SK Home Ad
Home ವೈರಲ್ 17ನೇ ವಯಸ್ಸಿನಲ್ಲೇ ಉದ್ಯಮಿ! ಪುಟಿನ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಕೇರಳದ ‘AI ಕಿಡ್’ ಯಾರು?

17ನೇ ವಯಸ್ಸಿನಲ್ಲೇ ಉದ್ಯಮಿ! ಪುಟಿನ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಕೇರಳದ ‘AI ಕಿಡ್’ ಯಾರು?

0
65

ಕೇರಳ: ಸಾಮಾನ್ಯವಾಗಿ 17ನೇ ವಯಸ್ಸಿನಲ್ಲಿ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಬಗ್ಗೆ ಗಮನಹರಿಸುತ್ತಿರುತ್ತಾರೆ. ಆದರೆ ಕೇರಳದ ಯುವ ಪ್ರತಿಭೆಯೊಬ್ಬರು ಇದೇ ವಯಸ್ಸಿನಲ್ಲಿ ಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲಿ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಮೂಲಕ ಇದೀಗ ದೇಶಾದ್ಯಂತ ಸುದ್ದಿಯಾಗಿದ್ದಾರೆ.

ಕೇರಳ ಮೂಲದ ರೌಲ್ ಜಾನ್ ಅಜು ಇದೀಗ ಎಂದೇ ಜನಪ್ರಿಯರಾಗಿದ್ದಾರೆ. ನವೆಂಬರ್ 26ರಂದು ರಷ್ಯಾದ ಮಾಸ್ಕೋದಲ್ಲಿ ನಡೆದ ಅಂತಾರಾಷ್ಟ್ರೀಯ AI Journey 2026 ಸಮ್ಮೇಳನದಲ್ಲಿ ಪುಟಿನ್ ಅವರನ್ನು ಭೇಟಿಯಾಗುವ ಅವಕಾಶ ಅವರಿಗೆ ಸಿಕ್ಕಿದೆ. ಈ ಭೇಟಿಯ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

9ನೇ ವಯಸ್ಸಿನಲ್ಲೇ ಆರಂಭವಾದ ಆಸಕ್ತಿ

ರೌಲ್ ಅವರ ತಂತ್ರಜ್ಞಾನ ಆಸಕ್ತಿ ಆರಂಭವಾಗಿದ್ದು ಕೇವಲ 9ನೇ ವಯಸ್ಸಿನಲ್ಲಿ. ಮನೆಯಲ್ಲೇ ವಿಡಿಯೋಗಳನ್ನು ತಯಾರಿಸುವ ಮೂಲಕ ತಮ್ಮ ಸೃಜನಶೀಲ ಪ್ರಯಾಣ ಆರಂಭಿಸಿದ್ದರು. ನಂತರ ವಿಡಿಯೋ ಎಡಿಟಿಂಗ್ ಮತ್ತು ತಂತ್ರಜ್ಞಾನದ ಬಗ್ಗೆ ಆಸಕ್ತಿ ಬೆಳೆಸಿಕೊಂಡರು. 12ನೇ ವಯಸ್ಸಿನಲ್ಲಿ ಶಾಲೆಯ ವಿಜ್ಞಾನ ಪ್ರಾಜೆಕ್ಟ್ಗಾಗಿ ‘MeBot’ ಎಂಬ ರೋಬೋಟ್ ಅಭಿವೃದ್ಧಿಪಡಿಸಿದ್ದರು.

ಮುಂದೆ ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಹಲವು ಪ್ರಯೋಗಗಳನ್ನು ನಡೆಸಿದ ಅವರು, AI Realm Technologies ಎಂಬ ತಂತ್ರಜ್ಞಾನ ಸಂಸ್ಥೆಯನ್ನು ಸ್ಥಾಪಿಸಿದರು. ಈ ಸಂಸ್ಥೆಯ ಮೂಲಕ 15ಕ್ಕೂ ಹೆಚ್ಚು AI ಉಪಕರಣಗಳನ್ನು ಅಭಿವೃದ್ಧಿಪಡಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.

ತಂದೆಯೇ ಮಗನ ಕಂಪನಿಯಲ್ಲಿ ಉದ್ಯೋಗಿ

ರೌಲ್ ಅವರ ಉದ್ಯಮದ ಮತ್ತೊಂದು ವಿಶೇಷವೆಂದರೆ ಅವರ ತಂದೆಯೇ ಮಗನ ಕಂಪನಿಯಲ್ಲಿ ಉದ್ಯೋಗಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಂದೆ ಅಜು ಜೋಸೆಫ್ ಅವರು ಅಮೆಜಾನ್, ಅಡೋಬ್, ವಿಪ್ರೋ ಮತ್ತು ಐಬಿಎಂನಂತಹ ಸಂಸ್ಥೆಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ವರದಿಗಳ ಪ್ರಕಾರ, ಅವರಿಗೆ ತಿಂಗಳಿಗೆ ₹2 ಲಕ್ಷ ವೇತನ ನೀಡಲಾಗುತ್ತಿದೆ.

5 ಲಕ್ಷ ಜನರಿಗೆ AI ತರಬೇತಿ

ರೌಲ್ ಅವರ ಸಂಸ್ಥೆ ಮತ್ತು ತರಬೇತಿ ಕಾರ್ಯಕ್ರಮಗಳ ಮೂಲಕ ಸುಮಾರು ಐದು ಲಕ್ಷ ಜನರಿಗೆ ಕೃತಕ ಬುದ್ಧಿಮತ್ತೆ ಕುರಿತು ತರಬೇತಿ ನೀಡಲಾಗಿದೆ ಎಂದು ವರದಿಗಳು ಹೇಳಿವೆ. ಅವರ ಯೋಜನೆಗಳಲ್ಲಿ RESQ AI, MeBot, ZapGap ಮತ್ತು FeedFye ಪ್ರಮುಖವಾಗಿವೆ.

ಇನ್ನು ಮಾಸ್ಕೋದಲ್ಲಿ ಪುಟಿನ್ ಅವರನ್ನು ಭೇಟಿಯಾದ ಅನುಭವದ ಕುರಿತು ಪ್ರತಿಕ್ರಿಯಿಸಿರುವ ರೌಲ್, ತಮ್ಮ ಒಂಬತ್ತನೇ ವಯಸ್ಸಿನಲ್ಲಿ ವಿಡಿಯೋ ಮಾಡುತ್ತಿದ್ದ ದಿನಗಳಿಂದ ರಷ್ಯಾ ಅಧ್ಯಕ್ಷರೊಂದಿಗೆ ಸೆಲ್ಫಿ ತೆಗೆದುಕೊಳ್ಳುವವರೆಗಿನ ಪಯಣವನ್ನು ಕನಸಿನಲ್ಲಿಯೂ ಊಹಿಸಿರಲಿಲ್ಲ ಎಂದು ಸಂತಸ ಹಂಚಿಕೊಂಡಿದ್ದಾರೆ.

ಕೇವಲ ಫೋಟೋವೊಂದರಿಂದ ಮಾತ್ರವಲ್ಲ, ಚಿಕ್ಕ ವಯಸ್ಸಿನಲ್ಲೇ ತಂತ್ರಜ್ಞಾನ ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಿಕೊಂಡು ಉದ್ಯಮದತ್ತ ಹೆಜ್ಜೆಯಿಟ್ಟಿರುವ ರೌಲ್ ಜಾನ್ ಅಜು ಅವರ ಪಯಣ ಇದೀಗ ಯುವಜನರ ಗಮನ ಸೆಳೆಯುತ್ತಿದೆ.