ಮುಂಬೈ: ಆರ್‌ಸಿಬಿ ಬ್ಯಾಟ್ಸಮನ್‌ಗಳ ಅಬ್ಬರದ ಬ್ಯಾಟಿಂಗ್‌ನಿಂದಾಗಿ ಮುಂಬೈ ಇಂಡಿಯನ್ಸ್ ವಿರುದ್ಧ 240 ರನ್‌ಗಳ ಬೃಹತ್ ರನ್ ಕಲೆ ಹಾಕಿದೆ.
ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯಾವಳಿಯಲ್ಲಿ ಟಾಸ್ ಸೋತು ಮೊದಲ ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 240 ರನ್ ಗಳಿಸಿತು.
ಆರಂಭಿಕ ಆಟಗಾರರಾದ ಪಿಲಿಪ್ ಸಾಲ್ಟ್ ಮತ್ತು ವಿರಾಟ್ ಕೊಹ್ಲಿ 65 ಎಸೆತಗಳಲ್ಲಿ 120 ರನ್‌ಗಳ ಶತಕದ ಜತೆಯಾಟ ನಡೆಸಿ ತಂಡಕ್ಕೆ ಉತ್ತಮ ಅಡಿಪಾಯವನ್ನು ಹಾಕಿದರು.
ಎರಡನೇ ವಿಕೆಟ್‌ಗೆ ಕ್ರಿಸ್‌ಗೆ ಬಂದ ನಾಯಕ ರಜತ್ ಪಾಟೀದಾರ ಕೂಡ ಮುಂಬೈ ಬೌಲರ್‌ಗಳನ್ನು ಮನಸೋಇಚ್ಛೆ ದಂಡಿಸಿದರು. ಕೇವಲ 20 ಎಸೆತದಲ್ಲಿ 4 ಬೌಂಡರಿ, 5 ಸಿಕ್ಸರ್ ಸೇರಿದಂತೆ 53 ರನ್ ಗಳಿಸಿ ಸ್ಯಾಂಟ್ನರ್ ಎಸೆತದಲ್ಲಿ ತಿಲಕ್ ವರ್ಮಾಗೆ ಕ್ಯಾಚ್ ನೀಡಿ ಔಟಾದರು.
ಟಿಮ್ ಡೇವಿಡ್ ಕೇವಲ 16 ಎಸೆತದಲ್ಲಿ 2 ಬೌಂಡರಿ, 3 ಸಿಕ್ಸರ್‌ನಿಂದ 34 ರನ್‌ಗಳಿಸಿ ಅಜೇಯರಾಗಿ ಉಳಿದರು. ಸಾಲ್ಟ್ 36 ಎಸೆತದಲ್ಲಿ 6 ಬೌಂಡರಿ, 6 ಸಿಕ್ಸರ್‌ಗಳಿಂದ 78 ರನ್ ಚಚ್ಚಿದರೆ, ವಿರಾಟ್ ಕೊಹ್ಲಿ 38 ಎಸೆತದಲ್ಲಿ 5 ಬೌಂಡರಿ, 1 ಸಿಕ್ಸರ್‌ನಿಂದ 50 ರನ್ ಗಳಿಸಿದರು.
ಇನ್ನು ಮುಂಬೈ ಇಂಡಿಯನ್ಸ್ ಪರ ಶಾರ್ದೂಲ್ ಠಾಕೂರ್, ಹಾರ್ದಿಕ್ ಪಾಂಡ್ಯ, ಮಿಚೆಲ್ ಸ್ಯಾಂಟ್ನರ್ ಮತ್ತು ಟ್ರೆಂಟ್ ಬೌಲ್ಟ್ ತಲಾ ಒಂದು ವಿಕೆಟ್ ಪಡೆದರು.























