ಮುಂದಿನ ಸರ್ಕಾರದಲ್ಲೂ ಗ್ಯಾರಂಟಿ ಯೋಜನೆಗಳು ಜಾರಿಯಲ್ಲೇ ಇರುತ್ತವೆ: ಬಿಜೆಪಿ ಅಪಪ್ರಚಾರ ಮಾಡುತ್ತಿದೆ, ಗ್ಯಾರಂಟಿ ಮುಂದುವರಿಯಲಿದೆ – ಸಿದ್ದರಾಮಯ್ಯ
ಬೆಂಗಳೂರು: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳನ್ನು ಸ್ಥಗಿತಗೊಳಿಸಲಾಗುತ್ತದೆ ಎಂಬ ವಿಪಕ್ಷಗಳ ಆರೋಪ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿಗಳಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ. ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ಮುಂದಿನ ಎರಡು ವರ್ಷಗಳಷ್ಟೇ ಅಲ್ಲ, ಮುಂದಿನ ಚುನಾವಣೆಯ ನಂತರವೂ ಈ ಯೋಜನೆಗಳು ಮುಂದುವರಿಯಲಿವೆ ಎಂದು ಭರವಸೆ ನೀಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಸಿದ್ದರಾಮಯ್ಯ, ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಕಂಡುಬರುವ ದೋಷಗಳನ್ನು ಆರಂಭದಿಂದಲೇ ಸರಿಪಡಿಸಲಾಗುತ್ತಿದೆ ಹಾಗೂ ಈ ಪ್ರಕ್ರಿಯೆ ಈಗಲೂ ಮುಂದುವರಿದಿದೆ ಎಂದು ತಿಳಿಸಿದ್ದಾರೆ. ವಿರೋಧ ಪಕ್ಷಗಳ ಅಪಪ್ರಚಾರಕ್ಕೆ ಕಿವಿಗೊಟ್ಟು ಫಲಾನುಭವಿಗಳು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಸಾಹಿತ್ಯ ಪರಂಪರೆಯ ಮೌನ ಶಕ್ತಿ ಇಂದಿರಾ ಲಂಕೇಶ್ ಇನ್ನಿಲ್ಲ
BJP ವಿರುದ್ಧ ವಾಗ್ದಾಳಿ: ಗ್ಯಾರಂಟಿ ಯೋಜನೆಗಳನ್ನು ಬಿಜೆಪಿ ಮೊದಲ ದಿನದಿಂದಲೇ ವಿರೋಧಿಸುತ್ತಾ ಬಂದಿದೆ ಎಂದು ಆರೋಪಿಸಿರುವ ಸಿದ್ದರಾಮಯ್ಯ, ಆರಂಭದಲ್ಲಿ ಈ ಯೋಜನೆಗಳ ಜಾರಿ ಅಸಾಧ್ಯ ಎಂದು ಹೇಳಿದ್ದ ಬಿಜೆಪಿ, ನಂತರ ರಾಜ್ಯ ಸರ್ಕಾರ ಹಣಕಾಸಿನ ಸಂಕಷ್ಟಕ್ಕೆ ಸಿಲುಕಲಿದೆ ಎಂದು ಟೀಕಿಸಿತ್ತು. ಇದೀಗ ಯೋಜನೆಗಳನ್ನು ಸ್ಥಗಿತಗೊಳಿಸಲಾಗುತ್ತದೆ ಎಂಬ ವದಂತಿಗಳನ್ನು ಹಬ್ಬಿಸುತ್ತಿರುವುದು ಅವರ ರಾಜಕೀಯ ಹತಾಶೆಯ ಸಂಕೇತ ಎಂದು ಅವರು ಟೀಕಿಸಿದ್ದಾರೆ.
ರಾಜ್ಯದ ಆರ್ಥಿಕತೆ ಬಲವಾಗಿದೆ : ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಐದು ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತಂದಿದ್ದೇನೆ ಎಂದು ಹೇಳಿರುವ ಸಿದ್ದರಾಮಯ್ಯ, ಈ ಯೋಜನೆಗಳಿಂದ ರಾಜ್ಯದ ಆರ್ಥಿಕತೆಗೆ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಶಾಸಕ ಇಕ್ಬಾಲ್ ಹುಸೇನ್‌ಗೆ ಹೃದಯಾಘಾತ: ಆಸ್ಪತ್ರೆಗೆ ದಾಖಲು
ಇಂದು ಕರ್ನಾಟಕವು ತಲಾ ಆದಾಯದಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿದ್ದು, ಜಿಎಸ್‌ಟಿ ಸಂಗ್ರಹದಲ್ಲಿ ಮಹಾರಾಷ್ಟ್ರದ ನಂತರ ಎರಡನೇ ಸ್ಥಾನದಲ್ಲಿದೆ. ಸರ್ಕಾರದ ಖಜಾನೆ ಖಾಲಿಯಾಗಿದ್ದರೆ ಅಥವಾ ಸರ್ಕಾರ ದಿವಾಳಿ ಸ್ಥಿತಿಯಲ್ಲಿದ್ದರೆ ಇಂತಹ ಸಾಧನೆ ಸಾಧ್ಯವಾಗುತ್ತಿರಲಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.
ಬಿಜೆಪಿ ನಕಲು ಮಾಡಿದೆ ಎಂದು ಆರೋಪ : ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳನ್ನು ವಿರೋಧಿಸುತ್ತಾ ಬಂದ ಬಿಜೆಪಿ, ಇದೇ ಮಾದರಿಯ ಯೋಜನೆಗಳನ್ನು ಮಧ್ಯಪ್ರದೇಶ, ಬಿಹಾರ ಹಾಗೂ ಪಶ್ಚಿಮ ಬಂಗಾಳ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಅನುಸರಿಸಿ ಚುನಾವಣಾ ಲಾಭ ಪಡೆದಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಇದನ್ನೂ ಓದಿ: ಹಾಸ್ಟೆಲ್‌ನಲ್ಲಿ ಶಾಕ್: ಹಲ್ಲಿ ಬಿದ್ದ ನೀರು ಸೇವಿಸಿ ವಿದ್ಯಾರ್ಥಿಗಳು ಅಸ್ವಸ್ಥ
ಗ್ಯಾರಂಟಿ ಯೋಜನೆಗಳನ್ನು ವಿರೋಧಿಸುವ ನೈತಿಕ ಹಕ್ಕು ಬಿಜೆಪಿಗೆ ಇಲ್ಲ ಎಂದು ಹೇಳಿರುವ ಅವರು, ಕೆಲವು ರಾಜ್ಯಗಳಲ್ಲಿ ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಗಳನ್ನು ಸಂಪೂರ್ಣವಾಗಿ ಜಾರಿಗೊಳಿಸಲು ಬಿಜೆಪಿ ಸರ್ಕಾರಗಳು ವಿಫಲವಾಗಿವೆ ಎಂದು ಟೀಕಿಸಿದ್ದಾರೆ.
ಅನರ್ಹರಿಗೆ ಸೌಲಭ್ಯ ತಡೆಯುವುದು ಸರ್ಕಾರದ ಕರ್ತವ್ಯ : ಗ್ಯಾರಂಟಿ ಯೋಜನೆಗಳು ನಿಜವಾದ ಅರ್ಹರಿಗೆ ತಲುಪಬೇಕು ಎಂಬುದು ಸರ್ಕಾರದ ಉದ್ದೇಶ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಅನರ್ಹರು ಸೌಲಭ್ಯ ಪಡೆಯುತ್ತಿರುವುದು ಕಂಡುಬಂದರೆ ಅದನ್ನು ತಡೆಗಟ್ಟುವುದು ಚುನಾಯಿತ ಸರ್ಕಾರದ ಜವಾಬ್ದಾರಿ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: BTDA ಸಿಬ್ಬಂದಿ ಮೇಲೆ ಹಲ್ಲೆ ಖಂಡಿಸಿ ಧರಣಿ: ಸೇವೆ ಸ್ಥಗಿತಗೊಳಿಸಿದ ನೌಕರರು
ದುರಾಸೆಗೆ ಬಲಿಯಾಗಿ ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿ ಗ್ಯಾರಂಟಿ ಯೋಜನೆಗಳ ಲಾಭ ಪಡೆಯುವುದು ಕೇವಲ ಕಾನೂನು ಉಲ್ಲಂಘನೆಯಷ್ಟೇ ಅಲ್ಲ, ರಾಜ್ಯದ ಜನತೆಗೆ ಮಾಡುವ ದ್ರೋಹವೂ ಆಗಿದೆ ಎಂದು ಅವರು ಹೇಳಿದ್ದಾರೆ. ಈ ವಿಚಾರದಲ್ಲಿ ರಾಜಕೀಯ ಲಾಭಕ್ಕಾಗಿ ಅಪಪ್ರಚಾರ ನಡೆಸುವ ಬದಲು ಅರ್ಹ ಫಲಾನುಭವಿಗಳಿಗೆ ಯೋಜನೆಗಳು ತಲುಪುವಂತೆ ಸರ್ಕಾರಕ್ಕೆ ಸಹಕಾರ ನೀಡಬೇಕು ಎಂದು ವಿರೋಧ ಪಕ್ಷಗಳಿಗೆ ಸಲಹೆ ನೀಡಿದ್ದಾರೆ.
ಸಿದ್ದರಾಮಯ್ಯ ಅವರ ಈ ಹೇಳಿಕೆ ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಭವಿಷ್ಯದ ಕುರಿತು ನಡೆಯುತ್ತಿರುವ ರಾಜಕೀಯ ಚರ್ಚೆಗೆ ಮತ್ತಷ್ಟು ವೇಗ ನೀಡಿದ್ದು, ಮುಂದಿನ ದಿನಗಳಲ್ಲಿ ಆಡಳಿತ ಮತ್ತು ವಿಪಕ್ಷಗಳ ನಡುವೆ ಈ ವಿಷಯ ಪ್ರಮುಖ ರಾಜಕೀಯ ಅಸ್ತ್ರವಾಗುವ ಸಾಧ್ಯತೆ ಇದೆ.



















