ಬೆಂಗಳೂರು: ಗೃಹಲಕ್ಷ್ಮಿ ಯೋಜನೆಯ ದುರ್ಬಳಕೆಯನ್ನು ತಡೆಯಲು ರಾಜ್ಯ ಸರ್ಕಾರ ಮುಂದಾಗಿದ್ದು, ಫಲಾನುಭವಿಗಳ ಪಟ್ಟಿಯನ್ನು ಪರಿಷ್ಕರಿಸಲು ತೀರ್ಮಾನಿಸಿದೆ. ಇದಕ್ಕಾಗಿ ಹೊಸದಾಗಿ ಮರು ಅರ್ಜಿಗಳನ್ನು ಆಹ್ವಾನಿಸಲಾಗುತ್ತಿದ್ದು, ಯೋಜನೆಗೆ ಅರ್ಹರಾಗಲು ಕೆಲವು ಪ್ರಮುಖ ಮಾನದಂಡಗಳನ್ನು ಕಡ್ಡಾಯಗೊಳಿಸಲಾಗಿದೆ.
ಅರ್ಹತೆ ಮತ್ತು ಅಗತ್ಯ ದಾಖಲೆಗಳು: ಯೋಜನೆಯ ಸೌಲಭ್ಯ ಪಡೆಯಲು ಕುಟುಂಬದ ಯಜಮಾನಿ ಮಹಿಳೆಯ ಹೆಸರು ಅಂತ್ಯೋದಯ, ಬಿಪಿಎಲ್ (BPL) ಅಥವಾ ಎಪಿಎಲ್ (APL) ಪಡಿತರ ಚೀಟಿಗಳಲ್ಲಿ ಸ್ಪಷ್ಟವಾಗಿ ನಮೂದಾಗಿರಬೇಕು. ಅರ್ಜಿ ಸಲ್ಲಿಕೆಗೆ ಯಜಮಾನಿಯ ಆಧಾರ್ ಕಾರ್ಡ್, ಆಧಾರ್ ಸಂಖ್ಯೆಗೆ ಜೋಡಣೆಯಾಗಿರುವ ಬ್ಯಾಂಕ್ ಪಾಸ್‌ಬುಕ್ ಮತ್ತು ರೇಷನ್ ಕಾರ್ಡ್ ಪ್ರತಿಗಳನ್ನು ಒದಗಿಸುವುದು ಕಡ್ಡಾಯವಾಗಿದೆ.
ಯಾರಿಗೆಲ್ಲ ಯೋಜನೆಯ ಲಾಭ ಸಿಗುವುದಿಲ್ಲ? ಹಾಗೂ ಸರ್ಕಾರವು ಈ ಬಾರಿ ಯೋಜನೆಗೆ ಕೆಲವು ಕಠಿಣ ನಿರ್ಬಂಧಗಳನ್ನು ವಿಧಿಸಿದೆ:
- ಕುಟುಂಬದ ಯಜಮಾನಿ ಅಥವಾ ಆಕೆಯ ಪತಿ ಆದಾಯ ತೆರಿಗೆ (Income Tax) ಪಾವತಿದಾರರಾಗಿದ್ದರೆ ಅವರು ಯೋಜನೆಗೆ ಅನರ್ಹರಾಗುತ್ತಾರೆ.
- ಯಜಮಾನಿ ಅಥವಾ ಆಕೆಯ ಪತಿ ಜಿಎಸ್‌ಟಿ (GST) ರಿಟರ್ನ್ಸ್ ಸಲ್ಲಿಸುವವರಾಗಿದ್ದರೂ ಸಹ ಈ ಯೋಜನೆಯ ಸೌಲಭ್ಯ ಸಿಗುವುದಿಲ್ಲ.
ಸರ್ಕಾರದ ನಡೆಗೆ ವಿರೋಧ ಪಕ್ಷಗಳ ತೀವ್ರ ಆಕ್ರೋಶ: ಸರ್ಕಾರದ ಈ ಪರಿಷ್ಕರಣೆ ನಿರ್ಧಾರಕ್ಕೆ ವಿರೋಧ ಪಕ್ಷಗಳಿಂದ ತೀವ್ರ ಟೀಕೆ ವ್ಯಕ್ತವಾಗಿದೆ. ಈ ಕುರಿತು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಪ್ರತಿಕ್ರಿಯಿಸಿ, “ಯೋಜನೆ ಘೋಷಿಸುವಾಗ ಯಾವುದೇ ಮುನ್ನೋಟ ಇರಲಿಲ್ಲ, ಈಗ ತಪ್ಪುಗಳ ಅರಿವಾಗಿ ಮರು ನೋಂದಣಿಗೆ ಮುಂದಾಗಿದ್ದಾರೆ. ಮರು ಅರ್ಜಿಯ ನೆಪದಲ್ಲಿ ನಿಜವಾದ ಫಲಾನುಭವಿಗಳಿಗೆ ತೊಂದರೆಯಾಗಬಾರದು. ಅಲ್ಲದೆ, ಬಾಕಿ ಇರುವ ಎರಡು ತಿಂಗಳ ಹಣದ ಬಗ್ಗೆ ಸರ್ಕಾರ ಜಾಣ ಮೌನ ವಹಿಸಿದೆ” ಎಂದು ಕಿಡಿಕಾರಿದ್ದಾರೆ.
ಮತ್ತೊಂದೆಡೆ ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಆಕ್ರೋಶ ಹೊರಹಾಕಿದ್ದು, “ಗೃಹಲಕ್ಷ್ಮಿ ಯೋಜನೆ ಈಗ ‘ಚುನಾವಣಾ ಲಕ್ಷ್ಮಿ’ಯಾಗಿದೆ. ನಾಲ್ಕೈದು ತಿಂಗಳು ಹಣ ತಡೆಹಿಡಿದು, ಚುನಾವಣೆ ಬಂದಾಗ ಮಾತ್ರ ಇದನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲಾಗುತ್ತಿದೆ” ಎಂದು ಆರೋಪಿಸಿದ್ದಾರೆ.






















