ಬೆಂಗಳೂರು: ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ವಿರುದ್ಧ ಗಂಭೀರ ಆರೋಪವನ್ನ ಮಾಡಿದ್ದಾರೆ. ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಭಾರೀ ಅಕ್ರಮ ನಡೆಯುತ್ತಿದೆ ಎಂದು ದೂರಿದ್ದಾರೆ. ಆಡಳಿತಾರೂಢ ಸರ್ಕಾರವು ಚುನಾವಣಾ ಅಧಿಕಾರಿಗಳ ಮೇಲೆ ಪ್ರಭಾವ ಬೀರಿ ಅಕ್ರಮಗಳಿಗೆ ಪ್ರೇರಣೆ ನೀಡುತ್ತಿದೆ ಎಂದು ನೇರವಾಗಿ ಚಾಟಿ ಬೀಸಿದ್ದಾರೆ.
ಬಾಂಗ್ಲಾದೇಶದಿಂದ ಅಕ್ರಮವಾಗಿ ಬಂದವರನ್ನು ಇಲ್ಲಿ ಪೋಷಿಸಲಾಗುತ್ತಿದ್ದು, ಅವರನ್ನು ವ್ಯವಸ್ಥಿತವಾಗಿ ಮತದಾರರ ಪಟ್ಟಿಗೆ ಸೇರಿಸಲಾಗುತ್ತಿದೆ ಎಂದು ಕುಮಾರಸ್ವಾಮಿ ಹೇಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಖ್ಯವಾಗಿ ರಾಮನಗರ ಮತ್ತು ಚನ್ನಪಟ್ಟಣ ಭಾಗದಲ್ಲಿ ಸುಮಾರು 8 ರಿಂದ 10 ಸಾವಿರಕ್ಕೂ ಹೆಚ್ಚು ಬಾಂಗ್ಲಾದೇಶ ಮೂಲದ ನಿವಾಸಿಗಳಿದ್ದು, ಆ ಎಲ್ಲರಿಗೂ ನಕಲಿ ಗುರುತಿನ ಚೀಟಿಗಳನ್ನು (ಫೇಕ್ ಐಡಿ) ಸೃಷ್ಟಿಸಿಕೊಡಲಾಗುತ್ತಿದೆ. ಈ ಕಳ್ಳ ಮತದಾರರನ್ನು ಅಧಿಕೃತ ಮತದಾರರನ್ನಾಗಿ ಪರಿವರ್ತಿಸುವ ದೊಡ್ಡ ಜಾಲವೇ ಕೆಲಸ ಮಾಡುತ್ತಿದೆ ಎಂದು ಹೆಚ್‌ಡಿಕೆ ಆತಂಕ ವ್ಯಕ್ತಪಡಿಸಿದ್ದಾರೆ.
ಹಾಗೇ ನಿಯಮಗಳ ಪ್ರಕಾರ ಬೂತ್ ಮಟ್ಟದ ಅಧಿಕಾರಿಗಳು (BLOಗಳು) ಮನೆ ಮನೆಗೆ ಭೇಟಿ ನೀಡಿ ಮತದಾರರ ಪರಿಶೀಲನೆ ನಡೆಸಬೇಕು. ಆದ್ರೆ ಪ್ರಸ್ತುತ ಬಿಎಲ್ಓಗಳು ಮನೆಗಳಿಗೆ ಹೋಗುವ ಬದಲು, ಕಲ್ಯಾಣ ಮಂಟಪ ಹಾಗೂ ಚೌಲ್ಟ್ರಿಗಳಲ್ಲಿ ಜನರನ್ನು ಒಟ್ಟಿಗೆ ಕೂರಿಸಿ ನಿಯಮಬಾಹಿರವಾಗಿ ಎಸ್‌ಐಆರ್ ಪ್ರಕ್ರಿಯೆ ನಡೆಸುತ್ತಿದ್ದಾರೆ ಎಂದು ದೂರಿದ್ದಾರೆ. ಈ ಮೂಲಕ ಇಡೀ ಪ್ರಕ್ರಿಯೆಯ ಪಾರದರ್ಶಕತೆಯನ್ನು ಗಾಳಿಗೆ ತೂರಲಾಗಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ನಂತರ ರಾಜ್ಯದಲ್ಲಿ ನಡೆಯುತ್ತಿರುವ ಈ ಎಲ್ಲಾ ಗಂಭೀರ ಲೋಪದೋಷಗಳು ಮತ್ತು ಅಕ್ರಮಗಳ ಬಗ್ಗೆ ಕೇಂದ್ರ ಸಚಿವರು ಈಗಾಗಲೇ ಚುನಾವಣಾ ಆಯೋಗಕ್ಕೆ ಅಧಿಕೃತವಾಗಿ ದೂರು ನೀಡಿದ್ದಾರೆ. ಮುಂಬರುವ ದಿನಗಳಲ್ಲಿ ಇಂತಹ ಅಕ್ರಮ ಮತದಾನ ಪ್ರಕ್ರಿಯೆಗಳು ಚುನಾವಣೆಯ ನಿಷ್ಪಕ್ಷಪಾತ ತನದ ಮೇಲೆ ಪರಿಣಾಮ ಬೀರಲಿದ್ದು, ಚುನಾವಣಾ ಆಯೋಗವು ತಕ್ಷಣವೇ ಮಧ್ಯಪ್ರವೇಶಿಸಬೇಕು. ಈ ನಿಟ್ಟಿನಲ್ಲಿ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹೆಚ್.ಡಿ. ಕುಮಾರಸ್ವಾಮಿ ಆಗ್ರಹಿಸಿದ್ದಾರೆ.






















