Home Advertisement
Home ಕ್ರೀಡೆ IPL 2026: ಆರ್‌ಸಿಬಿ ಗೆಲುವಿಗೆ 202 ರನ್‌ ಟಾರ್ಗೆಟ್‌

IPL 2026: ಆರ್‌ಸಿಬಿ ಗೆಲುವಿಗೆ 202 ರನ್‌ ಟಾರ್ಗೆಟ್‌

0
22

ಬೆಂಗಳೂರು: ಇಶಾನ್‌ ಕಿಶನ್‌ ಆಕರ್ಷಕ ಅರ್ಧಶತಕ ಹಾಗೂ ಅನಿಕೇತ್ ವರ್ಮಾ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ 202 ರನ್‌ಗಳ ಗೆಲುವಿನ ಗುರಿಯನ್ನು ನೀಡಿದೆ.

ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಪ್ರಸಕ್ತ ಐಪಿಎಲ್‌ನ ಮೊದಲ ಪಂದ್ಯದಲ್ಲಿ ಟಾಸ್‌ ಸೋತರು ಮೊದಲ ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ಸನ್‌ರೈಸರ್ಸ್‌ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ ಕಳೆದುಕೊಂಡು 201 ರನ್‌ ಗಳಿಸಿತು.

ಆರಂಭಿಕ ಆಘಾತ: ಸನ್‌ರೈಸರ್ಸ್‌ ಆರಂಭದಲ್ಲಿಯೇ ಆಘಾತವನ್ನು ಅನುಭವಿಸಿತು. 2 ಓವರ್‌ಗಳಲ್ಲಿ 18 ರನ್‌ಗಳಿಸಿ ಉತ್ತಮ ಸ್ಥಿತಿಯಲ್ಲಿಯೇ ಇದ್ದ ತಂಡಕ್ಕೆ ಇನ್ನಿಂಗ್ಸ್‌ನ ಮೂರನೇ ಓವರ್‌ ಎಸೆಯಲು ಬಂದ ಜಾಕೋಬ್ ಡಫಿ ಮೊದಲ ಎಸೆತದಲ್ಲಿಯೇ ಅಭಿಷೇಕ ಶರ್ಮಾ (7), ಕೊನೆಯ ಎಸೆತದಲ್ಲಿ ಟ್ರಾವಿಸ್‌ ಹೆಡ್‌ (11) ವಿಕೆಟ್‌ ಉರುಳಿಸಿದರು.

ಜಾಕೋಬ್ ಡಫಿ ಮತ್ತೆ ಇನ್ನಿಂಗ್ಸ್‌ನ ಐದನೇ ಓವರ್‌ ಎರಡನೇ ಎಸೆತದಲ್ಲಿ ನಿತೀಶ್‌ಕುಮಾರ್‌ ರೆಡ್ಡಿ (1) ವಿಕೆಟ್‌ ಉರುಳಿಸಿ ಎಸ್‌ಆರ್‌ಎಚ್‌ನ್ನು ಸಂಕಷ್ಟಕ್ಕೆ ಸಿಲುಕಿಸಿದರು.

ನಾಲ್ಕನೇ ವಿಕೆಟ್‌ಗೆ ಇಶಾನ್‌ ಕಿಶನ್‌ ಮತ್ತು ಹೆನ್ರಿಕ್ ಕ್ಲಾಸೆನ್ ಜೋಡಿ ಕೇವಲ 53 ಎಸೆತಗಳಲ್ಲಿ 97 ರನ್‌ಗಳ ಜತೆಯಾಟ ನಡೆಸಿತು. ಈ ಮೂಲಕ ಈ ಜೋಡಿ ತಂಡವನ್ನು ಉತ್ತಮ ಸ್ಥಿತಿಯತ್ತ ಕೊಂಡೊಯ್ಯುತ್ತಿರುವಾಗಲೇ ರೊಮಾರಿಯೊ ಶೆಫರ್ಡ್ ಅವರ ಎಸೆತದಲ್ಲಿ ಫಿಲ್ ಸಾಲ್ಟ್ ಅವರಿಗೆ ಕ್ಯಾಚ್‌ ನೀಡಿ ಕ್ಲಾಸೆನ್ ಹೊರನಡೆದರು.

ಇವರ ಹಿಂದೆಯೇ ಸಲಿಲ್ ಅರೋರಾ (9), ಇಶಾನ್‌ ಕಿಶನ್‌ (80)‌, ಹರ್ಷ ದುಬೆ (3), ಹರ್ಷಲ್ ಪಟೇಲ್ (0) ಕೂಡ ಪೆವಿಲಿಯನ್‌ ಹಾದಿ ಹಿಡಿದರು.

ಅನಿಕೇತ್ ವರ್ಮಾ ಅಬ್ಬರ: 5ನೇ ವಿಕೆಟ್‌ಗೆ ಕ್ರಿಸ್‌ಗೆ ಬಂದ ಅನಿಕೇತ್ ವರ್ಮಾ ಆರ್‌ಸಿಬಿ ಬೌಲರ್‌ಗಳನ್ನು ದಂಡಿಸಿದರು. ಕೇವಲ 18 ಎಸೆತಗಳಲ್ಲಿ 3 ಬೌಂಡರ್‌ 4 ಸಿಕ್ಸರ್‌ ನೆರವಿನಿಂದ 43 ರನ್‌ಗಳಿಸಿ ಅಬ್ಬರಿಸಿದರು. ಅಂತಿಮವಾಗಿ ಶೆಫರ್ಡ್ ಎಸೆತದಲ್ಲಿ ವಿರಾಟ್‌ ಕೊಹ್ಲಿಗೆ ಕ್ಯಾಚ್‌ ನೀಡಿ ಔಟಾದರು.

ಆರ್‌ಸಿಬಿ ಪರ ಜಾಕೋಬ್ ಡಫಿ ಮತ್ತು ರೊಮಾರಿಯೊ ಶೆಫರ್ಡ್ ಮೂರು ವಿಕೆಟ್‌ಗಳನ್ನು ಕಬಳಿಸಿದರೆ, ಭುವನೇಶ್ವರ ಕುಮಾರ, ಅಭಿನಂದನ ಸಿಂಗ್‌, ಸುಯಶ್ ಶರ್ಮಾ‌ ತಲಾ 1 ವಿಕೆಟ್‌ ಪಡೆದರು.