ಕರ್ನಾಟಕ ಶಾಶ್ವತ ನಿವಾಸ ಪ್ರಮಾಣಪತ್ರಕ್ಕೆ ಹೊಸ ನಿಯಮಗಳು ಜಾರಿ: ಗ್ರಾಮ ಪಂಚಾಯಿತಿ ಮಟ್ಟದಲ್ಲೇ ಸಹಾಯ ಕೌಂಟರ್, ಶಾಶ್ವತ ನಿವಾಸ ಪ್ರಮಾಣಪತ್ರಕ್ಕೆ ಸರ್ಕಾರದ ಹೊಸ ವ್ಯವಸ್ಥೆ – ಸೇವಾ ಸಿಂಧುವಿನಲ್ಲಿ ಆನ್‌ಲೈನ್ ಅರ್ಜಿ ಅವಕಾಶ
ಬೆಂಗಳೂರು : ಕರ್ನಾಟಕದಲ್ಲಿ ಶಾಶ್ವತ ವಾಸಸ್ಥಳ ಪ್ರಮಾಣಪತ್ರ (Permanent Resident Certificate – PRC) ವಿತರಣೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದ್ದು, ಈ ಸಂಬಂಧ ಪ್ರತ್ಯೇಕ ಮಾರ್ಗಸೂಚಿ ಹಾಗೂ ನಿರ್ವಹಣಾ ಚೌಕಟ್ಟನ್ನು ಪ್ರಕಟಿಸಿ ಕಂದಾಯ ಇಲಾಖೆ ಆದೇಶ ಹೊರಡಿಸಿದೆ.
ಹೊಸ ಮಾರ್ಗಸೂಚಿಯ ಪ್ರಕಾರ, ಜಿಲ್ಲಾಧಿಕಾರಿಯಿಂದ ಅಧಿಕೃತಗೊಳಿಸಲಾದ ಉಪ ತಹಸೀಲ್ದಾರ್, ತಹಸೀಲ್ದಾರ್ ಅಥವಾ ಇತರೆ ಅಧಿಕಾರಿಗಳನ್ನು ಶಾಶ್ವತ ನಿವಾಸ ಪ್ರಮಾಣಪತ್ರ ಹಾಗೂ ಡೊಮಿಸೈಲ್ ಪ್ರಮಾಣಪತ್ರ ನೀಡುವ ಪ್ರಾಧಿಕಾರವಾಗಿ ನೇಮಿಸಲಾಗಿದೆ.
ಇದನ್ನೂ ಓದಿ: SIR ಆತಂಕವೇ: ಜೂನ್ 30ರಂದು ಜನರ ಪ್ರಶ್ನೆಗಳಿಗೆ ಜಿಲ್ಲಾಧಿಕಾರಿ ಉತ್ತರ
ಇದಲ್ಲದೆ, ಸಹಾಯಕ ಆಯುಕ್ತರನ್ನು ಮೇಲ್ಮನವಿ ಪ್ರಾಧಿಕಾರವಾಗಿಯೂ, ಜಿಲ್ಲಾಧಿಕಾರಿಯನ್ನು ಪುನರ್ ಪರಿಶೀಲನಾ ಪ್ರಾಧಿಕಾರವಾಗಿಯೂ ನಿಯೋಜಿಸಲಾಗಿದೆ. ಪ್ರಮಾಣಪತ್ರ ನೀಡುವ ಅಧಿಕಾರಿಗಳು ಅಗತ್ಯ ಪರಿಶೀಲನೆ ಹಾಗೂ ವಿಚಾರಣೆ ನಡೆಸಿದ ಬಳಿಕ ಅರ್ಜಿದಾರರು ಕರ್ನಾಟಕದ ನಿಜವಾದ ಹಾಗೂ ಶಾಶ್ವತ ನಿವಾಸಿಗಳಾಗಿದ್ದಾರೆ ಎಂಬುದನ್ನು ಖಚಿತಪಡಿಸಿಕೊಂಡು ಪ್ರಮಾಣಪತ್ರ ವಿತರಿಸಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಪ್ರಮಾಣಪತ್ರ ಪಡೆಯಲು ಅರ್ಹತೆಗಳೇನು? : ರಾಜ್ಯ ಸರ್ಕಾರವು ಶಾಶ್ವತ ನಿವಾಸ ಪ್ರಮಾಣಪತ್ರ ಪಡೆಯಲು ಹಲವು ಮಾನದಂಡಗಳನ್ನು ನಿಗದಿಪಡಿಸಿದೆ. ಅರ್ಜಿದಾರರು ಕರ್ನಾಟಕದಲ್ಲಿ ಜನಿಸಿರಬೇಕು. ಅರ್ಜಿದಾರರು ಅಥವಾ ಅವರ ತಂದೆ, ತಾಯಿ ಅಥವಾ ಕಾನೂನುಬದ್ಧ ಪಾಲಕರು ರಾಜ್ಯದಲ್ಲಿ ನಿರಂತರವಾಗಿ ಕನಿಷ್ಠ 10 ವರ್ಷಗಳ ಕಾಲ ವಾಸವಿರಬೇಕು. ಅರ್ಜಿದಾರರು ಕರ್ನಾಟಕದ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಗಳಲ್ಲಿ ದ್ವಿತೀಯ ಪಿಯುಸಿ, 12ನೇ ತರಗತಿ ಅಥವಾ ತತ್ಸಮಾನ ಹಂತದವರೆಗೆ ಕನಿಷ್ಠ 10 ಶೈಕ್ಷಣಿಕ ವರ್ಷಗಳ ಕಾಲ ವ್ಯಾಸಂಗ ಮಾಡಿರಬೇಕು.
ಇದನ್ನೂ ಓದಿ: ದಾವಣಗೆರೆ: ಜಿಲ್ಲಾಸ್ಪತ್ರೆಯಲ್ಲಿ ಅಕ್ಸಿಜನ್ ಸಿಲಿಂಡರ್ ಸ್ಫೋಟ
ಅರ್ಜಿದಾರರ ತಂದೆ, ತಾಯಿ, ಕಾನೂನುಬದ್ಧ ಪಾಲಕರು ಅಥವಾ ಪತಿ/ಪತ್ನಿಯು ಕರ್ನಾಟಕದಲ್ಲಿ ಸಾಮಾನ್ಯ ಹಾಗೂ ಶಾಶ್ವತ ನಿವಾಸಿಯಾಗಿರಬೇಕು. ಅರ್ಜಿದಾರರು ಅಥವಾ ಅವರ ಕುಟುಂಬವು ರಾಜ್ಯದಲ್ಲಿ ವಸತಿ ಅಥವಾ ಇತರೆ ಸ್ಥಿರಾಸ್ತಿಯ ಮಾಲೀಕತ್ವ ಹೊಂದಿರಬೇಕು ಅಥವಾ ಕಾನೂನುಬದ್ಧ ವಾರಸುದಾರರಾಗಿರಬೇಕು.
ಯಾವ ದಾಖಲೆಗಳನ್ನು ಸಲ್ಲಿಸಬೇಕು?: ಶಾಶ್ವತ ನಿವಾಸ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸುವವರು ಮತದಾರರ ಪಟ್ಟಿ, ಆಧಾರ್ ಕಾರ್ಡ್, ಪಡಿತರ ಚೀಟಿ, ಕಂದಾಯ ದಾಖಲೆಗಳು ಸೇರಿದಂತೆ ಇತರೆ ಸರ್ಕಾರಿ ದಾಖಲೆಗಳನ್ನು ಸಲ್ಲಿಸಬೇಕು. ಈ ದಾಖಲೆಗಳಲ್ಲಿ ಅರ್ಜಿದಾರರು ಅಥವಾ ಅವರ ಪೋಷಕರ ಹೆಸರು ಸಾಮಾನ್ಯ ನಿವಾಸಿಗಳಾಗಿ ದಾಖಲಾಗಿರಬೇಕು. ಅರ್ಜಿದಾರರು ಕರ್ನಾಟಕದಲ್ಲಿ ವಾಸಿಸುವ ವ್ಯಕ್ತಿಯನ್ನು ವಿವಾಹವಾಗಿದ್ದರೆ, ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಹ ಸಲ್ಲಿಸಬೇಕಾಗುತ್ತದೆ.
ಇದನ್ನೂ ಓದಿ: ವಿಜಯೇಂದ್ರರನ್ನು ಕಿಕ್ ಔಟ್ ಮಾಡಿ: ವೈರಲ್ Audio ಸೃಷ್ಟಿಸಿದ ತಲ್ಲಣ
ಗ್ರಾಮ ಮಟ್ಟದಲ್ಲೇ ಸಹಾಯ ಕೌಂಟರ್ : ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಪ್ರತಿ ಗ್ರಾಮ ಪಂಚಾಯಿತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ವಾರ್ಡ್ ಕಚೇರಿಗಳಲ್ಲಿ ಸಹಾಯ ಮತ್ತು ಸೌಲಭ್ಯ ಕೌಂಟರ್‌ಗಳನ್ನು ಸ್ಥಾಪಿಸಲು ಸೂಚಿಸಿದೆ. ಅಟಲ್ ಜನಸ್ನೇಹಿ ಕೇಂದ್ರ, ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್, ಕಾಮನ್ ಸರ್ವೀಸ್ ಸೆಂಟರ್‌ಗಳು (CSC) ಸೇರಿದಂತೆ ಇತರೆ ಅಧಿಕೃತ ಕೇಂದ್ರಗಳ ಮೂಲಕ ಅರ್ಜಿಗಳ ಪ್ರಕ್ರಿಯೆ ನಡೆಸಲಾಗುತ್ತದೆ. ಆದೇಶ ಹೊರಡಿಸಿದ ಒಂದು ವಾರದೊಳಗೆ ಈ ಎಲ್ಲಾ ಕೇಂದ್ರಗಳಲ್ಲಿ ಅಗತ್ಯ ವ್ಯವಸ್ಥೆ ಕಲ್ಪಿಸಬೇಕು ಎಂದು ಸೂಚಿಸಲಾಗಿದೆ.
ಆನ್‌ಲೈನ್ ಮೂಲಕವೂ ಅರ್ಜಿ ಸಲ್ಲಿಕೆ : ಅರ್ಹ ಅಭ್ಯರ್ಥಿಗಳು ಸೇವಾ ಸಿಂಧು ಪೋರ್ಟಲ್, ಅಟಲ್ ಜನಸ್ನೇಹಿ ಕೇಂದ್ರ (AJSK) ಪೋರ್ಟಲ್ ಅಥವಾ ಸರ್ಕಾರ ಅಧಿಸೂಚಿಸುವ ಇತರೆ ಪೋರ್ಟಲ್‌ಗಳ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಇದೇ ವೇಳೆ, ಚುನಾವಣಾ ಆಯೋಗದ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಗೆ ನೆರವಾಗುವ ಉದ್ದೇಶದಿಂದ ರಾಜ್ಯ ಸರ್ಕಾರವು ಶಾಶ್ವತ ನಿವಾಸ ಪ್ರಮಾಣಪತ್ರಗಳನ್ನು ನೀಡಲು ಮುಂದಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ: ರಾಮ ಮಂದಿರ ದೇಣಿಗೆ ಪ್ರಕರಣ: ಆರೋಪಿಗಳ ಪರ ವಾದಿಸಿದರೆ ₹5 ಲಕ್ಷ ದಂಡ
ಅರ್ಹ ಮತದಾರರು SIR ಪ್ರಕ್ರಿಯೆಯಲ್ಲಿ ಭಾಗವಹಿಸಿ ತಮ್ಮ ನೋಂದಣಿಯನ್ನು ಪೂರ್ಣಗೊಳಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ. ಶಾಶ್ವತ ನಿವಾಸ ಪ್ರಮಾಣಪತ್ರಗಳು ಸೇವಾ ಸಿಂಧು ಪೋರ್ಟಲ್ ಮೂಲಕ ಆನ್‌ಲೈನ್ ಹಾಗೂ ಆಫ್‌ಲೈನ್ ಎರಡೂ ಮಾದರಿಯಲ್ಲಿ ಲಭ್ಯವಿರಲಿವೆ ಎಂದು ಅವರು ತಿಳಿಸಿದ್ದಾರೆ.






















