Home Advertisement
Home ಆಹಾರ ಇದನ್ನು ಓದಿ ನೀವು ಹೊಟ್ಟೆ ಹುಣ್ಣಾಗುವಂತೆ ನಗುತ್ತಿರಾ: ಬಾಡೂಟದಿಂದ ಬ್ಯಾಡ್ ಊಟದ ತನಕ…

ಇದನ್ನು ಓದಿ ನೀವು ಹೊಟ್ಟೆ ಹುಣ್ಣಾಗುವಂತೆ ನಗುತ್ತಿರಾ: ಬಾಡೂಟದಿಂದ ಬ್ಯಾಡ್ ಊಟದ ತನಕ…

0
28

ಆಹಾರ ಎಂದಕೂಡಲೇ ಮೊದಲು ಕೇಳುವುದು ‘ವೆಜ್ಜಾ, ‘ನಾನ್ ವೆಜ್ಜಾ?’ ಅಂತ. ಎಲ್ಲೇ ಹೋದರೂ ನಾನ್ ವೆಜ್ ಪ್ರಿಯರಿಗೆ ರಾಜಾತಿಥ್ಯ. ಈ ವೆಜ್ ಅನ್ನೋದು ಸಾತ್ವಿಕ ಆಹಾರವಾದರೂ ಊಟಕ್ಕೆ ಅಂತ ಕುಳಿತಾಗ ಅವರನ್ನು ಸತ್ಕರಿಸುವ ರೀತಿಯೇ ಬೇರೆ. ಒಂದು ರೀತಿಯಲ್ಲಿ ಕನಿಕರದ ದೃಷ್ಟಿಯಿಂದ ನೋಡುವುದು. ಎಲ್ಲೋ ಒಂದು ಮೂಲೆಯಲ್ಲಿ ನಾಲ್ಕೈದು ಚೇರು, ಒಂದು ಟೇಬಲ್. ‘ಪಾಪ, ಅವರಿಗೆ ಏನು ಬೇಕು ನೋಡಿ’ ಅಂತ ಸಿಂಪಥಿಯ ಮಾತುಗಳು. ಒಂದು ಒಬ್ಬಟ್ಟೂ ಚಪಾತಿನೋ ಎಲೆಗೆ ಹಾಕಿಬಿಟ್ಟರೆ ಅನ್ನಕ್ಕೆ ಎದುರು ನೋಡುತ್ತ ಕೂರಬೇಕು.

ಮೊನ್ನೆ ಯಾವುದೋ ಡಿನ್ನರ್ ಪಾರ್ಟಿಗೆ ಅಂತ ನನ್ನ ಸ್ನೇಹಿತ ಹೋಗಿದ್ದ. ನಾನ್ ವೆಜ್ ತಿನ್ನುವ ಕುಟುಂಬದಲ್ಲಿ ಹುಟ್ಟಿದ್ದರೂ ಚಿಕ್ಕಂದಿನಿಂದಲೂ ಇವನು ಮಾತ್ರ ಶಾಕಾಹಾರಿ ಆಗಿದ್ದ. ಜಾಗದ ಕೊರತೆಯಿಂದ ವೆಜ್, ನಾನ್ ವೆಜ್ ಎರಡೂ ಆಹಾರ ಪದ್ಧತಿಯವರಿಗೂ ಒಂದೇ ಕಡೆ ವ್ಯವಸ್ಥೆ ಮಾಡಿದ್ದರು. ಇವನು ತಡವಾಗಿ ಬೇರೆ ಹೋಗಿದ್ದ. ಊಟ ಬಡಿಸುವಾತ ‘ಸರ್, ನೀವು ವೆಜ್ಞಾ, ನಾನ್ ವೆಜ್ಜಾ?’ ಅಂತ ಕೇಳಿದ. ಇವನು ‘ವೆಜ್’ ಅಂದಿದ್ದರೆ ಸಾಕಾಗಿತ್ತು. ಜಂಬದಿಂದ ‘ನಾನ್ (ನಾನು) ವೆಜ್’ ಅಂದ. ಅವನು ಎಲೆ ಹಾಕಿ ಅನ್ನ ಬಡಿಸಿ, ಸಾಂಬಾರ್ ತಂದು ಹಾಕಿದ.

ಊಟ ಹಳಸಿತ್ತು ನಾಯಿ ಹಸಿದಿತ್ತು ಎನ್ನುವಂತೆ ಈ ಸ್ನೇಹಿತನೂ ತುಂಬ ಹಸಿದಿದ್ದ. ಬಡಿಸಿದ್ದೇ ತಡ, ಎಣ್ಣೆಗಾಯಿ ಮಸಾಲೆ ಸಾಂಬಾರ್ ಇರಬೇಕು ಅಂತ ಅರ್ಧ ಎಲೆ ಖಾಲಿ ಮಾಡಿದ. ಅಡುಗೆಯವನು ಬಂದು ‘ಸಾರ್, ಬೇಜಾರು ಮಾಡಿಕೊಳ್ಳಬೇಡಿ ಸಾಂಬಾರ್ ಮಾತ್ರ ಇತ್ತು’ ಎನ್ನುತ್ತಿರುವಾಗ, ‘ಏ, ಪರವಾಗಿಲ್ಲ ಬಿಡಿ. ನಾನು
ಬದನೆಕಾಯಿ ತಿನ್ನಲ್ಲ’ ಎಂದ. ಅಡುಗೆ ಬಡಿಸುವವನಿಗೆ ಫುಲ್ ಕನ್ಸೂಷನ್! ‘ಸಾರ್, ತಮಾಷೆ ಮಾಡ್ತಿರಲ್ಲ! ನಾನ್ ವೆಜ್ಜಿನಲ್ಲಿ ಯಾರಾದರೂ ಬದನೆಕಾಯಿ ಹಾಕ್ತಾರಾ?’ ಅಂತ ಶಾಂತವಾಗಿ ಹೇಳಿದ. (ಅಂದರೆ ಅದು ಚಿಕನ್ / ಮಟನ್ ಸಾಂಬಾರ್ ಆಗಿತ್ತು!).

ದೊಡ್ಡರು ಅಷ್ಟಿಲ್ಲದೆ ಹೇಳಿದ್ದಾರಾ, ‘ನಾನು ಅನ್ನೋದು ಎಂದಿಗೂ ಬಾಯಲ್ಲಿ ಬರಬಾರದು’ ಅಂತ. ಕನಕದಾಸರೇ ಹೇಳಿಬಿಟ್ಟಿದ್ದಾರೆ. ‘ನಾನು ಹೋದರೆ ಸ್ವರ್ಗಕ್ಕೂ ಹೋಗಬಹುದು’ ಎಂದು. ಮೊನ್ನೆ ಒಂದು ಸಾರ್ವಜನಿಕ ಸಾಹಿತ್ಯದ ಕಾರ್ಯಕ್ರಮ ನಡೆದಾಗಲೂ ಬಾಡೂಟದ ಕೂಗು ಎದ್ದಿತ್ತು. ಬಾಡೂಟ ಅಂದಾಗ ಒಂದು ಜ್ಞಾಪಕಕ್ಕೆ ಬಂತು. ಯಾರೋ ಇಂಗ್ಲಿಷ್ ಪ್ರೇಮಿ ಇರಬೇಕು ಅಂತ ಕಾಣುತ್ತೆ, ಕಾರ್ಯಕ್ರಮದ ಬ್ಯಾನರಿನಲ್ಲಿ Badoota ಅಂತ ಹಾಕಿಸಿದ್ದ. ಇಂಗ್ಲಿಷಿನಲ್ಲಿ ಬಾಡೂಟ ‘ಬ್ಯಾಡೂಟ’ ಆಗಿತ್ತು. ಕೆಲವರು ಅದನ್ನು ಓದಿ, ‘ಬ್ಯಾಡ್ (ಕೆಟ್ಟ) ಊಟ ತಿನ್ನೋ ಕರ್ಮ ನಮಗ್ಯಾಕೆ? ಇವನು ಹಾಕೋ ಕೆಟ್ಟ ಊಟಕ್ಕೆ ನಾವ್ಯಾಕೆ ಹೋಗಬೇಕು? ಮನೇಲೇಹೆಂಡ್ತಿ ಮಾಡಿ ಬಡಿಸುವ ಗುಡ್ ಊಟಾನೇ ಸಾಕು’ ಎನ್ನುವ ರೀತಿಯಲ್ಲಿ ತಲೆ ಕೆಡಿಸಿಕೊಂಡರು.

ಈಗಂತೂ ಫೋನಿನಲ್ಲಿ ಊಟದ್ದೇ ಉಸಾಬರಿ. ಯುಟ್ಯೂಬ್, ರೀಲ್ಸ್‌ಗಳಲ್ಲಿ ಹೊಸಹೊಸ ರೆಸಿಪಿ ಮಾಡಿ, ತಿನ್ನೋದಕ್ಕೇ ಬಾಯಿ ತೆಗೆಯುತ್ತಿದ್ದಾರೆಯೇ ಹೊರತು ದುಡಿಯೋದರ ಬಗ್ಗೆ, ತಂದುಹಾಕುವವರ ಬಗ್ಗೆ ಒಬ್ಬರೂ ಬಾಯಿ ಬಿಡ್ತಿಲ್ಲ. ಸ್ಟೋವ್ ಹಚ್ಚೋಕೆ ಬರದೇ ಇರೋ ಅಮ್ಮಾವ್ರ ಗಂಡ ‘ಹಾಯಾಗಿ ಕುಳಿತಿರು ನೀನು’ ಅಂತ ಹೊಸ ಹೊಸ ಪ್ರಯೋಗ ಮಾಡಿ ನಳ ಚಕ್ರವರ್ತಿ ಅನಿಸಿಕೊಳ್ಳೋಕೆ ಸೌಟು ಹಿಡಿದಿದ್ದಾನೆ. ಸದ್ಯ ಇಂಥವರಿಂದಲಾದರೂ ‘ಮೂರು ಹೊತ್ತು ಮಾಡಿ ಹಾಕೋಕೆ ನಾನು ನಿಮ್ಮ ಕೆಲಸದವಳಲ್ಲ ಅನ್ನೋ ಹೆಂಗಸರ ಸಂಖ್ಯೆ ಕಡಿಮೆ ಆಗಿದೆ ಅನ್ನೋದು ಸಮಾಧಾನಕರ ವಿಷಯ.

ಈ ಮೂರು ಹೊತ್ತು ಅನ್ನೋದೇ ಅಪಾಯಕ್ಕೆ ಕಟ್ಟಿಟ್ಟ ರೊಟ್ಟಿ, ಸರ್ವಜ್ಞನು ‘ಮೂರು ಹೊತ್ತು ತಿನ್ನೋನು ರೋಗಿ’ ಅಂತ ಕರೆಂಟ್ ಇಲ್ಲದ ಕಾಲದಲ್ಲಿಯೇ ಹೇಳಿದ್ದ. ಈಗ ರಾತ್ರಿ-ಹಗಲು ಪಾಳಿಯ ಕೆಲಸಗಳು, ನೈಟ್ ಪಾರ್ಟಿಗಳು ಇರುವುದರಿಂದ, ಹಗಲು ರಾತ್ರಿ ಎರಡೂ ಸೇರಿಸಿ ಆರು ಹೊತ್ತು ಮಾಡ್ಕೊಂಡಿದ್ದಾರೆ. ಮಿತ ಆಹಾರ ಉಂಡು ಹಿತವಾಗಿರೋಣ.

ಲಲಿತ ಪ್ರಬಂಧ: ರವೀದ್ರ ಸಿಂಗ್‌, ಕೋಲಾರ