SK Home Ad
Home ಕ್ರೀಡೆ ಮುಂಬೈ ಇಂಡಿಯನ್ಸ್ ಮಹಿಳಾ ತಂಡಕ್ಕೆ ಹೊಸ ಹೆಡ್‌ ಕೋಚ್

ಮುಂಬೈ ಇಂಡಿಯನ್ಸ್ ಮಹಿಳಾ ತಂಡಕ್ಕೆ ಹೊಸ ಹೆಡ್‌ ಕೋಚ್

0
15

ಮುಂಬೈ: ಮುಂಬೈ ಇಂಡಿಯನ್ಸ್‌ ಮಹಿಳಾ ತಂಡದ ಮುಖ್ಯ ಕೋಚ್ ಹುದ್ದೆಯಿಂದ ಲೀಸಾ ಕೈಟ್ಲಿ ಕೆಳಗಿಳಿಯಲು ನಿರ್ಧರಿಸಿದ್ದು, ಅವರ ಉತ್ತರಾಧಿಕಾರಿಯಾಗಿ ಲ್ಯೂಕ್ ವಿಲಿಯಮ್ಸ್ ಅವರನ್ನು 2027ರ ವುಮೆನ್ಸ್ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್)‌ ಆವೃತ್ತಿಗೆ ನೇಮಿಸಲಾಗಿದೆ ಎಂದು ಮುಂಬೈ ಇಂಡಿಯನ್ಸ್ ಘೋಷಿಸಿದೆ.

“ಮುಂಬೈ ಇಂಡಿಯನ್ಸ್ ಕುಟುಂಬಕ್ಕೆ ಲ್ಯೂಕ್ ವಿಲಿಯಮ್ಸ್ ಅವರನ್ನು ಸ್ವಾಗತಿಸಲು ನಮಗೆ ಸಂತೋಷವಾಗುತ್ತಿದೆ. ಲ್ಯೂಕ್ ಒಬ್ಬ ಯಶಸ್ವಿ ತರಬೇತುದಾರರಾಗಿದ್ದು, ಅವರು ಅಪಾರ ಅನುಭವ, ಮಹಿಳಾ ಕ್ರಿಕೆಟ್ ಕುರಿತಾದ ಆಳವಾದ ಜ್ಞಾನ ಮತ್ತು ಆಟಗಾರ್ತಿಯರನ್ನು ಬೆಳೆಸುವ ಬಲವಾದ ಬದ್ಧತೆಯನ್ನು ಹೊಂದಿದ್ದಾರೆ. ನಮ್ಮ ಆಟಗಾರ್ತಿಯರು ಡಬ್ಲ್ಯುಪಿಎಲ್‌ನಲ್ಲಿ ಹೆಮ್ಮೆ ಪಡುವಂಥ ಇತಿಹಾಸವನ್ನು ಸೃಷ್ಟಿಸಿದ್ದಾರೆ. ಲ್ಯೂಕ್ ಅವರ ಮಾರ್ಗದರ್ಶನ ಮತ್ತು ಹರ್ಮನ್‌ಪ್ರೀತ್ ಕೌರ್ ಅವರ ನಾಯಕತ್ವದಲ್ಲಿ ಅವರು ಮತ್ತಷ್ಟು ಬೆಳೆಯುತ್ತಾರೆ, ಹೆಚ್ಚಿನ ಯಶಸ್ಸನ್ನು ಸಾಧಿಸುತ್ತಾರೆ ಎಂಬ ವಿಶ್ವಾಸ ನನಗಿದೆ. ಲ್ಯೂಕ್ ಮತ್ತು ಇಡೀ ತಂಡಕ್ಕೆ ನಾನು ಶುಭ ಹಾರೈಸುತ್ತೇನೆ” ಎಂದು ನೀತಾ ಅಂಬಾನಿ ಹೇಳಿದರು. ಜೊತೆಗೆ ಮುಂಬೈ ಇಂಡಿಯನ್ಸ್‌ಗೆ ಲೀಸಾ ಕೈಟ್ಲಿ ನೀಡಿರುವ ಕೊಡುಗೆಗಾಗಿ ನಾನು ಅವರಿಗೆ ಧನ್ಯವಾದ ಅರ್ಪಿಸಿದರು.

ದಕ್ಷಿಣ ಆಸ್ಟ್ರೇಲಿಯಾದ ಮಾಜಿ ಪ್ರಥಮ ದರ್ಜೆ ಕ್ರಿಕೆಟಿಗರಾದ ಲ್ಯೂಕ್ ವಿಲಿಯಮ್ಸ್ ಅವರು ಮಹಿಳಾ ಕ್ರಿಕೆಟ್‌ ತರಬೇತಿಯಲ್ಲಿ ಉತ್ತಮ ಸಾಧನೆಯ ಹಿನ್ನೆಲೆಯನ್ನು ಹೊಂದಿದ್ದಾರೆ. ಅವರು ವಿಶ್ವದೆಲ್ಲೆಡೆ ಮೂರು ಪ್ರಮುಖ ಟೂರ್ನಿಗಳಲ್ಲಿ ಪ್ರಶಸ್ತಿ ವಿಜೇತ ತಂಡಗಳ ಭಾಗವಾಗಿದ್ದರು. ಆಸ್ಟ್ರೇಲಿಯಾದಲ್ಲಿ ಮಹಿಳಾ ಬಿಗ್ ಬ್ಯಾಷ್ ಲೀಗ್ (2022, 2023), ಇಂಗ್ಲೆಂಡ್‌ನಲ್ಲಿ ದಿ ಹಂಡ್ರೆಡ್ (ಸಹಾಯಕ ಕೋಚ್ ಆಗಿ 2023ರಲ್ಲಿ) ಮತ್ತು ಭಾರತದಲ್ಲಿ ಡಬ್ಲ್ಯುಪಿಎಲ್(2024-ಆರ್‌ಸಿಬಿ) ತಂಡಗಳ ತರಬೇತುದಾರರಾಗಿ ಪ್ರಶಸ್ತಿ ಗೆದ್ದ ದಾಖಲೆ ಹೊಂದಿದ್ದಾರೆ.

“ಮುಂಬೈ ಇಂಡಿಯನ್ಸ್‌ ತಂಡವನ್ನು ಸೇರಿಕೊಳ್ಳಲು ಹಾಗೂ ಪ್ರತಿಭಾವಂತ ಆಟಗಾರ್ತಿಯರು ಮತ್ತು ಸಹಾಯಕ ಸಿಬ್ಬಂದಿಯೊಂದಿಗೆ ಕೆಲಸ ಮಾಡಲು ನಾನು ತುಂಬಾ ಉತ್ಸುಕನಾಗಿದ್ದೇನೆ. ನಾವೆಲ್ಲರೂ ಸೇರಿ ಏನನ್ನಾದರೂ ಸಾಧಿಸಲು, ರೋಚಕ ಬ್ರ್ಯಾಂಡ್‌ನ ಕ್ರಿಕೆಟ್ ಆಡಲು ಮತ್ತು ಯಶಸ್ಸಿಗಾಗಿ ಸ್ಪರ್ಧಿಸಲು ಉತ್ತಮ ಅವಕಾಶವಿದೆ. ಈ ಸವಾಲನ್ನು ಸ್ವೀಕರಿಸಲು ಮತ್ತು ನಮ್ಮ ಅಭಿಮಾನಿಗಳು ಹೆಮ್ಮೆ ಪಡುವಂಥ ಸಾಧನೆ ಮಾಡಲು ನಾನು ಕಾತರದಿಂದ ಎದುರು ನೋಡುತ್ತಿದ್ದೇನೆ” ಎಂದು ಮುಂಬೈ ಇಂಡಿಯನ್ಸ್ ಮಹಿಳಾ ತಂಡದ ನೂತನ ಮುಖ್ಯ ಕೋಚ್ ಲ್ಯೂಕ್ ವಿಲಿಯಮ್ಸ್ ಹೇಳಿದರು.

ಗ್ರೇಡ್ ಕ್ರಿಕೆಟ್‌ಗಾಗಿ ಮೂರು ಬಾರಿ ʻಬ್ರಾಡ್ಮನ್ ಪದಕʼ (2005/06, 2007/08, 2009/10ರ ಆಸ್ಟ್ರೇಲಿಯನ್ ದೇಶೀಯ ಕ್ರಿಕೆಟ್ ಋತು) ಪಡೆದಿರುವ ವಿಲಿಯಮ್ಸ್, ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ಭಾರತದಲ್ಲಿ ಎರಡು ದಶಕಗಳ ಕೋಚಿಂಗ್ ಅನುಭವವನ್ನು ಹೊಂದಿದ್ದಾರೆ. ಇದರಲ್ಲಿ ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡದ ಸಹಾಯಕ ಕೋಚ್ ಆಗಿ ಕಾರ್ಯನಿರ್ವಹಿಸಿದ ಅವಧಿಯೂ ಸೇರಿದೆ.

ಹರ್ಮನ್‌ಪ್ರೀತ್ ಕೌರ್ ಅವರ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ಮಹಿಳಾ ತಂಡ ಡಬ್ಲ್ಯುಪಿಎಲ್‌ನ ಇದುವರೆಗಿನ ನಾಲ್ಕು ಆವೃತ್ತಿಗಳ ಪೈಕಿ ಎರಡರಲ್ಲಿ (2023 ಮತ್ತು 2025) ಪ್ರಶಸ್ತಿ ಗೆದ್ದುಕೊಂಡ ಸಾಧನೆ ಮಾಡಿದೆ.