ಜನರು ಪ್ರತಿನಿತ್ಯ ಸೇವಿಸುವ ಆಹಾರಗಳು, ಕೇವಲ ದೇಹದ ತೂಕದ ಮೇಲಷ್ಟೇ ಅಲ್ಲ, ನಿಮ್ಮ ಮೆದುಳಿನ ಕಾರ್ಯಕ್ಷಮತೆಯ ಮೇಲೂ ಗಂಭೀರ ಪರಿಣಾಮ ಬೀರುತ್ತದೆ ಎಂಬ ಆತಂಕಕಾರಿ ವಿಷಯವೊಂದು ಸಂಶೋಧನೆಯಿಂದ ಹೊರಬಿದ್ದಿದೆ. ಮೊನಾಶ್ ವಿಶ್ವವಿದ್ಯಾಲಯದ ನೇತೃತ್ವದಲ್ಲಿ ನಡೆದ ಹೊಸ ಅಧ್ಯಯನದ ಪ್ರಕಾರ, ಅಲ್ಟ್ರಾ-ಪ್ರೊಸೆಸ್ಡ್ (ಅತಿ-ಸಂಸ್ಕರಿಸಿದ) ಆಹಾರಗಳ ಸೇವನೆಯು ಮನುಷ್ಯನ ಸ್ಮರಣಶಕ್ತಿ ಮತ್ತು ಚಿಂತನಾ ಕೌಶಲ್ಯಗಳನ್ನು ಕುಂಠಿತಗೊಳಿಸುತ್ತದೆ ಎಂದು ಇತ್ತೀಚಿಗೆ ತಿಳಿದುಬಂದಿದೆ.
ಏನಿದು ಸಂಶೋಧನೆ?: ‘ಆಲ್ಝೈಮರ್ಸ್ & ಡಿಮೆನ್ಶಿಯಾ’ ನಿಯತಕಾಲಿಕೆಯಲ್ಲಿ ಪ್ರಕಟವಾದ ಈ ಸಂಶೋಧನೆಯು ಬುದ್ಧಿಮಾಂದ್ಯತೆ ಇಲ್ಲದ ಸುಮಾರು 2,100 ಮಧ್ಯವಯಸ್ಕ ಮತ್ತು ವೃದ್ಧರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೆ ಅಲ್ಟ್ರಾ-ಪ್ರೊಸೆಸ್ಡ್ ಆಹಾರಗಳನ್ನು ಸೇವಿಸುವವರಲ್ಲಿ ಗಮನ ಕೇಂದ್ರೀಕರಿಸುವ ಸಾಮರ್ಥ್ಯ (Attention span) ಮತ್ತು ಮಾನಸಿಕ ಸಂಸ್ಕರಣಾ ವೇಗ ಗಣನೀಯವಾಗಿ ಕಡಿಮೆಯಾಗುತ್ತಿರುವುದು ಪತ್ತೆಯಾಗಿದೆ.
ಚಿಪ್ಸ್ ಪ್ಯಾಕೆಟ್ ಕೂಡ ಅಪಾಯಕಾರಿ: ಹೌದು.. ಈ ಅಧ್ಯಯನದ ಪ್ರಕಾರ, ಕೇವಲ ಒಂದು ಪ್ಯಾಕೆಟ್ ಚಿಪ್ಸ್‌ನಂತಹ ಸಣ್ಣ ಪ್ರಮಾಣದ ಅತಿ-ಸಂಸ್ಕರಿಸಿದ ಆಹಾರವನ್ನು ದಿನನಿತ್ಯದ ಆಹಾರಕ್ರಮಕ್ಕೆ ಸೇರಿಸಿಕೊಂಡರೂ ಸಹ ಅದು ಮೆದುಳಿನ ಚುರುಕುತನವನ್ನು ಕಡಿಮೆ ಮಾಡುತ್ತದೆ. ಹೀಗಾಗಿ ಸಮತೋಲಿತ ಅಥವಾ ಆರೋಗ್ಯಕರ ಆಹಾರ ಪದ್ಧತಿಯನ್ನು ಅನುಸರಿಸುವವರಲ್ಲಿಯೂ ಈ ನಕಾರಾತ್ಮಕ ಪರಿಣಾಮ ಕಂಡುಬಂದಿದೆ. ಹೀಗಿದ್ದಾಗ ನೀವು ಎಷ್ಟೇ ಪೌಷ್ಟಿಕ ಆಹಾರ ತಿಂದರೂ, ಅದರ ಜೊತೆಗೆ ಸಂಸ್ಕರಿಸಿದ ಆಹಾರ ಸೇವಿಸಿದರೆ ಮೆದುಳಿಗೆ ಹಾನಿ ತಪ್ಪಿದ್ದಲ್ಲ ಎಂದು ತಿಳಿಸಿದ್ದಾರೆ.
ಯಾವ ಆಹಾರಗಳು ಅಲ್ಟ್ರಾ-ಪ್ರೊಸೆಸ್ಡ್?: ಪ್ಯಾಕ್ ಮಾಡಲಾದ ತಿಂಡಿಗಳು, ಸಕ್ಕರೆಯುಕ್ತ ಪಾನೀಯಗಳು, ತಿನ್ನಲು ಸಿದ್ಧವಿರುವ (Ready-to-eat) ಊಟಗಳು ಮತ್ತು ಸಂರಕ್ಷಕಗಳನ್ನು (Preservatives) ಹೊಂದಿರುವ ಆಹಾರಗಳು ಈ ಪಟ್ಟಿಗೆ ಸೇರುತ್ತವೆ. ಈ ಆಹಾರಗಳು ತಯಾರಿಕಾ ಹಂತದಲ್ಲಿ ತಮ್ಮ ನೈಸರ್ಗಿಕ ಗುಣಗಳನ್ನು ಕಳೆದುಕೊಳ್ಳುತ್ತವೆ. ಸಂಶೋಧಕರ ಪ್ರಕಾರ, ಆಹಾರ ಸಂಸ್ಕರಣೆಯ ವೇಳೆ ಬಳಸುವ ರಾಸಾಯನಿಕಗಳು ಮತ್ತು ಕೈಗಾರಿಕಾ ಪ್ರಕ್ರಿಯೆಗಳು ಮೆದುಳಿನ ಆರೋಗ್ಯಕ್ಕೆ ಮಾರಕವಾಗಿವೆ.
ದೀರ್ಘಕಾಲೀನ ಪರಿಣಾಮಗಳು: ಈ ಆಹಾರಗಳು ನೇರವಾಗಿ ಸ್ಮರಣಶಕ್ತಿ ಕಳೆದುಹೋಗಲು ಕಾರಣವಾಗದಿದ್ದರೂ, ಇವುಗಳಿಂದ ಬರುವ ಬೊಜ್ಜು ಮತ್ತು ಅಧಿಕ ರಕ್ತದೊತ್ತಡವು ಭವಿಷ್ಯದಲ್ಲಿ ಅರಿವಿನ ಕುಸಿತದ (Cognitive decline) ಅಪಾಯವನ್ನು ಹೆಚ್ಚಿಸುತ್ತವೆ. ನಮ್ಮ ಕಲಿಕೆ ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವು ನಾವು ನೀಡುವ ‘ಗಮನ’ದ ಮೇಲೆ ಅವಲಂಬಿತವಾಗಿರುವುದರಿಂದ, ಈ ಸೂಕ್ಷ್ಮ ಬದಲಾವಣೆಗಳು ದೀರ್ಘಕಾಲದ ಮೇಲೆ ದೊಡ್ಡ ಪರಿಣಾಮ ಬೀರಬಹುದು.
ಒಟ್ಟಾರೆ.. ಕೇವಲ ಶಾರೀರಿಕ ಆರೋಗ್ಯಕ್ಕಷ್ಟೇ ಅಲ್ಲದೆ, ನಿಮ್ಮ ಮನಸ್ಸನ್ನು ಚುರುಕಾಗಿಟ್ಟುಕೊಳ್ಳಲು ಅಲ್ಟ್ರಾ-ಪ್ರೊಸೆಸ್ಡ್ ಆಹಾರಗಳಿಂದ ದೂರವಿರುವುದು ಇಂದಿನ ಅನಿವಾರ್ಯತೆಯಾಗಿದೆ. ಹಾಗೇ ಇಂತಹ ತಿಂಡಿ-ತಿನ್ನಿಸುಗಳಿಂದ ದೂರವಿರುವುದರಿಂದ ನಿವು ನಿಮ್ಮ ಆಯಸ್ಸಿನ ಜೊತೆ ಕುಟುಂಬದ ರಕ್ಷಣೆಯನ್ನು ಚೆನ್ನಾಗಿ ನಿರ್ವಹಿಸಬಲ್ಲಿರಿ.























