ಬೆಂಗಳೂರು: ಸ್ಯಾಂಡಲ್‌ವುಡ್‌ನ ಖ್ಯಾತ ನಟಿ ಶರ್ಮಿಳಾ ಮಾಂಡ್ರೆ ಶೀಘ್ರದಲ್ಲೇ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಕಾಲಿವುಡ್‌ನ ಪ್ರಮುಖ ನಿರ್ಮಾಪಕ ಸುಧನ್ ಸುಂದರಂ ಜೊತೆ ಜೂನ್ 25ರಂದು ನಿಶ್ಚಿತಾರ್ಥ ನೆರವೇರಲಿದೆ ಎಂದು ಮಾಹಿತಿ ತಿಳಿದುಬಂದಿದೆ. ತಮಿಳುನಾಡಿನ ಸುಧನ್ ಜೊತೆಗಿನ ಈ ಹೊಸ ಬದುಕಿನ ಹೆಜ್ಜೆಯ ಬಗ್ಗೆ ನಟಿ ಶರ್ಮಿಳಾ ಮಾಂಡ್ರೆ ಇದುವರೆಗೆ ಯಾವುದೇ ಅಧಿಕೃತ ಪ್ರಕಟಣೆ ನೀಡಿಲ್ಲ. ಆದ್ರೆ ನಟಿಯ ಆಪ್ತ ಸ್ನೇಹಿತ ಹಾಗೂ ಖ್ಯಾತ ಚಲನಚಿತ್ರ ನಿರ್ದೇಶಕ ಪವನ್ ಕುಮಾರ್ ಹಂಚಿಕೊಂಡಿರುವ ಸಾಮಾಜಿಕ ಜಾಲತಾಣದ ಪೋಸ್ಟ್ ಈ ಸುದ್ಧಿಗೆ ಬಲವಾದ ಪುಷ್ಟಿ ನೀಡಿದೆ.
ನಿರ್ದೇಶಕ ಪವನ್ ಕುಮಾರ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಶೇಷ ವಿಡಿಯೋ ಒಂದನ್ನು ಹಂಚಿಕೊಳ್ಳುವ ಮೂಲಕ ನಟಿಗೆ ಮುಂಚಿತವಾಗಿಯೇ ಶುಭಕೋರಿದ್ದಾರೆ. ಆ ವಿಡಿಯೋದಲ್ಲಿ ಶರ್ಮಿಳಾ ಪುಸ್ತಕ ಓದುತ್ತಾ ಕುಳಿತಿದ್ದಾರೆ, ಪವನ್ ಮೂಲೆಯೊಂದರಲ್ಲಿ ನಿಂತಿರುವುದನ್ನು ಕಾಣಬಹುದು. ಈ ವಿಡಿಯೋಗೆ ಒಡೆದ ಹೃದಯದ (ಹಾರ್ಟ್) ಎಮೋಜಿಯನ್ನು ಬಳಸಿ ಸೃಜನಾತ್ಮಕವಾಗಿ ಕ್ಯಾಪ್ಷನ್ ಬರೆದಿರುವ ಪವನ್, “ಶರ್ಮಿಳಾ ಮಾಂಡ್ರೆ ನನ್ನನ್ನು ನಿರಂತರವಾಗಿ ಭೇಟಿಯಾಗದ ಸ್ನೇಹಿತೆ. ಆದ್ರೆ ನಾವು ಭೇಟಿಯಾಗಿ ಮಾತನಾಡುವಾಗಲೆಲ್ಲಾ ನಮ್ಮ ನಡುವೆ ಆತ್ಮೀಯ ಒಡನಾಟ ಮೂಡುತ್ತದೆ. ನಮ್ಮಿಬ್ಬರ ಹಾಸ್ಯ ಪ್ರಜ್ಞೆಯನ್ನು ನಾನು ಇಷ್ಟಪಡುತ್ತೇನೆ. ಹಾಗೇ ನಿನಗೆ ಅಭಿನಂದನೆಗಳು, ನಾನೇ ಖುಷಿಯಿಂದ ಕನ್ಯಾದಾನ ಮಾಡುತ್ತೇನೆ” ಎಂದು ತಮಾಷೆಯಾಗಿ ಬರೆದುಕೊಂಡಿದ್ದಾರೆ.
ಹಾಗೇ ‘ಸಜನಿ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದ್ದ ಶರ್ಮಿಳಾ ಮಾಂಡ್ರೆ, ನಂತರ ಕನ್ನಡದ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ವಿಶೇಷವಾಗಿ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ‘ಕೃಷ್ಣ’ ಚಿತ್ರದ ಮೂಲಕ ಸಿನಿಪ್ರಿಯರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಆನಂತರ ದರ್ಶನ್, ರಮೇಶ್ ಅರವಿಂದ್, ಶ್ರೀನಗರ ಕಿಟ್ಟಿ, ದಿಗಂತ್ ಹಾಗೂ ಧರ್ಮ ಕೀರ್ತಿರಾಜ್ ಸೇರಿದಂತೆ ಚಿತ್ರರಂಗದ ಪ್ರಮುಖ ನಾಯಕರೊಂದಿಗೆ ಸ್ಕ್ರೀನ್ ಶೇರ್ ಮಾಡಿಕೊಂಡಿರುವ ಶರ್ಮಿಳಾ, ಸದ್ಯ ತಮ್ಮ ಜೀವನದ ಹೊಸ ಇನ್ನಿಂಗ್ಸ್ ಆರಂಭಿಸಲು ಸಿದ್ಧರಾಗಿದ್ದಾರೆ ಎನ್ನಲಾಗುತ್ತಿದೆ.






















