ಬೆಂಗಳೂರು: ನೀಟ್ ಮರು ಪರೀಕ್ಷೆಗೆ ವಿದ್ಯಾರ್ಥಿಗಳು ತಡವಾಗಿ ಬಂದಿರುವುದಕ್ಕೆ ಕಾಂಗ್ರೆಸ್ ಕಾರ್ಯಕ್ರಮ ಕಾರಣವಲ್ಲ ಎಂದು ಬೆಂಗಳೂರು ನಗರ ಪೊಲೀಸ್ ಹಾಗೂ ಬೆಂಗಳೂರು ಸಂಚಾರ ಪೊಲೀಸ್ ಜಂಟಿಯಾಗಿ ಸ್ಪಷ್ಟನೆ ನೀಡಿವೆ.
ಕಳೆದ ಭಾನುವಾರ ಜೂನ್ 21ರಂದು ನಡೆದ ನೀಟ್ ಮರು ಪರೀಕ್ಷೆಗೆ ಹಾಜರಾಗಲು ಬಂದಿದ್ದ ವಿದ್ಯಾರ್ಥಿ ಪರೀಕ್ಷಾ ಕೇಂದ್ರದ ಪ್ರವೇಶಕ್ಕೆ ನಿಗದಿಪಡಿಸಿದ್ದ ಸಮಯಕ್ಕಿಂತ ತಡವಾಗಿ ಬಂದಿದ್ದರಿಂದ ಪ್ರವೇಶ ನಿರಾಕರಿಸಲಾಗಿತ್ತು.
ಈ ಕುರಿತಂತೆ ಅನೇಕ ಆರೋಪಗಳು ಕೂಡ ಹರಿದಾಡುತ್ತಿದ್ದವು ಅಲ್ಲದೇ ವಿದ್ಯಾರ್ಥಿಗಳು ಪರೀಕ್ಷೆಗೆ ತಡವಾಗಲು ಬಿಕೆ ಹರಿಪ್ರಸಾದ್ ಅವರ ಅಧಿಕಾರ ಸ್ವೀಕಾರ ಕಾರ್ಯಕ್ರಮವೇ ಪ್ರಮುಖ ಕಾರಣ ಎಂಬ ಆರೋಪಗಳು ಕೇಳಿಬಂದಿದ್ದವು.
ಈ ಕುರಿತಂತೆ ಸಿಸಿಟಿವಿ ದೃಶ್ಯಾವಳಿಗಳು, ಅಭ್ಯರ್ಥಿ ಮತ್ತು ಪೋಷಕರೊಂದಿಗಿನ ಸಂಭಾಷಣೆ ಹಾಗೂ ಮಾರ್ಗ ವಿಶ್ಲೇಷಣೆಯ ಆಧಾರದಲ್ಲಿ ಬೆಂಗಳೂರು ನಗರ ಪೊಲೀಸ್ ಹಾಗೂ ಬೆಂಗಳೂರು ಸಂಚಾರ ಪೊಲೀಸರು ಅಧಿಕೃತ ಫ್ಯಾಕ್ಟ್ ಚೆಕ್ ವರದಿ ಬಿಡುಗಡೆ ಮಾಡಿದ್ದಾರೆ.
ಫ್ಯಾಕ್ಟ್ ಚೆಕ್ ವರದಿಯಲ್ಲಿ ಏನಿದೆ?: ಪರೀಕ್ಷೆಗೆ ತಡವಾಗಿ ಬರಲು ಟ್ರಾಫಿಕ್ ಕಾರಣ ಅಲ್ಲ. ವಿದ್ಯಾರ್ಥಿಗಳು ಹೊರಡುವ ಸಮಯದಲ್ಲಿ ಟ್ರಾಫಿಕ್ ಸಾಮನ್ಯವಾಗಿತ್ತು. ಅಲ್ಲದೇ ಪೊಲೀಸ್ ಸಿಬ್ಬಂದಿ ಅಗತ್ಯವಿರುವ ಕಡೆ ಸಂಚಾರಕ್ಕೆ ಅನುಕೂಲ ಮಾಡಿದ್ದಾರೆ. ಮನೆಯಿಂದ ತಡಮಾಡಿ ಹೊರಟಿದ್ದು, ಹೋಗುವ ಮಾರ್ಗದ ಆಯ್ಕೆ ತಪ್ಪಾಗಿರುವುದು ಪರೀಕ್ಷಾ ಕೇಂದ್ರಕ್ಕೆ ತಲುಪಲು ಕಾರಣವಾಗಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಪರೀಕ್ಷಾ ಕೇಂದ್ರ ಪ್ರವೇಶಕ್ಕೆ 1.30 ಕಟ್ ಆಫ್ ಟೈಮ್. ಆದರೆ, ವಿದ್ಯಾರ್ಥಿ ಮನೆಯಿಂದ ಹೊರಟಿದ್ದು 12.57ಕ್ಕೆ, ಆರ್‌ಟಿ ನಗರದಿಂದ ಪರೀಕ್ಷಾ ಕೇಂದ್ರಕ್ಕೆ ಹೋಗಲು ಒಳದಾರಿ ಇದ್ದರೂ ಬೇರೆ ಮಾರ್ಗದಿಂದ ಹೊರಟಿದ್ದಾರೆ. ಹೀಗಾಗಿ ಪರೀಕ್ಷಾ ಕೇಂದ್ರದ ಬಳಿ ಬಂದಿದ್ದು 1.33ಕ್ಕೆ ಎಂದು ಪೊಲೀಸರ ಫ್ಯಾಕ್ಟ್ಚೆಕ್ ವರದಿಯಲ್ಲಿದೆ.






















