‘ಸಿಕ್ಸ್ ಪ್ಯಾಕ್’ ಕಾರಣವಲ್ಲ : ಈ ವಿವಾದಕ್ಕೆ ತಮ್ಮ ಸಿಕ್ಸ್ ಪ್ಯಾಕ್ ಲುಕ್ ಕಾರಣ ಎಂಬ ರೀತಿಯ ಹೇಳಿಕೆಗಳು ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಪ್ರಜ್ವಲ್, “ಈ ವಿಚಾರಕ್ಕೂ ಸಿಕ್ಸ್ ಪ್ಯಾಕ್ ಮಾಡದಿರುವುದಕ್ಕೂ ಯಾವುದೇ ಸಂಬಂಧವಿಲ್ಲ. ನನ್ನ ಅನುಮತಿಯಿಲ್ಲದೆ ನನ್ನ ಪಾತ್ರಕ್ಕೆ ಮತ್ತೊಬ್ಬರಿಂದ ಡಬ್ಬಿಂಗ್ ಮಾಡಿರುವುದು ಮತ್ತು ಬಾಕಿ ಸಂಭಾವನೆ ಪಾವತಿಯಾಗದಿರುವುದೇ ವಿವಾದದ ಮೂಲ ಕಾರಣ” ಎಂದು ಹೇಳಿದ್ದಾರೆ.

ಇದನ್ನೂ ಓದಿ: DCM ಪವನ್‌ಗೆ ಶಸ್ತ್ರಚಿಕಿತ್ಸೆ : 2 ತಿಂಗಳ ಬಳಿಕ ಮತ್ತೊಂದು ಸರ್ಜರಿ!

ಡಬ್ಬಿಂಗ್ ಮಾಡಲು ಸಿದ್ಧನಿದ್ದೆ : “ಮೊದಲ ದಿನದಿಂದಲೂ ನನ್ನ ನಿಲುವು ಒಂದೇ ಆಗಿತ್ತು. ನನಗೆ ಬಾಕಿ ಇದ್ದ ಸಂಭಾವನೆಯನ್ನು ಸಂಪೂರ್ಣವಾಗಿ ಪಾವತಿಸಿದ ಕೂಡಲೇ ಚಿತ್ರದ ಡಬ್ಬಿಂಗ್ ಪೂರ್ಣಗೊಳಿಸಲು ಹಾಗೂ ಚಿತ್ರದ ಪ್ರಚಾರದಲ್ಲಿ ಭಾಗವಹಿಸಲು ನಾನು ಸಿದ್ಧನಿದ್ದೆ” ಎಂದು ಪ್ರಜ್ವಲ್ ತಮ್ಮ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.

ಡಬ್ಬಿಂಗ್ ಹಾಗೂ ಪ್ರಚಾರದ ಅಗತ್ಯವಿಲ್ಲ ಎಂದ ನಿರ್ಮಾಣ ಸಂಸ್ಥೆ : ಟ್ರೇಲರ್ ಬಿಡುಗಡೆಯ ಮರುದಿನ ತಮ್ಮ ಬಾಕಿ ಸಂಭಾವನೆ ಪಾವತಿಸಲಾಯಿತು. ಆದರೆ ನಂತರ ನಿರ್ಮಾಣ ಸಂಸ್ಥೆಯ ವತಿಯಿಂದ ತಮ್ಮ ವ್ಯವಸ್ಥಾಪಕರಿಗೆ ಇನ್ನು ಮುಂದೆ ತಮ್ಮ ಡಬ್ಬಿಂಗ್ ಸೇವೆ ಹಾಗೂ ಚಿತ್ರದ ಪ್ರಚಾರದಲ್ಲಿ ಭಾಗವಹಿಸುವ ಅಗತ್ಯವಿಲ್ಲ ಎಂದು ತಿಳಿಸಲಾಯಿತು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಕೊಲ್ಲೂರು ಮೂಕಾಂಬಿಕಾ ದೇಗುಲಕ್ಕೆ ಕೇರಳ CM ವಿ.ಡಿ. ಸತೀಶನ್ ಭೇಟಿ

ಹೀಗಾಗಿ ಚಿತ್ರದ ಡಬ್ಬಿಂಗ್ ಮತ್ತು ಪ್ರಚಾರದಲ್ಲಿ ಭಾಗವಹಿಸದಿರುವುದು ತಮ್ಮ ನಿರ್ಧಾರವಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಚಿತ್ರತಂಡಕ್ಕೆ ಶುಭ ಹಾರೈಕೆ : ಎರಡು ದಶಕಗಳಿಗೂ ಹೆಚ್ಚು ಕಾಲ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡಿದ ತಮ್ಮ ಮೇಲೆ ಇಂತಹ ಹೇಳಿಕೆಗಳು ನೋವುಂಟು ಮಾಡಿವೆ ಎಂದು ಹೇಳಿರುವ ಪ್ರಜ್ವಲ್ ದೇವರಾಜ್, ವೈಯಕ್ತಿಕ ಭಿನ್ನಾಭಿಪ್ರಾಯಗಳು ಇಡೀ ಚಿತ್ರತಂಡದ ಪರಿಶ್ರಮವನ್ನು ಮರೆಮಾಚಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಕೊನೆಯಲ್ಲಿ, ಜುಲೈ 24ರಂದು ಚಿತ್ರಮಂದಿರಗಳಲ್ಲಿ ‘ಕರಾವಳಿ’ ಚಿತ್ರವನ್ನು ವೀಕ್ಷಿಸಿ ಚಿತ್ರತಂಡವನ್ನು ಪ್ರೋತ್ಸಾಹಿಸುವಂತೆ ಅಭಿಮಾನಿಗಳು ಹಾಗೂ ಕನ್ನಡ ಸಿನಿಪ್ರೇಕ್ಷಕರಿಗೆ ಮನವಿ ಮಾಡಿದ್ದಾರೆ.