SK Home Ad
Home ಸುದ್ದಿ ರಾಜ್ಯ ಕಾಂಗ್ರೆಸ್‌ಗೆ ಶಾಕ್: ಸತೀಶ್ ಜಾರಕಿಹೊಳಿ ಆಪ್ತ ಸದಾಶಿವ BJP ಸೇರ್ಪಡೆ

ಕಾಂಗ್ರೆಸ್‌ಗೆ ಶಾಕ್: ಸತೀಶ್ ಜಾರಕಿಹೊಳಿ ಆಪ್ತ ಸದಾಶಿವ BJP ಸೇರ್ಪಡೆ

0
141

ಬೆಳಗಾವಿ ಜಿಲ್ಲೆಯ ಉದ್ಯಮಿ ಹಾಗೂ ಹಾಲುಮತ ಸಮಾಜದ ಮುಖಂಡ ಸದಾಶಿವ ದೇಶಿಂಗೆ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದಾರೆ. ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಕ್ಷದ ಬಾವುಟ ನೀಡಿ ಅವರನ್ನು ಬರಮಾಡಿಕೊಳ್ಳಲಾಯಿತು.

ಬೆಂಗಳೂರು: ಬೆಳಗಾವಿ ಜಿಲ್ಲೆಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯೊಂದರಲ್ಲಿ, ಕಾಂಗ್ರೆಸ್‌ನ ಪ್ರಮುಖ ಮುಖಂಡ ಹಾಗೂ ಸಚಿವ ಸತೀಶ್ ಜಾರಕಿಹೊಳಿ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಹಿರಿಯ ಮುಖಂಡ ಸದಾಶಿವ ದೇಶಿಂಗೆ ಅವರು ಕಾಂಗ್ರೆಸ್ ತೊರೆದು ಅಧಿಕೃತವಾಗಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಸೇರಿದ್ದಾರೆ.

ನಗರದ ಮಲ್ಲೇಶ್ವರದಲ್ಲಿರುವ ಜಗನ್ನಾಥ ಭವನದಲ್ಲಿನ ರಾಜ್ಯ ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಪಕ್ಷದ ಬಾವುಟ ನೀಡಿ ಹಾಗೂ ಕಂಬಳಿ ಹೊದಿಸಿ ಸದಾಶಿವ ದೇಶಿಂಗೆ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು.

ಇದನ್ನೂ ಓದಿ: ಅಪ್ರಾಪ್ತ ಬಾಲಕಿ ದೂರು: POCSO ಪ್ರಕರಣದಲ್ಲಿ PSI ಬಂಧನ!

ಹಲವು ನಾಯಕರು ಭಾಗಿ : ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಶಾಸಕರಾದ ಬೈರತಿ ಬಸವರಾಜು, ದುರ್ಯೋಧನ ಐಹೊಳೆ, ಬಸವರಾಜ ಮತ್ತಿಮಾಡು, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಸೇರಿದಂತೆ ಪಕ್ಷದ ಹಲವು ಹಿರಿಯ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

‘ಬಿಜೆಪಿಗೆ ಆನೆಬಲ ಬಂದಂತಾಗಿದೆ’ : ಕಾರ್ಯಕ್ರಮದ ಬಳಿಕ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಸದಾಶಿವ ದೇಶಿಂಗೆ ಅವರು ಕುರುಬ ಸಮಾಜದಲ್ಲಿ ಪ್ರಭಾವಿ ನಾಯಕರು ಎಂದು ಬಣ್ಣಿಸಿದರು. “ರಾಯಬಾಗ ಸೇರಿದಂತೆ ಬೆಳಗಾವಿ ಭಾಗದಲ್ಲಿ ಸದಾಶಿವ ದೇಶಿಂಗೆ ಅವರಿಗೆ ಉತ್ತಮ ಜನಬೆಂಬಲವಿದೆ. ಅವರ ಬಿಜೆಪಿ ಸೇರ್ಪಡೆಯಿಂದ ಉತ್ತರ ಕರ್ನಾಟಕ ಹಾಗೂ ಕಿತ್ತೂರು ಕರ್ನಾಟಕ ಭಾಗದಲ್ಲಿ ಪಕ್ಷಕ್ಕೆ ಆನೆಬಲ ಬಂದಂತಾಗಿದೆ,” ಎಂದು ವಿಜಯೇಂದ್ರ ಅಭಿಪ್ರಾಯಪಟ್ಟರು.

ಇದನ್ನೂ ಓದಿ: ಬಸ್ ಲೈಟ್ ಕೆಟ್ಟರೂ ಕತ್ತಲೆಯಲ್ಲೆ ರಾಜ್ಯ ಹೆದ್ದಾರಿಯಲ್ಲಿ ಸಂಚಾರ

ಪಿ. ರಾಜೀವ್ ಪೋಸ್ಟ್‌ನಲ್ಲಿ ಏನಿದೆ? : ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಂಚಿಕೊಂಡು, ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಉದ್ಯಮಿ ಹಾಗೂ ಹಾಲುಮತ ಸಮಾಜದ ಯುವ ಮುಖಂಡರಾದ ಸದಾಶಿವ ದೇಶಿಂಗೆ ಅವರು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ನೇತೃತ್ವದಲ್ಲಿ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಿದ್ದಾರೆ ಎಂದು ತಿಳಿಸಿದ್ದಾರೆ.

ಅವರ ಸಾಮಾಜಿಕ ಸೇವೆ, ಸಂಘಟನಾ ಸಾಮರ್ಥ್ಯ ಹಾಗೂ ಯುವಜನರಲ್ಲಿ ಹೊಂದಿರುವ ಪ್ರಭಾವ ಪಕ್ಷದ ಸಂಘಟನೆಗೆ ಮತ್ತಷ್ಟು ಬಲ ನೀಡಲಿದೆ ಎಂಬ ವಿಶ್ವಾಸವನ್ನು ಪಕ್ಷದ ನಾಯಕರು ವ್ಯಕ್ತಪಡಿಸಿದ್ದಾರೆ ಎಂದು ಅವರು ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಬಂದೂಕು ಹಿಡಿದು ರೀಲ್ಸ್: ಮೂವರು ಯುವಕರ ವಿರುದ್ಧ ಪ್ರಕರಣ

ಸಮಾಜಮುಖಿ ಕಾರ್ಯಗಳಿಂದ ಗುರುತಿಸಿಕೊಂಡ ನಾಯಕ : ಸದಾಶಿವ ದೇಶಿಂಗೆ ಅವರು ಹಲವು ವರ್ಷಗಳಿಂದ ಸಾಮಾಜಿಕ, ಶೈಕ್ಷಣಿಕ ಹಾಗೂ ಜನಪರ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ. ವಿಶೇಷವಾಗಿ ಹಾಲುಮತ ಸಮಾಜದ ಯುವಕರ ಸಂಘಟನೆ, ಸಮಾಜಮುಖಿ ಕಾರ್ಯಕ್ರಮಗಳು ಹಾಗೂ ಜನಸೇವಾ ಚಟುವಟಿಕೆಗಳ ಮೂಲಕ ಬೆಳಗಾವಿ ಜಿಲ್ಲೆಯಲ್ಲಿ ತಮ್ಮದೇ ಆದ ಪ್ರಭಾವ ಬೆಳೆಸಿಕೊಂಡಿದ್ದಾರೆ.

ರಾಯಬಾಗದಲ್ಲಿ ಬಿಜೆಪಿಗೆ ಹೊಸ ಚೈತನ್ಯ? : ರಾಜಕೀಯ ವಲಯದ ವಿಶ್ಲೇಷಕರ ಪ್ರಕಾರ, ಸದಾಶಿವ ದೇಶಿಂಗೆ ಅವರ ಸೇರ್ಪಡೆಯಿಂದ ರಾಯಬಾಗ ಹಾಗೂ ಬೆಳಗಾವಿ ಜಿಲ್ಲೆಯ ಕೆಲವು ಭಾಗಗಳಲ್ಲಿ ಬಿಜೆಪಿ ಸಂಘಟನೆಗೆ ಬಲ ಸಿಗುವ ಸಾಧ್ಯತೆ ಇದೆ. ಹಾಲುಮತ ಹಾಗೂ ಕುರುಬ ಸಮುದಾಯದಲ್ಲಿ ಅವರ ಪ್ರಭಾವ ಪಕ್ಷದ ವಿಸ್ತರಣೆಗೆ ನೆರವಾಗಬಹುದು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ: Pan India ಹೆಜ್ಜೆ ಇಟ್ಟ ರಾಜ್ : ಹುಟ್ಟುಹಬ್ಬದಂದೇ ಸರ್ಪ್ರೈಸ್ ‘ಸೆಯಾನ್’

ಈ ಕಾರ್ಯಕ್ರಮದಲ್ಲಿ ಬಿಜೆಪಿ ಪಕ್ಷದ ಹಿರಿಯ ನಾಯಕರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದು, ಸದಾಶಿವ ದೇಶಿಂಗೆ ಅವರನ್ನು ಆತ್ಮೀಯವಾಗಿ ಪಕ್ಷಕ್ಕೆ ಸ್ವಾಗತಿಸಿದರು.