ಬೆಂಗಳೂರು: ಕನ್ನಡ ಚಿತ್ರರಂಗದ ಗೋಲ್ಡನ್ ಮೆಗಾ ಸ್ಟಾರ್ ಗಣೇಶ್ ನಾಯಕನಾಗಿ ಚಿತ್ರರಂಗದಲ್ಲಿ ಎರಡು ದಶಕಗಳನ್ನು ಯಶಸ್ವಿಯಾಗಿ ಪೂರೈಸಿರುವ ಸಂಭ್ರಮದಲ್ಲಿದ್ದು, ಇದೇ ಸಂದರ್ಭದಲ್ಲಿ ಅವರ ಬಹುನಿರೀಕ್ಷಿತ “ಬೃಂದಾವಿಹಾರಿ” ಚಿತ್ರದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಘೋಷಿಸಿದೆ. ಖ್ಯಾತ ನಿರ್ಮಾಪಕ ಸಮೃದ್ಧಿ ವಿ. ಮಂಜುನಾಥ್ ನಿರ್ಮಾಣ ಹಾಗೂ ನಿರ್ದೇಶಕ ಶ್ರೀನಿವಾಸರಾಜು ನಿರ್ದೇಶನದಲ್ಲಿ ಮೂಡಿಬಂದಿರುವ ಈ ಸಿನಿಮಾ ಅಕ್ಟೋಬರ್ 16ರಂದು ರಾಜ್ಯಾದ್ಯಂತ ಭರ್ಜರಿಯಾಗಿ ಬಿಡುಗಡೆಯಾಗಲಿದೆ.
ಹಬ್ಬಗಳ ಸಾಲುಸಾಲು ರಜೆಯ ಹಿನ್ನೆಲೆಯಲ್ಲಿ ಚಿತ್ರವನ್ನು ಅಕ್ಟೋಬರ್ 16ರಂದು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದ್ದು, ಇದೇ ಸಮಯದಲ್ಲಿ ಗಣೇಶ್ ಅಭಿಮಾನಿಗಳಿಗೆ ಹಬ್ಬದ ವಿಶೇಷ ಉಡುಗೊರೆಯಾಗಿ ಸಿನಿಮಾ ತೆರೆಗೆ ಬರಲಿದೆ. ಚಿತ್ರದ ಘೋಷಣೆಯೊಂದಿಗೆ ಅಭಿಮಾನಿಗಳಲ್ಲಿ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.
ಇದನ್ನೂ ಓದಿ: ವಾಟ್ಸಾಪ್ Username ವೈಶಿಷ್ಟ್ಯಕ್ಕೆ ಬ್ರೇಕ್ – Metaಗೆ ಕೇಂದ್ರ ನೋಟಿಸ್
ಚಿತ್ರದ ಹಾಡುಗಳು ಈಗಾಗಲೇ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ಮೂಲಕ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆದಿವೆ. ಸಂಗೀತ ನಿರ್ದೇಶಕ ಹೇಶಮ್ ಅಬ್ದುಲ್ ವಹಾಬ್ ಸಂಯೋಜಿಸಿರುವ ಸುಮಧುರ ಗೀತೆಗಳು ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯವಾಗಿದ್ದು, ಗಣೇಶ್ ಅಭಿಮಾನಿಗಳ ಮೆಚ್ಚುಗೆಗೂ ಪಾತ್ರವಾಗಿವೆ.
ಉತ್ತಮ ಕಥಾಹಂದರ ಮತ್ತು ಗುಣಮಟ್ಟದ ನಿರ್ಮಾಣಕ್ಕೆ ಹೆಸರುವಾಸಿಯಾದ ಸಮೃದ್ಧಿ ವಿ. ಮಂಜುನಾಥ್, “ಕೃಷ್ಣಂ ಪ್ರಣಯ ಸಖಿ” ಚಿತ್ರದ ಯಶಸ್ಸಿನ ಬಳಿಕ ಮತ್ತೊಮ್ಮೆ ಗಣೇಶ್ ಹಾಗೂ ಶ್ರೀನಿವಾಸರಾಜು ಅವರ ಕಾಂಬಿನೇಶನ್‌ನಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಆರಂಭದಿಂದಲೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ “ಬೃಂದಾವಿಹಾರಿ” ಚಿತ್ರದ ಮೇಲೆ ಸಿನಿಪ್ರಿಯರು ಹಾಗೂ ಅಭಿಮಾನಿಗಳು ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಇದನ್ನೂ ಓದಿ: ಹೇ ರಾಮ್… ಏಕೆ ಮೂಕನಾದೆ ಪ್ರಭು ಶ್ರೀರಾಮ್!
ಚಿತ್ರದಲ್ಲಿ ಗಣೇಶ್‌ಗೆ ನಾಯಕಿಯರಾಗಿ ದೇವಿಕಾ ಭಟ್ ಹಾಗೂ ಮಾಳವಿಕ ಶರ್ಮ ಅಭಿನಯಿಸಿದ್ದು, ಕನ್ನಡ ಚಿತ್ರರಂಗದ ಅನುಭವಿ ಹಾಗೂ ಹಿರಿಯ ಕಲಾವಿದರ ತಾರಾಬಳಗವೂ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದೆ. ಹಬ್ಬದ ವಾತಾವರಣದಲ್ಲಿ ಬಿಡುಗಡೆಯಾಗಲಿರುವ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆ ಚಿತ್ರತಂಡದಲ್ಲಿದೆ.






















