Home Advertisement
Home ಆಹಾರ ಬೇಸಿಗೆಯ ಬಿಸಿಲಿಗೆ ತಂಪು ನೀಡುವ ಅಮೃತ: ಆರೋಗ್ಯವರ್ಧಕ ‘ಮಾವಿನಕಾಯಿ ಮಜ್ಜಿಗೆ’

ಬೇಸಿಗೆಯ ಬಿಸಿಲಿಗೆ ತಂಪು ನೀಡುವ ಅಮೃತ: ಆರೋಗ್ಯವರ್ಧಕ ‘ಮಾವಿನಕಾಯಿ ಮಜ್ಜಿಗೆ’

0
94

ಬೆಂಗಳೂರು: ರಾಜ್ಯಾದ್ಯಂತ ಏರುತ್ತಿರುವ ತಾಪಮಾನದಿಂದಾಗಿ ಜನರು ಹೈರಾಣಾಗುತ್ತಿದ್ದು, ದೇಹವನ್ನು ತಂಪಾಗಿರಿಸಿಕೊಳ್ಳಲು ನೈಸರ್ಗಿಕ ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಸಿಗುವ ಕೃತಕ ಬಣ್ಣ ಮತ್ತು ಸಕ್ಕರೆ ಮಿಶ್ರಿತ ತಂಪು ಪಾನೀಯಗಳಿಗಿಂತ ಮನೆಯಲ್ಲಿಯೇ ತಯಾರಿಸುವ ಸಾಂಪ್ರದಾಯಿಕ ‘ಮಾವಿನಕಾಯಿ ಮಜ್ಜಿಗೆ’ ಈಗ ಎಲ್ಲರ ಗಮನ ಸೆಳೆಯುತ್ತಿದೆ. ಹಸಿ ಮಾವಿನಕಾಯಿ, ಮೊಸರು ಮತ್ತು ಸಾಂಬಾರ ಪದಾರ್ಥಗಳ ಅಪೂರ್ವ ಸಮ್ಮಿಲನವಿರುವ ಈ ಪಾನೀಯವು ಕೇವಲ ಬಾಯಾರಿಕೆ ನೀಗಿಸುವುದು ಮಾತ್ರವಲ್ಲದೆ, ಆರೋಗ್ಯದ ದೃಷ್ಟಿಯಿಂದಲೂ ಒಂದು ಅತ್ಯುತ್ತಮ ಔಷಧಿಯಂತೆ ಕೆಲಸ ಮಾಡುತ್ತದೆ.

ತಯಾರಿಸಲು ಬೇಕಾದ ಸಾಮಾಗ್ರಿ: ಈ ವಿಶೇಷ ಮಜ್ಜಿಗೆಯನ್ನು ತಯಾರಿಸುವುದು ಬಹಳ ಸುಲಭ. ಅರ್ಧ ಮಾವಿನಕಾಯಿಯ ತುರಿ, ಒಂದು ಬಟ್ಟಲು ಕಾಯಿತುರಿ, ಜೀರಿಗೆ, ಸ್ವಲ್ಪ ಇಂಗು, ಕೊತ್ತಂಬರಿ ಸೊಪ್ಪು ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಒಂದು ಲೋಟ ಮೊಸರಿನೊಂದಿಗೆ ಸೇರಿಸಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಬೇಕು. ನಂತರ ಅಗತ್ಯಕ್ಕೆ ತಕ್ಕಷ್ಟು ನೀರು ಸೇರಿಸಿದರೆ ಸ್ವಾದಿಷ್ಟವಾದ ಮಾವಿನಕಾಯಿ ಮಜ್ಜಿಗೆ ಸಿದ್ಧವಾಗುತ್ತದೆ.

ಇದರ ಪ್ರಯೋಜನೆಗಳು: ಮಾವು ಕೇವಲ ಒಂದು ಹುಳಿಬರಿತ ತಿನ್ನಿಸು ಅಲ್ಲ, ಬದಲಿಗೆ ಇದರಿಂದ ದೇಹಕ್ಕೆ ಬೇಕಾಗುವ ಆರೋಗ್ಯಕರ ಶಕ್ತಿಯನ್ನು ಇದು ಒದಗಿಸುತ್ತದೆ. ಹೌದು.. ಹಸಿ ಮಾವಿನಕಾಯಿಯಲ್ಲಿರುವ ವಿಟಮಿನ್ ಸಿ ಮತ್ತು ಮೊಸರಿನಲ್ಲಿರುವ ಪ್ರೊಬಯೋಟಿಕ್ ಅಂಶಗಳು ದೇಹದ ರೋಗನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ. ಹಾಗೇ ಜೀರ್ಣಕ್ರಿಯೆಯನ್ನು ಸುಗಮಗೊಳಿಸುತ್ತವೆ. ವಿಶೇಷವಾಗಿ ಬೇಸಿಗೆಯಲ್ಲಿ ಕಾಡುವ ಅಜೀರ್ಣ ಮತ್ತು ಹೊಟ್ಟೆ ಉಬ್ಬರದಂತಹ ಸಮಸ್ಯೆಗಳಿಗೆ ಇದು ರಾಮಬಾಣವಾಗಿದೆ.

ಆರೋಗ್ಯ ತಜ್ಞರ ಪ್ರಕಾರ, ಮಾವಿನಕಾಯಿ ಮಜ್ಜಿಗೆಯು ದೇಹದಲ್ಲಿನ ಎಲೆಕ್ಟ್ರೋಲೈಟ್ ಸಮತೋಲನವನ್ನು ಕಾಪಾಡುತ್ತದೆ. ಬಿಸಿಲಿನಲ್ಲಿ ಅತಿಯಾಗಿ ಬೆವರುವುದರಿಂದ ದೇಹವು ಕಳೆದುಕೊಳ್ಳುವ ಲವಣಾಂಶಗಳನ್ನು ಇದು ಮರುಪೂರಣ ಮಾಡುತ್ತದೆ. ಅಲ್ಲದೆ, ಬಿಸಿಲ ಹೊಡೆತದಿಂದ (Sunstroke) ಉಂಟಾಗುವ ತಲೆನೋವು ಮತ್ತು ಸುಸ್ತನ್ನು ತಕ್ಷಣವೇ ಕಡಿಮೆ ಮಾಡುವ ಗುಣ ಈ ಪಾನೀಯಕ್ಕಿದೆ. ಸಕ್ಕರೆ ಅಂಶ ಇಲ್ಲದಿರುವುದರಿಂದ ಮಧುಮೇಹಿಗಳು ಕೂಡ ಯಾವುದೇ ಆತಂಕವಿಲ್ಲದೆ ಇದನ್ನು ಸೇವಿಸಬಹುದು. ಆದ್ರೆ ಅತಿಯಾದ ಅಸಿಡಿಟಿ ಸಮಸ್ಯೆ ಇರುವವರು ಮತ್ತು ಶೀತದ ಪ್ರಕೃತಿಯವರು ರಾತ್ರಿ ವೇಳೆಯಲ್ಲಿ ಇದರ ಸೇವನೆಯನ್ನು ನಿಯಂತ್ರಿಸುವುದು ಉತ್ತಮ.

ಒಟ್ಟಾರೆಯಾಗಿ.. ಅಡುಗೆ ಮನೆಯಲ್ಲಿ ಸುಲಭವಾಗಿ ಸಿಗುವ ಸಾಮಗ್ರಿಗಳನ್ನು ಬಳಸಿ ತಯಾರಿಸುವ ಈ ಪಾನೀಯವು ಈ ಬಾರಿಯ ಬೇಸಿಗೆಗೆ ಅತ್ಯುತ್ತಮ ಆಯ್ಕೆಯಾಗಿದೆ. ಕೃತಕ ಪಾನೀಯಗಳ ಹಾವಳಿಯ ನಡುವೆ, ಇಂತಹ ದೇಶಿ ಪಾನೀಯಗಳು ಆರೋಗ್ಯ ಮತ್ತು ರುಚಿ ಎರಡನ್ನೂ ಕಾಪಾಡುತ್ತವೆ.