SK Home Ad
Home ನಮ್ಮ ಜಿಲ್ಲೆ ಹಾಸನ ಎಸ್‌ಐಆರ್‌ ಕುರಿತು ಗಾಬರಿ ದೂರವಾಗಿದೆ: ಬಾನು ಮುಷ್ತಾಕ್

ಎಸ್‌ಐಆರ್‌ ಕುರಿತು ಗಾಬರಿ ದೂರವಾಗಿದೆ: ಬಾನು ಮುಷ್ತಾಕ್

0
40

ಹಾಸನ: ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್‌) ಕುರಿತು ತಮಗಿದ್ದ ಗೊಂದಲ ಹಾಗೂ ಗಾಬರಿ ಇದೀಗ ನಿವಾರಣೆಯಾಗಿದೆ. ಆಧಾರ್‌ ಕಾರ್ಡ್ ಮತ್ತು ಮತದಾರರ ಗುರುತಿನ ಚೀಟಿ ಇದ್ದರೆ ಸಾಕು, ಎಸ್‌ಐಆರ್‌ ಅರ್ಜಿ ನಮೂನೆಯನ್ನು ಸುಲಭವಾಗಿ ಭರ್ತಿ ಮಾಡಬಹುದು ಎಂದು ಅಂತಾರಾಷ್ಟ್ರೀಯ ಬೂಕರ್‌ ಪ್ರಶಸ್ತಿ ಪುರಸ್ಕೃತ ಸಾಹಿತಿ ಬಾನು ಮುಷ್ತಾಕ್ ತಿಳಿಸಿದ್ದಾರೆ.

ನಗರದ ಪೆನ್ನನ್ ಮೊಹಲ್ಲಾದಲ್ಲಿರುವ ಅವರ ನಿವಾಸಕ್ಕೆ ಜಿಲ್ಲಾಧಿಕಾರಿ, ತಹಶೀಲ್ದಾರರು ಹಾಗೂ ಬಿಎಲ್‌ಒಗಳು ಭೇಟಿ ನೀಡಿ ಎಸ್‌ಐಆರ್‌ ಅರ್ಜಿ ನಮೂನೆ ನೀಡಿದ ಬಳಿಕ ಅದನ್ನು ಭರ್ತಿ ಮಾಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಎಸ್‌ಐಆರ್‌ ಪ್ರಕ್ರಿಯೆ ಕುರಿತು ಮಾಧ್ಯಮಗಳಲ್ಲಿ ನಡೆಯುತ್ತಿದ್ದ ಪರ-ವಿರೋಧದ ಚರ್ಚೆಗಳು ಹಾಗೂ ವಿಶ್ಲೇಷಣೆಗಳನ್ನು ಗಮನಿಸಿ ತಮಗೆ ಸಾಕಷ್ಟು ಗೊಂದಲ ಉಂಟಾಗಿತ್ತು. ಅಗತ್ಯ ದಾಖಲೆಗಳನ್ನು ಹೊಂದಿಸಿಕೊಳ್ಳಲು ಕಳೆದ ಎರಡು ದಿನಗಳಿಂದ ಪರದಾಡಿದ್ದೆ. ಆದರೆ, ಇಂದು ಜಿಲ್ಲಾಧಿಕಾರಿ ಹಾಗೂ ಅಧಿಕಾರಿಗಳು ಮನೆಗೆ ಬಂದು ಸಂಪೂರ್ಣ ಮಾಹಿತಿ ನೀಡಿದ ನಂತರ ಎಲ್ಲ ಅನುಮಾನಗಳು ದೂರವಾದವು ಎಂದು ಹೇಳಿದರು.

ಅಧಿಕಾರಿಗಳ ಮಾರ್ಗದರ್ಶನದಂತೆ ಅರ್ಜಿ ನಮೂನೆಯ ಕಾಲಂಗಳನ್ನು ಸುಲಭವಾಗಿ ಭರ್ತಿ ಮಾಡಿದ್ದು, ಸಾಮಾನ್ಯ ಜನರು ಕೂಡ ಆತಂಕಪಡುವ ಅಗತ್ಯವಿಲ್ಲ. ಆಧಾರ್‌ ಕಾರ್ಡ್ ಹಾಗೂ ಮತದಾರರ ಗುರುತಿನ ಚೀಟಿ ಇದ್ದರೆ ಅರ್ಜಿ ಸಲ್ಲಿಸುವುದು ಕಷ್ಟಕರವಲ್ಲ ಎಂದು ಅವರು ತಿಳಿಸಿದರು.