ಸಿನಿಮಾ ಕಥೆಗಳನ್ನೂ ಮೀರಿಸುವಂತಹ, ಎಲ್ಲರೂ ಹುಬ್ಬೇರಿಸುವಂತಹ ವಿಚಿತ್ರ ಮದುವೆಯೊಂದು ಈಗ ಬಿಹಾರದಲ್ಲಿ ನಡೆದಿದೆ. ಕೇವಲ ಒಂದು ಮಿಸ್ಡ್ ಕಾಲ್‌ನಿಂದ ಶುರುವಾದ ಸ್ನೇಹ, ಆಮೇಲೆ ಪ್ರೀತಿಗೆ ತಿರುಗಿ, ಕೊನೆಗೆ ಮದುವೆಯಲ್ಲಿ ಅಂತ್ಯವಾಗಿದೆ. ಆದರೆ ಈ ಮದುವೆಯ ಅಸಲಿ ಟ್ವಿಸ್ಟ್ ಇರೋದೇ ಇಲ್ಲಿ. ಯಾಕಂದ್ರೆ ಈ ಜೋಡಿಯ ಮಧ್ಯೆ ಬರೋಬ್ಬರಿ ಇಪ್ಪತ್ತಾರು ವರ್ಷಗಳ ವಯಸ್ಸಿನ ಅಂತರವಿದೆ. ಹೌದು, ಬಿಹಾರದ ಜಮುಯಿ ಜಿಲ್ಲೆಯ ಖೈರಾ ಪೊಲೀಸ್ ಠಾಣೆ ವ್ಯಾಪ್ತಿಯ ಖಾದುಯಿ ಬರಿಯಾರ್ಪುರ ಗ್ರಾಮದಲ್ಲಿ ಈ ಅಚ್ಚರಿಯ ಘಟನೆ ನಡೆದಿದ್ದು, ಮೂವತ್ತಾರು ವರ್ಷದ ಸೀಮಾ ಪರ್ವಿನ್ ಅಲಿಯಾಸ್ ಬಿಂದು ದೇವಿ ಎಂಬ ಐದು ಮಕ್ಕಳ ತಾಯಿ, ಈಗ ಹತ್ತೊಂಬತ್ತು ವರ್ಷದ ಯುವಕ ಮಹಾವೀರ್ ಠಾಕೂರ್ ಎಂಬಾತನ ಕೈ ಹಿಡಿದಿದ್ದಾಳೆ.
ಇವರಿಬ್ಬರ ಪರಿಚಯವಾಗಿದ್ದು ಒಂದು ಮಿಸ್ಡ್ ಕಾಲ್ ಮೂಲಕ. ಫೋನ್‌ನಲ್ಲಿ ಮಾತನಾಡುತ್ತಾ ಇಬ್ಬರ ನಡುವೆ ಸ್ನೇಹ ಬೆಳೆದು, ಅದು ಗಾಢವಾದ ಪ್ರೇಮಕ್ಕೆ ತಿರುಗಿದೆ. ಮಹಾವೀರ್ ಠಾಕೂರ್ ಪ್ರೀತಿಯಲ್ಲಿ ಬಿದ್ದ ಸೀಮಾ, ತನ್ನ ಐದು ಮಕ್ಕಳು ಹಾಗೂ ಗಂಡನನ್ನು ಬಿಟ್ಟು ಕೋಲ್ಕತ್ತಾಗೆ ಓಡಿ ಹೋಗಿದ್ದಾಳೆ. ಅಲ್ಲಿ ಇಬ್ಬರೂ ದೇವಸ್ಥಾನದಲ್ಲಿ ಮದುವೆಯಾಗಿದ್ದು, ತಾವು ಒಟ್ಟಿಗೆ ಇರುವ ವೀಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ಜಗತ್ತಿಗೆ ತಮ್ಮ ಮದುವೆಯ ವಿಷಯವನ್ನು ಸಾರಿದ್ದಾರೆ.
ಇನ್ನು ಈ ಸೀಮಾ ಪರ್ವಿನ್ ಕಥೆ ನಿಜಕ್ಕೂ ಸಿನಿಮಾಗಿಂತ ಕಮ್ಮಿ ಏನಿಲ್ಲ. ಏಕೆಂದರೆ ಇದು ಆಕೆಯ ಮೊದಲ ಮತಾಂತರವಲ್ಲ, ಸುಮಾರು ಹತ್ತು ವರ್ಷಗಳ ಹಿಂದೆ ಈಕೆಯ ಹೆಸರು ಬಿಂದು ದೇವಿ ಎಂದಾಗಿತ್ತು. ಆಗ ಆಕೆ ಮನನ್ ಆಲಂ ಎಂಬಾತನನ್ನು ಪ್ರೀತಿಸಿ, ಹಿಂದೂ ಧರ್ಮದಿಂದ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡು ಸೀಮಾ ಪರ್ವಿನ್ ಆಗಿ ಬದಲಾಗಿದ್ದಳು. ಆತನೊಂದಿಗೆ ಐದು ಮಕ್ಕಳನ್ನು ಹೆತ್ತ ಬಿಂದು, ಈಗ ಹತ್ತೊಂಬತ್ತು ವರ್ಷದ ಮಹಾವೀರ್ ಠಾಕೂರ್‌ಗಾಗಿ ಮತ್ತೆ ಹಿಂದೂ ಧರ್ಮಕ್ಕೆ ಮತಾಂತರಗೊಂಡು ಬಿಂದು ದೇವಿಯಾಗಿದ್ದಾಳೆ. ಈ ಬಗ್ಗೆ ಮಾತನಾಡಿರುವ ಬಿಂದು, ತನ್ನ ಮೊದಲ ಮದುವೆಯ ಜೀವನದಲ್ಲಿ ತನಗೆ ಸಂತೋಷವಿರಲಿಲ್ಲ, ಅಲ್ಲಿ ದಿನನಿತ್ಯ ಚಿತ್ರಹಿಂಸೆ ಅನುಭವಿಸುತ್ತಿದ್ದೆ, ಆದರೆ ಈಗ ಮಹಾವೀರ್ ಜೊತೆ ತಾನು ತುಂಬಾ ಖುಷಿಯಾಗಿದ್ದೇನೆ ಎಂದು ಹೇಳಿಕೊಂಡಿದ್ದಾಳೆ. ಇತ್ತ ವರ ಮಹಾವೀರ್ ಕೂಡ ಈ ಮದುವೆ ತನ್ನ ಪೂರ್ಣ ಇಷ್ಟದಂತೆಯೇ ನಡೆದಿದೆ ಎಂದು ಒಪ್ಪಿಕೊಂಡಿದ್ದಾನೆ. ಆದರೆ ಬಿಂದುವಿನ ಮೊದಲ ಪತಿ ಮನನ್ ಆಲಂ ಮಾತ್ರ ಆಕೆಯ ನಡತೆ ಸರಿಯಿರಲಿಲ್ಲ ಎಂದು ಗಂಭೀರ ಆರೋಪ ಮಾಡಿದ್ದು, ತನ್ನ ಐದು ಮಕ್ಕಳನ್ನು ತನ್ನ ಜೊತೆಯಲ್ಲೇ ಇಟ್ಟುಕೊಳ್ಳುವುದಾಗಿ ಹೇಳಿಕೆ ನೀಡಿದ್ದಾನೆ. ಸದ್ಯಕ್ಕೆ ಈ ವಿಚಿತ್ರ ಪ್ರೇಮಕಥೆ ಇಡೀ ದೇಶಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ.




















