SK Home Ad
Home ನಮ್ಮ ಜಿಲ್ಲೆ ಉಡುಪಿ ಉಡುಪಿ: ₹70 ಲಕ್ಷ ವಂಚನೆ, ಜೀವ ಬೆದರಿಕೆ ಹಾಕಿದ್ದ ಲೇಡಿ ಬಂಧನ

ಉಡುಪಿ: ₹70 ಲಕ್ಷ ವಂಚನೆ, ಜೀವ ಬೆದರಿಕೆ ಹಾಕಿದ್ದ ಲೇಡಿ ಬಂಧನ

0
109

ರಿಯಲ್ ಎಸ್ಟೇಟ್ ಹೂಡಿಕೆ ಹೆಸರಲ್ಲಿ ₹70 ಲಕ್ಷ ವಂಚನೆ: ಅಶ್ಲೀಲ ವೀಡಿಯೊ ಹೆಸರಿನಲ್ಲಿ ಬೆದರಿಕೆ – ಪ್ರಭಾವಿಗಳ ಖಾಸಗಿ ವೀಡಿಯೊಗಳ ಹೆಸರಿನಲ್ಲಿ ಹಣ ವಸೂಲಿ ಆರೋಪ, ಮಹಿಳೆ ಪೊಲೀಸ್ ಕಸ್ಟಡಿಗೆ

ಉಡುಪಿ: ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಹೂಡಿಕೆ ಮಾಡಿಸುವುದಾಗಿ ನಂಬಿಸಿ ₹70 ಲಕ್ಷ ಹಣ ಪಡೆದು ವಂಚನೆ ಎಸಗಿದ ಆರೋಪದ ಜೊತೆಗೆ, ಅಶ್ಲೀಲ ವೀಡಿಯೊಗಳ ಹೆಸರಿನಲ್ಲಿ ಬ್ಲ್ಯಾಕ್‌ಮೇಲ್ ಮಾಡಿ ಜೀವ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯೊಬ್ಬರನ್ನು ಉಡುಪಿ ನಗರ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಝೀನತ್ ಇಬ್ರಾಹಿಂ ಎಂದು ಗುರುತಿಸಲಾಗಿದ್ದು, ಪಡುಬಿದ್ರಿ ಸಮೀಪದ ಕಂಚಿನಡ್ಕ ಪ್ರದೇಶದಲ್ಲಿ ವಾಸಿಸುತ್ತಿದ್ದ ವೇಳೆ ವಿಶೇಷ ಪೊಲೀಸ್ ತಂಡ ಆಕೆಯನ್ನು ಬಂಧಿಸಿದೆ.

ಇದನ್ನೂ ಓದಿ: ಹಾವೇರಿ ಮೂಲದ ಯೋಧ ಯಶೋಧರ ಕರ್ತವ್ಯದ ವೇಳೆ ಹುತಾತ್ಮ

ರಿಯಲ್ ಎಸ್ಟೇಟ್ ಹೂಡಿಕೆ ಹೆಸರಿನಲ್ಲಿ ವಂಚನೆ : ಉಡುಪಿ ಮೂಲದ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು ನೀಡಿದ ದೂರಿನ ಪ್ರಕಾರ, ಆರೋಪಿ ಝೀನತ್ ಇಬ್ರಾಹಿಂ ಅವರೊಂದಿಗೆ ಪರಿಚಯವಾದ ಬಳಿಕ ಇಬ್ಬರೂ ಸೇರಿ ಉಡುಪಿಯಲ್ಲಿ ರಿಯಲ್ ಎಸ್ಟೇಟ್ ಕಚೇರಿಯನ್ನು ಆರಂಭಿಸಿದ್ದರು. ಈ ವೇಳೆ ಜಮೀನು ಖರೀದಿಗೆ ಹೂಡಿಕೆ ಮಾಡುವುದಾಗಿ ನಂಬಿಸಿ ದೂರುದಾರರಿಂದ ₹70 ಲಕ್ಷ ಹಣ ಪಡೆದಿದ್ದಾಳೆ ಎನ್ನಲಾಗಿದೆ. ಆದರೆ, ಆ ಹಣವನ್ನು ಜಮೀನು ಖರೀದಿಗೆ ಬಳಸದೇ ತನ್ನ ವೈಯಕ್ತಿಕ ಉದ್ದೇಶಗಳಿಗೆ ಬಳಸಿಕೊಂಡು ವಂಚಿಸಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ.

ಅಶ್ಲೀಲ ವೀಡಿಯೊ ಹೆಸರಿನಲ್ಲಿ ಬ್ಲ್ಯಾಕ್‌ಮೇಲ್ : ದೂರುದಾರರು ತಮ್ಮ ಹಣವನ್ನು ಹಿಂದಿರುಗಿಸುವಂತೆ ಕೇಳಿದಾಗ, ಆರೋಪಿ ಅವರ ಹೊಸ ಕಚೇರಿಗೆ ತೆರಳಿ ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದಾಳೆ. ಹಣ ನೀಡದಿದ್ದರೆ ಅತ್ಯಾಚಾರ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಲ್ಲದೆ, ತನ್ನ ಬಳಿ ದೂರುದಾರರ ಅಶ್ಲೀಲ ವೀಡಿಯೊಗಳಿವೆ ಎಂದು ಹೇಳಿ ನಿರಂತರವಾಗಿ ಬ್ಲ್ಯಾಕ್‌ಮೇಲ್ ಮಾಡಿದ್ದಾಳೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದರ ಜೊತೆಗೆ ದೂರುದಾರರ ಪತ್ನಿ ಹಾಗೂ ಮಕ್ಕಳನ್ನು ಅಪಹರಿಸಿ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿರುವ ಗಂಭೀರ ಆರೋಪವೂ ದಾಖಲಾಗಿದೆ.

ಇದನ್ನೂ ಓದಿ: KR ಸರ್ಕಲ್‌ನಲ್ಲಿ ಎರಡು BMTC ಬಸ್‌ಗಳ ನಡುವೆ ಸರಣಿ ಅಪಘಾತ

ಪ್ರಭಾವಿಗಳ ಖಾಸಗಿ ಮಾಹಿತಿ ಪತ್ತೆ : ದೂರುದಾರರು ತಮ್ಮ ಹಳೆಯ ಕಚೇರಿಯನ್ನು ಮುಚ್ಚುವ ವೇಳೆ ಅಲ್ಲಿದ್ದ ಕೆಲವು ರಹಸ್ಯ ಕಡತಗಳು ಹಾಗೂ ಪೆನ್‌ಡ್ರೈವ್‌ಗಳು ಪತ್ತೆಯಾಗಿದ್ದು, ಅವುಗಳಲ್ಲಿ ಹಲವು ಪ್ರಭಾವಿ ವ್ಯಕ್ತಿಗಳ ಖಾಸಗಿ ಹಾಗೂ ಅಶ್ಲೀಲ ಛಾಯಾಚಿತ್ರಗಳು ಮತ್ತು ವೀಡಿಯೊಗಳು ಇದ್ದವು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಮಾಹಿತಿಯನ್ನೂ ಪೊಲೀಸರು ತನಿಖೆಯ ಭಾಗವಾಗಿ ಪರಿಶೀಲಿಸುತ್ತಿದ್ದಾರೆ.

ವಂಚನೆ ಜಾಲದ ಶಂಕೆ : ದೂರುದಾರರ ಪ್ರಕಾರ, ಸಬೀನಾ ಇಲಿಯಾಸ್ ಸೇರಿದಂತೆ ಇತರ ಕೆಲವರು ಆರೋಪಿಯೊಂದಿಗೆ ಸೇರಿ ಬ್ಲ್ಯಾಕ್‌ಮೇಲ್ ಮೂಲಕ ಅಕ್ರಮವಾಗಿ ಹಣ ವಸೂಲಿ ಮಾಡುವ ಜಾಲವನ್ನು ನಡೆಸುತ್ತಿರುವ ಶಂಕೆಯಿದ್ದು, ಈ ಸಂಬಂಧವೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಆಸ್ಪತ್ರೆಗೆ ದಾಖಲು

ವಿಶೇಷ ತಂಡದಿಂದ ಬಂಧನ : ಪ್ರಕರಣ ದಾಖಲಾದ ಬಳಿಕ ಉಡುಪಿ ನಗರ ಪೊಲೀಸ್ ಠಾಣೆಯ ಪಿಎಸ್‌ಐ ಭರತೇಶ್ ಕಂಕಣವಾಡಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿತ್ತು. ತನಿಖೆಯ ವೇಳೆ ಜುಲೈ 2ರಂದು ಪಡುಬಿದ್ರಿ ಸಮೀಪದ ಕಂಚಿನಡ್ಕ ಮಸೀದಿ ಬಳಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಆರೋಪಿ ಝೀನತ್ ಇಬ್ರಾಹಿಂ ಅವರನ್ನು ಬಂಧಿಸಲಾಯಿತು. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆಗೆ ಐದು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.

ಸಾರ್ವಜನಿಕರಿಗೆ ಪೊಲೀಸರ ಮನವಿ : ಇದೇ ರೀತಿಯಲ್ಲಿ ಆರೋಪಿಯಿಂದ ಮೋಸ, ವಂಚನೆ ಅಥವಾ ಬ್ಲ್ಯಾಕ್‌ಮೇಲ್‌ಗೆ ಒಳಗಾಗಿರುವವರು ಇದ್ದರೆ ಉಡುಪಿ ನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.