ಶೂನ್ಯಸಿಂಹಾಸನದ ಶೂನ್ಯಮೂರ್ತಿ ಅಲ್ಲಮ ಪ್ರಭು ಅನುಪಮ ಭಕ್ತ, ಬಸವಣ್ಣನವರ ಮಹಾಮನೆಗೆ ದಯಮಾಡಿಸಿದರು. ಬಾಗಿದ ತಲೆ ಮುಗಿದ ಕೈಯ ಬಸವಣ್ಣ ಪ್ರಭುವನ್ನು ವಂದಿಸಿ ಸ್ವಾಗತಿಸಿದ. ಬಸವಣ್ಣನವರೊಂದಿಗೆ ಲೋಕಾಭಿರಾಮವಾಗಿ ಮಾತನಾಡುತ್ತ “ಬಸವರಸ! ಎಲ್ಲ ಕುಶಲವೇ? ಯಾವ ಕಷ್ಟವಿಲ್ಲ ತಾನೆ? ಮಹಾಮನೆಯ ಮಹಾಮನದ ಮಹಾದಾಸೋಹ ಹೇಗೆ ನಡೆದಿದೆ?” ಎಂದು ಕೇಳಿದರು. “ಪ್ರಭು! ಅದೆಲ್ಲದರ ಬೆನ್ನೆಲುಬಾಗಿ ತಾವಿರಲು ಅದಕ್ಕೇನು ಕೊರತೆ. ತಮ್ಮ ದಯದಿಂದ ಎಲ್ಲ ವ್ಯವಸ್ಥಿತ ನಡೆದಿದೆ. ಆದರೆ ನಾನು ನಿರೀಕ್ಷಿಸಿದಷ್ಟು ಜಂಗಮರು ಆಗಮಿಸುತ್ತಿಲ್ಲ. ಅದಕ್ಕೆ ಬೇಡುವವರಿಲ್ಲದೆ ಬಡವಾದೆ” ಎಂದು ಬಸವೇಶ್ವರರು ನುಡಿದರು. ಬಸವಣ್ಣನವರ ಈ ಮಾತು ಕೇಳಿ ಅಲ್ಲಮ ಪ್ರಭುದೇವರು ಬೇಡುವವರಿಲ್ಲದೆ ಬಡವಾದೆನೆಂದು ಬಸವಣ್ಣ ನುಡಿಯಬೇಕಾದರೆ ಮಿಕ್ಕವರು ಬೇಡುವವರು ನಾನು ನೀಡುವವನೆಂಬ ಸೂಕ್ಷ್ಮ ಅಹಂ ಇವನಲ್ಲಿ ಚಿಗುರೊಡೆಯುತ್ತಿದೆ. ಈ ಚಿಗುರನ್ನು ಚಿಕ್ಕದಿರುವಾಗಲೇ ಚಿವುಟಿ ಹಾಕುವುದು ಲೇಸೆಂದು ವಿಚಾರಿಸಿ-“ಬಸವರಸ! ಹಾಗಾದರೆ ನಾನು ಬೇಡಲು ಬಂದಿರುವೆ ನನ್ನನ್ನು ತೃಪ್ತಿಪಡಿಸೆಂದು ಹೇಳಿ ಅವನೊಂದಿಗೆ ಒಳಪ್ರವೇಶಿಸಿ ಸ್ನಾನ ಪೂಜಾದಿಗಳನ್ನು ಮುಗಿಸಿ ಪ್ರಸಾದಕ್ಕೆ ಕುಳಿತರು. ಪ್ರಸಾದ ಎಡೆಮಾಡಿದರು. ನೀಡಿದ್ದನ್ನೆಲ್ಲ ಉಂಡು ಮತ್ತೆ ತನ್ನಿರಿ ಎಂದ. ತಂದು ಮತ್ತೆ ಎಡೆಮಾಡಿದರು. ಅದೂ ಮುಗಿಯಿತು. ಹೀಗೆ ಲಕ್ಷದ ಮೇಲೆ ತೊಂಬತ್ತಾರು ಸಾವಿರ ಗಣಂಗಳಿಗಾಗಿ ಸಿದ್ಧಗೊಳಿಸಿದ ಪ್ರಸಾದವನ್ನು ಪ್ರಭುದೇವರೊಬ್ಬರೆ ಸೇವಿಸಿ ಇನ್ನೂ ಪ್ರಸಾದ ಎಡೆಮಾಡಿರೆಂದು ಅಜ್ಞಾಪಿಸಿದರು. ಬಸವಣ್ಣ ಕೈಮುಗಿದು “ಪ್ರಭು, ಮಾಡಿದ ಅಡಿಗೆಯೆಲ್ಲ ಮುಗಿದು ಹೋಗಿದೆ ಮತ್ತೆ ಮಾಡುವ ವ್ಯವಸ್ಥೆ ನಡೆದಿದೆ ಅಲ್ಲಿಯವರೆಗೆ ತಾಳಿರಿ” ಎಂದು ಪ್ರಾರ್ಥಿಸಿದ. ಮುಗುಳ್ನಗೆ ಬೀರಿದ ಅಲ್ಲಮ “ನೀವು ಪ್ರಸಾದ ಸಿದ್ಧಗೊಳಿಸುವ ಅವಶ್ಯಕತೆಯಿಲ್ಲ. ಇಲ್ಲಿ ಎಡೆಮಾಡಿದ್ದೆಲ್ಲ ಪ್ರಸಾದವಾಗುವುದು. ಇದ್ದ ದವಸ ಧಾನ್ಯಗಳನ್ನು ಇದ್ದಂತೆಯೇ ನೀಡಿ’ ಎಂದ. ಕಾಳು-ಕಡಿಗಳೆಲ್ಲ ಅಲ್ಲಮನ ಮಹಾರೋಗಣೆಯ ಮಹೋದರ ಸೇರಿದವು. ಬಸವಣ್ಣ ಗಾಬರಿಯಾದ. ಅಷ್ಟರಲ್ಲಿ ಚನ್ನಬಸವಣ್ಣ ಅಲ್ಲಿ ಆಗಮಿಸಿದ. ಬಸವಣ್ಣನ ಈ ವ್ಯಾಕುಲತೆಗೆ ಕಾರಣ ಕಾಣದಾಯಿತು. ಬಸವಣ್ಣ ಈ ಹಿನ್ನೆಲೆಯಲ್ಲಿ ಅಲ್ಲಮನೊಂದಿಗೆ ಜರುಗಿದ ಮಾತು ಕಥೆಗಳನ್ನು ತಿಳಿಸಿದ. ಆಗ ಚನ್ನಬಸವಣ್ಣ ಬಸವಣ್ಣನಿಗೆ ಹೇಳಿದ. “ಅಲ್ಲಮನಿಗೆ ಬೇಕಾದುದು ನಿನ್ನ ಅನ್ನವಲ್ಲ, ದವಸ-ಧಾನ್ಯವಲ್ಲ, ವಡವೆ-ಚಿನ್ನವಲ್ಲ, ನಿನ್ನ ಮನದ ಮರೆಯಲ್ಲಿ ಚಿಗುರೊಡೆದ ಅಹಂಕಾರ ಅವನಿಗೆ ಬೇಕಾದುದು. ಹೋಗಿ ನನ್ನನ್ನೆ ಸ್ವೀಕರಿಸೆಂದು ನಮಸ್ಕರಿಸು. ಅವನು ತೃಪ್ತನಾಗುವನು” ಚನ್ನಬಸವಣ್ಣನ ಈ ಸಲಹೆಯಂತೆ ಅಲ್ಲಮನ ಬಳಿ ಬಂದು ನಿಂದ ಬಸವಣ್ಣನವರು ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರವೇಕೆ ಪ್ರಭು! ನೀವು ಒಕ್ಕುದನಿಕ್ಕಿ ಬದುಕುವ ಭಕ್ತ ಬಸವ ನಾನು ನಿಮಗೆ ಏನು ತಾನೆ ಕೊಡಬಲ್ಲೆ! ಹೇಗೆ ತೃಪ್ತಿಪಡಿಸಬಲ್ಲೆ! ಇದೋ ನನ್ನನ್ನೆ ನಿಮಗೆ ಎಡೆ ಮಾಡಿರುವೆ ಸ್ವೀಕರಿಸಿ ನನ್ನನ್ನು ಕೃತಾರ್ಥನನ್ನಾಗಿಸಿ” ಎಂದು ನಿವೇದಿಸಿ ಸಾಷ್ಟಾಂಗ ಪ್ರಣಾಮವೆಸಗಿದರು. ಬಸವಣ್ಣನವರ ಭಾವ ಬದಲಾಗಿರುವಿಕೆಯನ್ನು ಅರ್ಥೈಸಿಕೊಂಡ ಅಲ್ಲಮಪ್ರಭುದೇವರು ಸಂತೃಪ್ತಿಯ ಡೇಕರಿಕೆ ಬಿಟ್ಟು “ಈಗ ತೃಪ್ತಿಯಾಯಿತು ಬಸವಣ್ಣ” ಎಂದು ಹೇಳುತ್ತ ಕೈತೊಳೆದು ಮೇಲೆದ್ದರು. ಬಸವಣ್ಣನವರು ಸಹ ಮೇಲೆದ್ದು ಕೈಮುಗಿದು ನಿಂತರು. ಅಷ್ಟರಲ್ಲಿ ಚನ್ನಬಸವಣ್ಣ ಅಲ್ಲಿ ಪ್ರವೇಶಿಸಿದ. ಅಲ್ಲಮಪ್ರಭುಗಳ ಈ ಮಹಾರೋಗಣೆ ಲೀಲೆ ಕಂಡು ಬೆರಗಾದ. ಬಸವಣ್ಣ ಪ್ರಭುದೇವರೆಡೆ ತಿರುಗಿ “ಪ್ರಭುಗಳೆ ಎನ್ನ ತಪ್ಪು ಅನಂತ ಕೋಟಿ, ನಿಮ್ಮ ಸೈರಣೆಗೆ ಲೆಕ್ಕವಿಲ್ಲ. ಆದರೂ ಬೇಡುವರಿಲ್ಲದೆ ಬಡವನಾದೆ” ಎಂದು ಹೇಳಿದ ಅಹಮ್ಮಿನ ಒಂದು ಚಿಕ್ಕ ಮಾತನ್ನು ಸೈರಿಸದೇ ಹೋದಿರಲ್ಲಾ! ಕೆಲವರು ಎಷ್ಟು ಬಿಗುಮಾನ ಬಿಮ್ಮಾನ ಅಭಿಮಾನಗಳನ್ನು ಮೈಗೂಡಿಸಿಕೊಂಡು ಭಕ್ತಿ ಮಾಡುವರು. ಯಾರೆದುರೂ ಸಹ ಒಂದು ಚಿಕ್ಕ ಸೊಕ್ಕಿನ ಮಾತ್ರ ಇಲ್ಲದೇ ಅಭಿಮಾನದ ಭಾವವೂ ಇಲ್ಲದೆ ಬದುಕಿದ ನಾನು ಕೇವಲ ತಮ್ಮ ಸಮ್ಮುಖದಲ್ಲಿ ಮಾತ್ರ ಆಡಿದ ಆ ಚಿಕ್ಕ ಮಾತಿಗೆ ಇಂಥ ಶಿಕ್ಷೆಯೇ ಪ್ರಭು?” ಎಂದು ಕೇಳಿದ. ಆಗ ಅಲ್ಲಮರು ಹೇಳಿದರು
ಸೂಳೆ ಹಲವರನುಳಿದಳೆಂದು ನಿಂದಿಸುವರಿಲ್ಲ ಕೇಳಾ
ಪತಿವ್ರತೆ ತನ್ನ ಪುರುಷನಲ್ಲದ ಮತ್ತೊಬ್ಬನ ಮುಖವ ನೋಡಿದಡೆ
ಅವಳ ಚಂಡಾಲಗಿತ್ತಿ ಎಂಬುದು ಲೋಕವೆಲ್ಲವು
ಕೀರ್ತಿವಾರ್ತೆಗೆ ಮಾಡುವ ಭಕ್ತ ತಪ್ಪಿದಡೆ ಅದ ಮನಕೆ ತರಲಿಲ್ಲ
ಸಜ್ಜನ ಸದ್ಭಕ್ತನೆಡಹಿದಡೆ ಅದ ಸೈರಿಸಬಾರದು ಕೇಳಾ
ನಮ್ಮ ಗುಹೇಶ್ವರಲಿಂಗಕ್ಕೆ ಆದಿಯಿಂದ ನೀನೇ ಭಕ್ತನಾದ ಕಾರಣ
ಮನ ನೊಂದಿತ್ತು ಕಾಣಾ ಸಂಗನ ಬಸವಣ್ಣ.
ಎಂದು ಹೇಳಿದರು. ಕಬ್ಬಿಣದಲ್ಲಿ ಅದೆಷ್ಟು ಕಲ್ಮಷ ಅಂಶಗಳಿದ್ದರೂ ಅದನ್ನು ಸ್ವಚ್ಛಗೊಳಿಸುವುದಿಲ್ಲ. ಚಿನ್ನದಲ್ಲಿ ಕಲ್ಮಷ ಸೇರಿದರೆ ಅದನ್ನು ಸ್ವಚ್ಛಗೊಳಿಸ ಬೇಕಾಗುತ್ತದೆ. ಕಾರಣ ಬಸವಣ್ಣ ನೀನು ಕೇವಲ ಭಕ್ತನಲ್ಲ, ಪರಿಪೂರ್ಣ ಭಕ್ತ ಚೊಕ್ಕ ಚಿನ್ನವಿದ್ದಂತೆ, ಅದಕ್ಕಾಗಿ ನಿನ್ನಲ್ಲಿ ಮತ್ತು ನೀನು ಮಾಡುವ ದಾಸೋಹದಲ್ಲಿ ಒಂದಿಷ್ಟೂ ದೋಷ ಉಳಿಯಬಾರದು ಎಂಬ ಆಶಯ ನಮ್ಮದು. ಅದಕ್ಕಾಗಿ ಹೀಗೆ ಮಾಡಬೇಕಾಯಿತು ಎಂದು ಮನವರಿಕೆ ಮಾಡಿಕೊಟ್ಟರು.