SK Home Ad
Home ನಮ್ಮ ಜಿಲ್ಲೆ ದಕ್ಷಿಣ ಕನ್ನಡ ಧರ್ಮಸ್ಥಳ ಬುರುಡೆ ಪ್ರಕರಣ: ಏಳು ಬುರುಡೆಗಳ ಮೂಲ ಪತ್ತೆಗೆ ಅತ್ಯಾಧುನಿಕ ತಂತ್ರಜ್ಞಾನದ ಕಸರತ್ತು

ಧರ್ಮಸ್ಥಳ ಬುರುಡೆ ಪ್ರಕರಣ: ಏಳು ಬುರುಡೆಗಳ ಮೂಲ ಪತ್ತೆಗೆ ಅತ್ಯಾಧುನಿಕ ತಂತ್ರಜ್ಞಾನದ ಕಸರತ್ತು

0
244

ಧರ್ಮಸ್ಥಳ: ಬುರುಡೆ ಕೇಸ್‌ ದಿನೇ ದಿನೇ ಬೇರೆ ತಿರುವುಗಳನ್ನ ಪಡೆದುಕೊಳ್ಳುತ್ತಿದೆ. ಬಂಗ್ಲೆಗುಡ್ಡೆಯಲ್ಲಿ ಪತ್ತೆಯಾದ ಏಳು ಮಾನವ ಬುರುಡೆಗಳ ರಹಸ್ಯ ಭೇದಿಸುವುದು ವಿಶೇಷ ತನಿಖಾ ತಂಡಕ್ಕೆ (SIT) ಈಗ ದೊಡ್ಡ ಸವಾಲಾಗಿ ಪರಿಣಮಿಸಿದೆ. ಈ ಪ್ರಕರಣದ ತನಿಖೆ ತೀವ್ರಗೊಂಡಿದ್ದು, ಇತ್ತೀಚೆಗೆ ನಟ ಪ್ರಕಾಶ್ ರಾಜ್ ಹೆಸರು ಕೂಡ ಇದರಲ್ಲಿ ಕೇಳಿಬಂದಿರುವುದು ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಸದ್ಯ ಪ್ರಕರಣದ ಅಂತಿಮ ವರದಿ ಸಲ್ಲಿಸಲು ಬುರುಡೆಗಳ ಮೂಲ ಪತ್ತೆ ಹಚ್ಚುವುದು ಅನಿವಾರ್ಯವಾಗಿದ್ದು, ಇದಕ್ಕಾಗಿ ತನಿಖಾ ತಂಡವು ಅತ್ಯಾಧುನಿಕ ತಂತ್ರಜ್ಞಾನದ ಮೊರೆ ಹೋಗಿದೆ.

ಹಾಗೇ ಈ ಬುರುಡೆಗಳ ನಿಖರ ಮಾಹಿತಿ ಪಡೆಯಲು ಎಸ್‌ಐಟಿ ‘ಐಸೋಟೋಪ್ ಎನಾಲಿಸಿಸ್ʼ ತಂತ್ರಜ್ಞಾನ ಬಳಸಲು ಮುಂದಾಗಿದೆ. ಇದು ವಸ್ತುವೊಂದರಲ್ಲಿರುವ ವಿಭಿನ್ನ ಐಸೊಟೋಪ್‌ಗಳ ಪ್ರಮಾಣವನ್ನು ಅಳೆಯುವ ವೈಜ್ಞಾನಿಕ ವಿಧಾನವಾಗಿದೆ. ಮಾಸ್ ಸ್ಪೆಕ್ಟ್ರೋಮೆಟ್ರಿ ಬಳಸಿ ನಡೆಸಲಾಗುವ ಈ ಪರೀಕ್ಷೆಯಿಂದ ಮೃತರ ವಯಸ್ಸು, ಆಹಾರ ಪದ್ಧತಿ ಹಾಗೂ ಭೌಗೋಳಿಕ ಹಿನ್ನೆಲೆಯನ್ನು ಪತ್ತೆಹಚ್ಚಬಹುದು. ಈ ಮೂಲಕ ಮೃತರು ಕರಾವಳಿ ಭಾಗದವರೇ ಅಥವಾ ಬೇರೆ ಪ್ರದೇಶದವರೇ ಎಂಬುದನ್ನು ತನಿಖಾಧಿಕಾರಿಗಳು ಪತ್ತೆಹಚ್ಚಲಿದ್ದಾರೆ.

ಅಲ್ಲದೇ.. ಬಂಗ್ಲೆಗುಡ್ಡೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಸಿಕ್ಕಿದ್ದ ಮಾನವ ಅಸ್ಥಿಪಂಜರಗಳ ಮಾದರಿಯನ್ನು ಎಸ್‌ಐಟಿ ಈಗಾಗಲೇ ಡಿಎನ್‌ಎ ಪರೀಕ್ಷೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳುಹಿಸಿಕೊಟ್ಟಿದೆ. ಇದರೊಂದಿಗೆ ರಾಜ್ಯದ ವಿವಿಧ ಭಾಗಗಳಿಂದ ನಾಪತ್ತೆಯಾಗಿರುವವರ ವಿವರಗಳನ್ನು ಸಂಗ್ರಹಿಸಿರುವ ಅಧಿಕಾರಿಗಳು, ಅನುಮಾನಾಸ್ಪದ ಹಿನ್ನೆಲೆಯುಳ್ಳ ಸುಮಾರು 8 ಕುಟುಂಬಗಳ ಸದಸ್ಯರ ರಕ್ತದ ಮಾದರಿಯನ್ನು ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ.

ಒಟ್ಟಾರೆಯಾಗಿ.. ಸದ್ಯಕ್ಕೆ ಧರ್ಮಸ್ಥಳದ ಈ ಬುರುಡೆ ಷಡ್ಯಂತ್ರದ ಹಿಂದಿರುವ ಸತ್ಯಾಸತ್ಯತೆ ತನಿಖೆಯ ಒಂದು ಭಾಗವಾದರೆ, ಸಿಕ್ಕಿರುವ ಬುರುಡೆಗಳು ಕನಿಷ್ಠ ಯಾವ ಪ್ರದೇಶಕ್ಕೆ ಸೇರಿದವು ಎಂಬುದನ್ನು ವರದಿಯಲ್ಲಿ ಉಲ್ಲೇಖಿಸಲು ಎಸ್‌ಐಟಿ ಸಕಲ ಸಿದ್ಧತೆ ನಡೆಸುತ್ತಿದೆ.