ಬಹಾಮಾಸ್‌ನ ನಾರ್ತ್ ಆಂಡ್ರೋಸ್ ಪ್ರದೇಶದಲ್ಲಿ ಫ್ಲೆಮಿಂಗೊ ಏರ್ ಸಂಸ್ಥೆಗೆ ಸೇರಿದ ಸೆಸ್ನಾ 402 (Cessna 402) ವಿಮಾನ ಪತನಗೊಂಡು ಅದರಲ್ಲಿ ಪ್ರಯಾಣಿಸುತ್ತಿದ್ದ ಎಲ್ಲಾ 10 ಮಂದಿ ಮೃತಪಟ್ಟಿರುವ ದುರ್ಘಟನೆ ನಡೆದಿದೆ. ಈ ದುರ್ಘಟನೆ ಬಹಾಮಾಸ್‌ನ 53ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಸಂಭವಿಸಿದ್ದು, ಇಡೀ ದೇಶವನ್ನು ಶೋಕದಲ್ಲಿ ಮುಳುಗಿಸಿದೆ.
ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ, ಫ್ಲೆಮಿಂಗೊ ಏರ್‌ಗೆ ಸೇರಿದ ಸಣ್ಣ ಪ್ರಯಾಣಿಕ ವಿಮಾನ ನಾರ್ತ್ ಆಂಡ್ರೋಸ್‌ನಿಂದ ಹೊರಟ ಕೆಲವೇ ಕ್ಷಣಗಳಲ್ಲಿ ತಾಂತ್ರಿಕ ದೋಷದಿಂದ ಪತನಗೊಂಡಿರುವ ಶಂಕೆ ವ್ಯಕ್ತವಾಗಿದೆ. ಅಪಘಾತದ ತೀವ್ರತೆಗೆ ವಿಮಾನ ಸಂಪೂರ್ಣವಾಗಿ ಧ್ವಂಸಗೊಂಡಿದ್ದು, ಅದರಲ್ಲಿದ್ದ ಎಲ್ಲ ಪ್ರಯಾಣಿಕರು ಹಾಗೂ ಸಿಬ್ಬಂದಿ ಸಾವನ್ನಪ್ಪಿದ್ದಾರೆ.
ಆರಂಭದಲ್ಲಿ ಬಹಾಮಾಸ್ ಪ್ರಧಾನಿ ಫಿಲಿಪ್ ಬ್ರೇವ್ ಡೇವಿಸ್ ಅವರು ಒಬ್ಬ ವ್ಯಕ್ತಿ ಬದುಕುಳಿದಿರುವ ಸಾಧ್ಯತೆಯಿದೆ ಎಂದು ಹೇಳಿದ್ದರು. ಆದರೆ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ, ಆ ವ್ಯಕ್ತಿಯೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ದೃಢಪಡಿಸಿದರು.
ಈ ಕುರಿತು ಮಾತನಾಡಿದ ಪ್ರಧಾನಿ ಡೇವಿಸ್, “ಬಹಾಮಾಸ್ ತನ್ನ 53ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಸಂಭವಿಸಿದ ಈ ದುರಂತ ನಮ್ಮೆಲ್ಲರಿಗೂ ಆಘಾತ ಉಂಟುಮಾಡಿದೆ. ಇದು ನಮಗೆ ಶೋಕದ ದಿನವಾಗಿದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಪ್ರತಿಯೊಂದು ಕುಟುಂಬಕ್ಕೂ ನಾವು ಆಳವಾದ ಸಂತಾಪ ಸೂಚಿಸುತ್ತೇವೆ” ಎಂದು ಹೇಳಿದರು.
ವಿಮಾನ ಪತನದ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಅಧಿಕಾರಿಗಳು ಅಪಘಾತದ ಕುರಿತು ಸಮಗ್ರ ತನಿಖೆ ಆರಂಭಿಸಿದ್ದು, ಮೃತರ ಗುರುತು ಪತ್ತೆ ಮಾಡುವ ಕಾರ್ಯ ನಡೆಯುತ್ತಿದೆ. ಜೊತೆಗೆ ಮುನ್ನೆಚ್ಚರಿಕಾ ಕ್ರಮವಾಗಿ ಫ್ಲೆಮಿಂಗೊ ಏರ್ ಸಂಸ್ಥೆಯ ಎಲ್ಲಾ ವಿಮಾನ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಈ ದುರ್ಘಟನೆ ಬಹಾಮಾಸ್ ದೇಶದ ಸ್ವಾತಂತ್ರ್ಯ ದಿನದ ಸಂಭ್ರಮವನ್ನು ದುಃಖದ ವಾತಾವರಣಕ್ಕೆ ತಳ್ಳಿದ್ದು, ದೇಶದಾದ್ಯಂತ ಸಂತಾಪದ ಅಲೆ ಮೂಡಿಸಿದೆ.






















