SK Home Ad
Home ಸುದ್ದಿ ದೇಶ ಮಹಾರಾಷ್ಟ್ರದಲ್ಲಿ ಮಳೆ ಅಬ್ಬರ: 13 ಜನ ಸಾವು, ರೆಡ್ ಅಲರ್ಟ್ ಜಾರಿ

ಮಹಾರಾಷ್ಟ್ರದಲ್ಲಿ ಮಳೆ ಅಬ್ಬರ: 13 ಜನ ಸಾವು, ರೆಡ್ ಅಲರ್ಟ್ ಜಾರಿ

0
125

ಮುಂಬೈ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ಮುಂಬೈ, ಪಾಲ್ಘರ್ ಮತ್ತು ರಾಯಗಡ್ ಜಿಲ್ಲೆಗಳಲ್ಲಿ ಕಳೆದ ಮೂರರಿಂದ ನಾಲ್ಕು ದಿನಗಳಲ್ಲಿ ಮಳೆ ಸಂಬಂಧಿತ ಅವಘಡಗಳಲ್ಲಿ 13 ಜನರು ಮೃತಪಟ್ಟಿದ್ದಾರೆ ಎಂದು ರಾಜ್ಯದ ವಿಪತ್ತು ನಿರ್ವಹಣಾ ಸಚಿವ ಗಿರೀಶ್ ಮಹಾಜನ್ ತಿಳಿಸಿದ್ದಾರೆ.

ಸೋಮವಾರ ವಿಧಾನ ಪರಿಷತ್‌ನಲ್ಲಿ ಮಾತನಾಡಿದ ಸಚಿವರು, ಈ ಮೂರು ಜಿಲ್ಲೆಗಳಲ್ಲಿ ದಾಖಲೆ ಪ್ರಮಾಣದ ಮಳೆಯಾಗಿದ್ದು, ಪ್ರವಾಹ, ಭೂಕುಸಿತ, ಗೋಡೆ ಕುಸಿತ ಹಾಗೂ ಇತರ ಮಳೆ ಸಂಬಂಧಿತ ಅವಘಡಗಳಿಂದ ಜೀವಹಾನಿ ಸಂಭವಿಸಿದೆ ಎಂದು ಮಾಹಿತಿ ನೀಡಿದರು.

ಭಾರತೀಯ ಹವಾಮಾನ ಇಲಾಖೆ ಮುಂಬೈ ಸೇರಿದಂತೆ ಸುತ್ತಮುತ್ತಲಿನ ಹಲವು ಜಿಲ್ಲೆಗಳಿಗೆ ʻರೆಡ್ ಅಲರ್ಟ್ʼ ಘೋಷಿಸಿದ್ದು, ಮುಂದಿನ ಕೆಲವು ಗಂಟೆಗಳು ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಿದೆ.

ಭಾರೀ ಮಳೆಯಿಂದ ಮುಂಬೈ–ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಭೂಕುಸಿತ ಸಂಭವಿಸಿದ್ದು, ಕೆಲಕಾಲ ಸಂಚಾರ ಸ್ಥಗಿತಗೊಂಡಿತ್ತು. ರೈಲು ಹಾಗೂ ವಿಮಾನ ಸಂಚಾರದಲ್ಲೂ ವ್ಯತ್ಯಯ ಉಂಟಾಗಿದ್ದು, ಅನೇಕ ಪ್ರದೇಶಗಳಲ್ಲಿ ರಸ್ತೆ ಜಲಾವೃತಗೊಂಡಿವೆ.

ಮುನ್ನೆಚ್ಚರಿಕಾ ಕ್ರಮವಾಗಿ ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ತಂಡಗಳನ್ನು ನಿಯೋಜಿಸಲಾಗಿದ್ದು, ಸೇನೆ ಮತ್ತು ನೌಕಾಪಡೆಯನ್ನೂ ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. ನಾಗರಿಕರು ಅಗತ್ಯವಿಲ್ಲದಿದ್ದರೆ ಮನೆಯಿಂದ ಹೊರಬರಬಾರದು ಎಂದು ಸರ್ಕಾರ ಮನವಿ ಮಾಡಿದೆ.