ಕೊಪ್ಪಳದಲ್ಲಿ ಇಂದು ತುಂಗಭದ್ರಾ ಜಲಾಶಯದ 33 ಹೊಸ ಕ್ರಸ್ಟ್ ಗೇಟ್‌ಗಳ ಲೋಕಾರ್ಪಣೆ ನಡೆಯಲಿದ್ದು, ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ಮುಖ್ಯಮಂತ್ರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಬಳ್ಳಾರಿ : ಕರ್ನಾಟಕ ಸೇರಿದಂತೆ ನೆರೆಯ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ನೀರಾವರಿ ವ್ಯವಸ್ಥೆಗೆ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದಲ್ಲಿ ಅಳವಡಿಸಲಾದ 33 ಹೊಸ ಕ್ರಸ್ಟ್ ಗೇಟ್‌ಗಳ ಲೋಕಾರ್ಪಣೆ ಕಾರ್ಯಕ್ರಮ ಇಂದು (ಜೂನ್ 25) ಕೊಪ್ಪಳ ಜಿಲ್ಲೆಯಲ್ಲಿ ನಡೆಯಲಿದೆ. ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಈ ಮಹತ್ವದ ಕಾರ್ಯಕ್ರಮ ಜರುಗಲಿದ್ದು, ಇದು ತುಂಗಭದ್ರಾ ಅಣೆಕಟ್ಟಿನ ಇತಿಹಾಸದಲ್ಲಿ ಮಹತ್ವದ ಘಟ್ಟವೆಂದು ಪರಿಗಣಿಸಲಾಗಿದೆ.
ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಹಾಗೂ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈಗಾಗಲೇ ಕರ್ನಾಟಕ ಮತ್ತು ಆಂಧ್ರಪ್ರದೇಶ ಮುಖ್ಯಮಂತ್ರಿಗಳು ವಿಶೇಷ ವಿಮಾನದ ಮೂಲಕ ಜಿಂದಾಲ್ ವಿಜಯನಗರ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ.
ಕೊಪ್ಪಳ ತಾಲೂಕಿನ ಮುನಿರಾಬಾದ್ ಗ್ರಾಮದ ಪ್ರೌಢಶಾಲೆ ಆವರಣದಲ್ಲಿ ಕಾರ್ಯಕ್ರಮಕ್ಕಾಗಿ ಬೃಹತ್ ವೇದಿಕೆ ನಿರ್ಮಿಸಲಾಗಿದ್ದು, ಬೆಳಗ್ಗೆ 11 ಗಂಟೆಗೆ ಮೂವರು ಮುಖ್ಯಮಂತ್ರಿಗಳು ತುಂಗಭದ್ರಾ ಅಣೆಕಟ್ಟಿನ ಹೊಸ ಕ್ರಸ್ಟ್ ಗೇಟ್‌ಗಳನ್ನು ಅಧಿಕೃತವಾಗಿ ಲೋಕಾರ್ಪಣೆ ಮಾಡಲಿದ್ದಾರೆ. ರಾಜ್ಯದ ಸಚಿವರು, ಶಾಸಕರು, ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು ಸೇರಿದಂತೆ ಸಾವಿರಾರು ಜನರು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
ತುಂಗಭದ್ರಾ ಜಲಾಶಯವು ಕರ್ನಾಟಕದ ಕೊಪ್ಪಳ, ಬಳ್ಳಾರಿ, ರಾಯಚೂರು ಹಾಗೂ ವಿಜಯನಗರ ಜಿಲ್ಲೆಗಳ ಕೃಷಿಗೆ ಪ್ರಮುಖ ಆಧಾರವಾಗಿದ್ದು, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿಯೂ ಲಕ್ಷಾಂತರ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸುತ್ತದೆ. ಹಳೆಯ ಗೇಟ್‌ಗಳ ಬದಲಿಗೆ ಹೊಸ ಕ್ರಸ್ಟ್ ಗೇಟ್‌ಗಳನ್ನು ಅಳವಡಿಸುವ ಮೂಲಕ ಅಣೆಕಟ್ಟಿನ ಸುರಕ್ಷತೆ ಮತ್ತು ನೀರು ನಿರ್ವಹಣಾ ಸಾಮರ್ಥ್ಯ ಮತ್ತಷ್ಟು ಬಲಗೊಳ್ಳಲಿದೆ.
ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮುನಿರಾಬಾದ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ಭದ್ರತಾ ದೃಷ್ಟಿಯಿಂದ ಶಾಲೆ ಸುತ್ತಮುತ್ತ ವಿಶೇಷ ನಿಗಾವಹಿಸಲಾಗಿದೆ. ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಉಪಸ್ಥಿತಿಯಿಂದ ಕಾರ್ಯಕ್ರಮಕ್ಕೆ ವಿಶೇಷ ಮಹತ್ವ ಸಿಕ್ಕಿದೆ.





















