ಬೆಳಗಾವಿ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ನೂತನ ಕ್ಯಾಂಪಸ್ ನಿರ್ಮಾಣದ ಭರಾಟೆಯಲ್ಲಿ ಹಿರೇಬಾಗೇವಾಡಿ ಸಮೀಪದ ಮಲ್ಲಪ್ಪನ ಗುಡ್ಡದಲ್ಲಿರುವ ಬೆಟ್ಟದ ಮಲ್ಲಪ್ಪಸ್ವಾಮಿ ದೇವಸ್ಥಾನಕ್ಕೆ ತೆರಳುವ ಪಾರಂಪರಿಕ ದಾರಿಯೇ ಬಂದ್ ಆಗಿದೆ.
ಇದರಂದ ರೈತರು, ಭಕ್ತರು ಮತ್ತು ಸಾರ್ವಜನಿಕರು ಪರದಾಡುವಂತಾಗಿದ್ದು, ತಕ್ಷಣವೇ ಮೂಲ ರಸ್ತೆಯನ್ನು ಅಭಿವೃದ್ಧಿಪಡಿಸಿ ಸಂಚಾರಕ್ಕೆ ಮುಕ್ತಗೊಳಿಸಬೇಕು ಎಂದು ರಾಣಿ ಚನ್ನಮ್ಮ ಅಭಿವೃದ್ಧಿಪರ ಹೋರಾಟ ಸಮಿತಿ ಆಗ್ರಹಿಸಿದೆ.
ಬೆಟ್ಟದ ಮಲ್ಲಪ್ಪಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೂ ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಸಹಕಾರ ನೀಡಬೇಕು ಎಂದು ಒತ್ತಾಯಿಸಿ ಸಮಿತಿಯ ನಿಯೋಗವು ಕುಲಪತಿ ಪ್ರೊ. ತ್ಯಾಗರಾಜ್ ಅವರಿಗೆ ಮನವಿ ಸಲ್ಲಿಸಿತು.
ಬಳಿಕ ಕುಲಪತಿ ಪ್ರೊ. ತ್ಯಾಗರಾಜ್ ಹಾಗೂ ಕುಲಸಚಿವ ಸಂತೋಷ ಕಾಮಗೌಡ ಅವರೊಂದಿಗೆ ಜಂಟಿ ಸಮಾಲೋಚನಾ ಸಭೆ ನಡೆಸಿದ ನಿಯೋಗ, ಕ್ಯಾಂಪಸ್ ಕಾಮಗಾರಿಯಿಂದ ಸ್ಥಳೀಯರಿಗೆ ಎದುರಾಗಿರುವ ತೊಂದರೆಗಳ ಕುರಿತು ಗಮನ ಸೆಳೆಯಿತು.
ದೇವರ ದಾರಿ ಬಂದ್; ರೈತರಿಗೂ ಸಂಕಷ್ಟ: ಹಿರೇಬಾಗೇವಾಡಿ ಬಳಿ ವಿಶ್ವವಿದ್ಯಾಲಯದ ನೂತನ ಕ್ಯಾಂಪಸ್ ನಿರ್ಮಾಣ ಕಾರ್ಯ ವೇಗವಾಗಿ ಸಾಗುತ್ತಿದೆ. ಆದರೆ ಕಾಮಗಾರಿಗಾಗಿ ಅಲ್ಲಲ್ಲಿ ರಸ್ತೆಗಳನ್ನು ಅಗೆದಿದ್ದರಿಂದ ರೈತರ ದೈನಂದಿನ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ.
ವಿಶೇಷವಾಗಿ ಮಲ್ಲಪ್ಪನ ಗುಡ್ಡದ ಮೇಲಿರುವ ಬೆಟ್ಟದ ಮಲ್ಲಪ್ಪಸ್ವಾಮಿ ದೇವಸ್ಥಾನಕ್ಕೆ ಹೋಗುವ ಹಳೆಯ ಮೂಲ ರಸ್ತೆ ಸಂಪೂರ್ಣವಾಗಿ ಬಂದ್ ಆಗಿದೆ. ಇದರಿಂದ ದೇವಸ್ಥಾನಕ್ಕೆ ತೆರಳುವ ಭಕ್ತರು, ಜಮೀನುಗಳಿಗೆ ಹೋಗುವ ರೈತರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ನಿಯೋಗ ವಿವರಿಸಿತು.
ಅಭಿವೃದ್ಧಿ ಕಾಮಗಾರಿಗೆ ಸ್ಥಳೀಯರ ವಿರೋಧವಿಲ್ಲ. ಆದರೆ ಅಭಿವೃದ್ಧಿಯ ಹೆಸರಿನಲ್ಲಿ ಜನರು ದಶಕಗಳಿಂದ ಬಳಸುತ್ತಿರುವ ದಾರಿಯನ್ನೇ ಮುಚ್ಚುವುದು ಸರಿಯಲ್ಲ. ದೇವಸ್ಥಾನಕ್ಕೆ ಸುಗಮ ಸಂಪರ್ಕ ರಸ್ತೆ ನಿರ್ಮಿಸಿ, ರೈತರ ಸಂಚಾರಕ್ಕೂ ಅನುಕೂಲ ಕಲ್ಪಿಸಬೇಕು ಎಂದು ಮುಖಂಡರು ಒತ್ತಾಯಿಸಿದರು.
ಜೀರ್ಣೋದ್ಧಾರಕ್ಕೂ ನೆರವು ಕೇಳಿದ ನಿಯೋಗ: ಬೆಟ್ಟದ ಮಲ್ಲಪ್ಪಸ್ವಾಮಿ ದೇವಸ್ಥಾನವು ಸುತ್ತಮುತ್ತಲಿನ ಗ್ರಾಮಸ್ಥರ ಆರಾಧ್ಯ ತಾಣವಾಗಿದೆ. ದೇವಸ್ಥಾನವು ಜೀರ್ಣಾವಸ್ಥೆಯಲ್ಲಿದ್ದು, ಅದರ ಪುನರುಜ್ಜೀವನ ಮತ್ತು ಅಭಿವೃದ್ಧಿ ಕಾರ್ಯಕ್ಕೆ ವಿಶ್ವವಿದ್ಯಾಲಯದ ವತಿಯಿಂದ ಅಗತ್ಯ ಸಹಕಾರ ನೀಡಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.
ದೇವಸ್ಥಾನಕ್ಕೆ ರಸ್ತೆ, ಕುಡಿಯುವ ನೀರು, ವಿದ್ಯುತ್ ಹಾಗೂ ಇತರ ಮೂಲಸೌಕರ್ಯಗಳನ್ನು ಕಲ್ಪಿಸಿದರೆ ಈ ಪ್ರದೇಶ ಧಾರ್ಮಿಕ ಮತ್ತು ಪ್ರವಾಸಿ ತಾಣವಾಗಿಯೂ ಅಭಿವೃದ್ಧಿ ಹೊಂದಲಿದೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.
ಮನವಿಗೆ ಸ್ಪಂದಿಸಿದ ಕುಲಪತಿ ಪ್ರೊ. ತ್ಯಾಗರಾಜ್ ಮತ್ತು ಕುಲಸಚಿವ ಸಂತೋಷ ಕಾಮಗೌಡ ಅವರು, ದೊಡ್ಡ ಪ್ರಮಾಣದ ಅಭಿವೃದ್ಧಿ ಕಾಮಗಾರಿಗಳ ಸಂದರ್ಭದಲ್ಲಿ ಕೆಲವು ತಾತ್ಕಾಲಿಕ ಸಮಸ್ಯೆಗಳು ಎದುರಾಗುವುದು ಸಹಜ. ಆದರೆ ದೇವಸ್ಥಾನದ ರಸ್ತೆ ಬಂದ್ ಆಗಿರುವ ವಿಷಯ ಇದೀಗ ಗಮನಕ್ಕೆ ಬಂದಿದ್ದು, ಸ್ಥಳ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಹೊಸ ಕ್ಯಾಂಪಸ್‌ಗೆ ಶೀಘ್ರದಲ್ಲೇ ವಿಶ್ವವಿದ್ಯಾಲಯದ ವಿಭಾಗಗಳ ಸ್ಥಳಾಂತರ ಪ್ರಕ್ರಿಯೆ ಆರಂಭವಾಗಲಿದೆ. ಕುಡಿಯುವ ನೀರು, ವಸತಿನಿಲಯ, ರಸ್ತೆ ಸೇರಿದಂತೆ ಅಗತ್ಯ ಮೂಲಸೌಕರ್ಯಗಳ ಅಭಿವೃದ್ಧಿಗೆ ವಿಶ್ವವಿದ್ಯಾಲಯ ಆದ್ಯತೆ ನೀಡಿದೆ. ಸ್ಥಳೀಯ ರೈತರು ಮತ್ತು ಸಾರ್ವಜನಿಕರು ಅಭಿವೃದ್ಧಿ ಕಾರ್ಯಕ್ಕೆ ಸಹಕಾರ ನೀಡಬೇಕು ಎಂದು ಕೋರಿದರು.
ʻಕಿತ್ತೂರು ರಾಣಿ ಚನ್ನಮ್ಮ ವಿವಿ’ ಹೆಸರಿಗೆ ಸ್ವಾಗತ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯವನ್ನು ʻಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ’ ಎಂದು ಮರುನಾಮಕರಣ ಮಾಡಿದ ರಾಜ್ಯ ಸರ್ಕಾರದ ಕ್ರಮವನ್ನು ನಿಯೋಗ ಸ್ವಾಗತಿಸಿತು.
ಈ ಮರುನಾಮಕರಣಕ್ಕೆ ಸಹಕರಿಸಿದ ಸರ್ಕಾರ, ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರು, ಕುಲಪತಿ, ಕುಲಸಚಿವರು ಹಾಗೂ ಅಧಿಕಾರಿ ವರ್ಗಕ್ಕೆ ಅಭಿನಂದನೆ ಸಲ್ಲಿಸಲಾಯಿತು.
ಸಭೆಯಲ್ಲಿ ರೈತ ಮುಖಂಡ ಬಿ.ಎಸ್. ಗಾಣಗಿ, ವಿಶ್ವವಿದ್ಯಾಲಯ ಅಭಿವೃದ್ಧಿಪರ ಹೋರಾಟ ಸಮಿತಿ ಸಂಚಾಲಕ ಮಂಜುನಾಥ ವಸ್ತ್ರದ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಸಂಜಯ ದೇಸಾಯಿ, ರಾಜು ಪೋಲೆಷಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.





















