SK Home Ad
Home ಸಿನಿ ಮಿಲ್ಸ್ ಇತಿಹಾಸ, ಪರಂಪರೆ, ಪರಿಸರದ ಸಂದೇಶ ಹೊತ್ತ ‘ಕೆಂಪಾಂಬುಧಿ’

ಇತಿಹಾಸ, ಪರಂಪರೆ, ಪರಿಸರದ ಸಂದೇಶ ಹೊತ್ತ ‘ಕೆಂಪಾಂಬುಧಿ’

0
60

ನೆನಪಿರಲಿ ಪ್ರೇಮ್ ನಟನೆಯ ಪ್ರಶಾಂತ್ ಪ್ರಕಾಶ್ ಫೌಂಡೇಶನ್ ಪ್ರಸ್ತುತಪಡಿಸುತ್ತಿರುವ ‘ಕೆಂಪಾಂಬುಧಿ’ ಟೀಸರ್ ಬಿಡುಗಡೆ; ನಾಡಪ್ರಭು ಕೆಂಪೇಗೌಡರ ಬದುಕು ಬೆಳ್ಳಿತೆರೆಗೆ

ಬೆಂಗಳೂರು: ಬೆಂಗಳೂರು ನಗರದ ನಿರ್ಮಾತೃ, ನಾಡಪ್ರಭು ಕೆಂಪೇಗೌಡರ ಜೀವನ, ದೂರದೃಷ್ಟಿ ಹಾಗೂ ಪರಂಪರೆಯನ್ನು ಆಧರಿಸಿದ ಬಹುನಿರೀಕ್ಷಿತ ‘ಕೆಂಪಾಂಬುಧಿ’ ಚಿತ್ರದ ಟೀಸರ್ ಬಿಡುಗಡೆಯಾಗಿ ಸಿನಿಪ್ರಿಯರ ಗಮನ ಸೆಳೆದಿದೆ. ಐತಿಹಾಸಿಕ ಹಿನ್ನೆಲೆಯೊಂದಿಗೆ ನಿರ್ಮಾಣವಾಗುತ್ತಿರುವ ಈ ಚಿತ್ರವು ಕೇವಲ ಒಂದು ಚಲನಚಿತ್ರವಷ್ಟೇ ಅಲ್ಲದೆ, ಬೆಂಗಳೂರಿನ ಇತಿಹಾಸ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಮಹತ್ವದ ಪ್ರಯತ್ನವಾಗಿದೆ.

‘ಪ್ರಶಾಂತ್ ಪ್ರಕಾಶ್ ಫ್ಯಾಮಿಲಿ ಫೌಂಡೇಶನ್’ ಪ್ರಸ್ತುತಪಡಿಸುತ್ತಿರುವ ಈ ಚಿತ್ರಕ್ಕೆ ‘ಹೊಂಬಾಳೆ ಮ್ಯೂಸಿಕ್’ ಬೆಂಬಲ ನೀಡಿದೆ. ಚಿತ್ರದಲ್ಲಿ ನಟ ‘ನೆನಪಿರಲಿ’ ಪ್ರೇಮ್ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದು, ಅವರೊಂದಿಗೆ ಮೇಘನಾ ಗಾಂವ್ಕರ್, ರಾಜೇಶ್ ನಟರಂಗ, ಸುಧಾ ಬೆಳವಾಡಿ, ನಾಗಶ್ರೀ ಬೇಗಾರ್, ಸಂಯುಕ್ತಾ ಹೊರನಾಡು, ರಾಜೇಂದ್ರ ಕಾರಂತ್, ರಮೇಶ್ ಪಂಡಿತ್, ನಟರಾಜ್ ರಾವ್ ಹಾಗೂ ಬಿ.ಎಲ್. ರವಿಕುಮಾರ್ ಸೇರಿದಂತೆ ಹಲವು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ರಮೇಶ್ ಬೇಗಾರ್ ನಿರ್ದೇಶನ ಮಾಡಿದ್ದಾರೆ.

ಇದನ್ನೂ ಓದಿ: ಗಂಡು ಮಗು ಜನಿಸಿದ ಸಂಭ್ರಮಕ್ಕೆ ಪಾರ್ಟಿ ಕೇಳಿದ್ದಕ್ಕೆ ಸ್ನೇಹಿತನ ಕೊಲೆ

ಪ್ರಸಿದ್ಧ ಸಾಹಿತಿ ಜಾಣಗೆರೆ ವೆಂಕಟರಾಮಯ್ಯ ಅವರ ಜನಪ್ರಿಯ ಕಾದಂಬರಿಯನ್ನು ಆಧರಿಸಿ ಈ ಸಿನಿಮಾ ರೂಪುಗೊಳ್ಳುತ್ತಿದೆ. ಇತಿಹಾಸ, ಜನಪದ, ದಂತಕಥೆಗಳು ಮತ್ತು ಸಾಂಸ್ಕೃತಿಕ ನೆನಪುಗಳನ್ನು ಒಗ್ಗೂಡಿಸಿ ಚಿತ್ರವನ್ನು ಸಿದ್ಧಪಡಿಸಲಾಗಿದೆ ಎಂದು ಚಿತ್ರತಂಡ ತಿಳಿಸಿದೆ.

ಚಿತ್ರದಲ್ಲಿ ನಾಡಪ್ರಭು ಕೆಂಪೇಗೌಡರ ದೂರದೃಷ್ಟಿಯ ಆಡಳಿತ, ಜನಪರ ಚಿಂತನೆಗಳು ಹಾಗೂ ಪರಿಸರದ ಬಗ್ಗೆ ಅವರು ಹೊಂದಿದ್ದ ಕಾಳಜಿಯನ್ನು ತೆರೆ ಮೇಲೆ ಕಟ್ಟಿಕೊಡಲಾಗುತ್ತಿದೆ. ವೇಗವಾಗಿ ಬೆಳೆಯುತ್ತಿರುವ ಬೆಂಗಳೂರಿನ ಮಧ್ಯೆ ನಿಧಾನವಾಗಿ ಮರೆಯಾಗುತ್ತಿರುವ ‘ಗಾರ್ಡನ್ ಸಿಟಿ’ಯ ಹಸಿರು ವೈಭವವನ್ನು ಮತ್ತೆ ನೆನಪಿಸುವ ಪ್ರಯತ್ನವೂ ಈ ಚಿತ್ರದಲ್ಲಿದೆ.

ಇದನ್ನೂ ಓದಿ: ಪ್ರೇಮ ವೈಫಲ್ಯ: ಚಲಿಸುತ್ತಿದ್ದ ಕಾರಿನಲ್ಲಿ ಸ್ಫೋಟ, ಯುವಕ ಸಜೀವ ದಹನ, ಯುವತಿ ಗಂಭೀರ ಗಾಯ

ಈ ಕುರಿತು ಪ್ರತಿಕ್ರಿಯಿಸಿರುವ ಹೊಂಬಾಳೆ ಫಿಲ್ಮ್ಸ್ ಸಂಸ್ಥಾಪಕ ವಿಜಯ್ ಕಿರಗಂದೂರು, “ಕೆಂಪೇಗೌಡರ ಅಪ್ರತಿಮ ಕೊಡುಗೆ ಮತ್ತು ಬೆಂಗಳೂರಿನ ಭವ್ಯ ಇತಿಹಾಸವನ್ನು ಗೌರವಿಸುವ ಇಂತಹ ಪ್ರಯತ್ನಗಳು ಅತ್ಯಂತ ಶ್ಲಾಘನೀಯ. ಇಂದಿನ ತಲೆಮಾರಿಗೆ ನಗರದ ಇತಿಹಾಸವನ್ನು ಪರಿಚಯಿಸುವ ಜೊತೆಗೆ ಪರಿಸರ ಸಂರಕ್ಷಣೆಯ ಜವಾಬ್ದಾರಿಯನ್ನೂ ಈ ಸಿನಿಮಾ ನೆನಪಿಸಲಿದೆ” ಎಂದು ಹೇಳಿದ್ದಾರೆ.