ಬೆಂಗಳೂರು: ಐಪಿಎಲ್ 2026ರ 34ನೇ ಪಂದ್ಯದಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟನ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಹೈ-ವೋಲ್ಟೇಜ್ ಪಂದ್ಯ ನಡೆಯಲಿದ್ದು, 2026ರ ಐಪಿಎಲ್‌ನ ಲೀಗ್ ಹಂತಕ್ಕೆ ಬೆಂಗಳೂರು ಕೊನೆಯ ಬಾರಿಗೆ ಆತಿಥ್ಯ ವಹಿಸಲಿದೆ. ಈ ಪಂದ್ಯದ ಬಳಿಕ ಆರ್‌ಸಿಬಿ ತನ್ನ ಉಳಿದ ಪಂದ್ಯಗಳನ್ನು ಹೊರಗಿನ ನಗರಗಳಲ್ಲಿ ಹಾಗೂ ರಾಯ್ಪುರದಲ್ಲಿ ಆಡಲಿದೆ.
ತಮ್ಮ ತವರು ಮೈದಾನದಲ್ಲಿ ಆಡಲಿರುವ ಆರ್‌ಸಿಬಿ ತಂಡವು ಕಳೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಅನುಭವಿಸಿದ ಸೋಲಿನಿಂದ ಚೇತರಿಸಿಕೊಳ್ಳುವ ತವಕದಲ್ಲಿದೆ. ಪ್ರಸ್ತುತ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಆರ್‌ಸಿಬಿಗೆ ಈ ಗೆಲುವು ಅತ್ಯಂತ ಮುಖ್ಯವಾಗಿದೆ. ಮತ್ತೊಂದೆಡೆ, ಮುಂಬೈ ಇಂಡಿಯನ್ಸ್ ವಿರುದ್ಧ ಭಾರಿ ಅಂತರದ ಸೋಲು ಕಂಡಿರುವ ಶುಭಮನ್ ಗಿಲ್ ನೇತೃತ್ವದ ಗುಜರಾತ್ ಟೈಟನ್ಸ್ ಸಹ ಗೆಲುವಿನ ಹಳಿಗೆ ಮರಳಲು ಕಾಯುತ್ತಿದೆ.
ಆರ್‌ಸಿಬಿ ನಾಯಕ ರಜತ್ ಪಾಟಿದಾರ್ ಅತ್ಯುತ್ತಮ ಫಾರ್ಮ್ನಲ್ಲಿದ್ದು, ವಿರಾಟ್ ಕೊಹ್ಲಿ ಆರಂಭಿಕರಾಗಿ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಫಿಲ್ ಸಾಲ್ಟ್ ಮತ್ತು ದೇವದತ್ ಪಡಿಕ್ಕಲ್ ಅವರ ಸ್ಫೋಟಕ ಬ್ಯಾಟಿಂಗ್ ತಂಡದ ಶಕ್ತಿಯಾಗಿದೆ. ಬೌಲಿಂಗ್‌ನಲ್ಲಿ ಭುವನೇಶ್ವರ್ ಕುಮಾರ್ ಮತ್ತು ಜೋಶ್ ಹೇಜಲ್‌ವುಡ್ ಎದುರಾಳಿಗಳಿಗೆ ಸವಾಲಾಗಲಿದ್ದಾರೆ.
ಅದೇ ರೀತಿ ಗುಜರಾತ್ ಟೈಟನ್ಸ್ ಶುಭಮನ್ ಗಿಲ್ ಮತ್ತು ಜಾಸ್ ಬಟ್ಲರ್ ಅವರ ಸ್ಫೋಟಕ ಆರಂಭದ ಮೇಲೆ ತಂಡ ಅವಲಂಬಿತವಾಗಿದೆ. ರಶೀದ್ ಖಾನ್ ಅವರ ಸ್ಪಿನ್ ಮೋಡಿ ಮತ್ತು ಮೊಹಮ್ಮದ್ ಸಿರಾಜ್ ಅವರ ವೇಗ ಆರ್‌ಸಿಬಿ ಬ್ಯಾಟರ್‌ಗಳಿಗೆ ಪರೀಕ್ಷೆಯಾಗಲಿದೆ.
ಬೆಂಗಳೂರಿನ ಪಿಚ್ ಎಂದಿನಂತೆ ಬ್ಯಾಟರ್‌ಗಳಿಗೆ ಸ್ವರ್ಗವಾಗಿದ್ದು, ಇಲ್ಲಿ ರನ್ ಮಳೆ ಸುರಿಯುವ ಸಾಧ್ಯತೆಯಿದೆ. ಚಿಕ್ಕ ಬೌಂಡರಿಗಳು ಇರುವುದರಿಂದ ಹೈ-ಸ್ಕೋರಿಂಗ್ ಪಂದ್ಯವನ್ನು ನಿರೀಕ್ಷಿಸಬಹುದು. ಸಂಜೆ ಇಬ್ಬನಿ ಬೀಳುವ ಸಾಧ್ಯತೆ ಇರುವುದರಿಂದ, ಟಾಸ್ ಗೆದ್ದ ತಂಡವು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಹವಾಮಾನವು ಪಂದ್ಯಕ್ಕೆ ಪೂರಕವಾಗಿದ್ದು, ಮಳೆಯ ಆತಂಕವಿಲ್ಲ ಎಂದು ವರದಿಯಾಗಿದೆ.
ಮುಖಾಮುಖಿ ದಾಖಲೆ: ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಕಳೆದ ಮೂರು ಪಂದ್ಯಗಳಲ್ಲಿ ಗುಜರಾತ್ ಟೈಟನ್ಸ್ ಎರಡು ಬಾರಿ ಜಯಗಳಿಸಿ ಮೇಲುಗೈ ಸಾಧಿಸಿದೆ. ಈ ಅಂಕಿ-ಅಂಶ ಆರ್‌ಸಿಬಿಗೆ ತುಸು ಆತಂಕ ಮೂಡಿಸಿದರೂ, ಅಭಿಮಾನಿಗಳೆದುರು ಈ ಪಂದ್ಯ ಗೆದ್ದು ಮುಂದಿನ ಪಂದ್ಯಗಳಿಗೆ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವ ನಿರ್ಧಾರ ಮಾಡಿದೆ.
ಪಂದ್ಯದಾರಂಭ: ರಾತ್ರಿ 7:30ಕ್ಕೆ
ಸ್ಥಳ: ಎಂ. ಚಿನ್ನಸ್ವಾಮಿ ಕ್ರೀಡಾಂಗಣ






















