ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ ಎಸ್. ಎ. ಚಿನ್ನೇಗೌಡ ಧರ್ಮಪತ್ನಿ, ಹಾಗೂ ಜನಪ್ರಿಯ ನಟರಾದ ವಿಜಯ್ ರಾಘವೇಂದ್ರ ಮತ್ತು ಶ್ರೀಮುರಳಿ ತಾಯಿ ಜಯಮ್ಮ ಸೋಮವಾರ ನಿಧನರಾಗಿದ್ದಾರೆ. ಕಳೆದ ಒಂದು ವಾರದಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ನಟರ ತಾಯಿ ಇಂದು ಕೊನೆಯುಸಿರೆಳೆದಿದ್ದಾರೆ.
ಕುಟುಂಬದ ಮಾಹಿತಿಯ ಪ್ರಕಾರ, ಜಯಮ್ಮ ಆರೋಗ್ಯದಲ್ಲಿ ಏರುಪೇರಾದ ತಕ್ಷಣವೇ ನಗರದ ಪ್ರತಿಷ್ಠಿತ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಜ್ಞ ವೈದ್ಯರ ತಂಡ ಅವರಿಗೆ ನಿರಂತರ ವೈದ್ಯಕೀಯ ಆರೈಕೆ ಮತ್ತು ಚಿಕಿತ್ಸೆ ನೀಡುತ್ತಿತ್ತಾದರೂ, ಅವರ ಆರೋಗ್ಯ ಸ್ಥಿತಿ ದಿನದಿಂದ ದಿನಕ್ಕೆ ಕ್ಷೀಣಿಸುತ್ತಾ ಬಂದಿತು. ಅಂತಿಮವಾಗಿ ಸೋಮವಾರ ಚಿಕಿತ್ಸೆಗೆ ಸ್ಪಂದಿಸದೆ ಇಹಲೋಕ ತ್ಯಜಿಸಿದರು.
ಸ್ಯಾಂಡಲ್‌ವುಡ್‌ನ ಅತ್ಯಂತ ಗೌರವಾನ್ವಿತ ಮತ್ತು ಪ್ರಭಾವಿ ಕುಟುಂಬಗಳಲ್ಲಿ ಒಂದಾದ ಚಿನ್ನೇಗೌಡರ ಕುಟುಂಬಕ್ಕೆ ಜಯಮ್ಮನೇ ಆಧಾರಸ್ತಂಭವಾಗಿದ್ದರು. ಈಗ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಇಡೀ ಕನ್ನಡ ಚಿತ್ರರಂಗ ಆಘಾತ ವ್ಯಕ್ತಪಡಿಸಿದೆ. ಜಯಮ್ಮನ ಅಗಲಿಕೆಯಿಂದ ಇಡೀ ಕುಟುಂಬ ಮತ್ತು ಚಿತ್ರರಂಗದ ಆಪ್ತ ವಲಯ ತೀವ್ರ ದುಃಖದಲ್ಲಿ ಮುಳುಗಿದೆ.
ಸಿನಿಮಾ ರಂಗದ ಗಣ್ಯರು, ಸ್ನೇಹಿತರು, ಅಭಿಮಾನಿಗಳು ಹಾಗೂ ಹಿತೈಷಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಮತ್ತು ಖುದ್ದಾಗಿ ಭೇಟಿ ನೀಡಿ ಚಿನ್ನೇಗೌಡ, ವಿಜಯ್ ರಾಘವೇಂದ್ರ ಹಾಗೂ ಶ್ರೀಮುರಳಿ ಅವರಿಗೆ ಸಾಂತ್ವನ ಹೇಳುತ್ತಿದ್ದಾರೆ. ತಾಯಿಯನ್ನು ಕಳೆದುಕೊಂಡು ಕಷ್ಟದ ಸಮಯದಲ್ಲಿರುವ ಇಡೀ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಚಲನಚಿತ್ರ ಸಮುದಾಯ ಪ್ರಾರ್ಥಿಸಿದೆ.






















