Home Advertisement
Home ಕ್ರೀಡೆ ಭಾರತ – ಪಾಕಿಸ್ತಾನ ಪಂದ್ಯ ಕನ್ಫರ್ಮ್‌: ನಷ್ಟದಿಂದ ಐಸಿಸಿ ಪಾರು

ಭಾರತ – ಪಾಕಿಸ್ತಾನ ಪಂದ್ಯ ಕನ್ಫರ್ಮ್‌: ನಷ್ಟದಿಂದ ಐಸಿಸಿ ಪಾರು

0
23

ದುಬೈ: ಭಾರತ ವಿರುದ್ಧ ಪಂದ್ಯವನ್ನೇ ಬಹಿಷ್ಕಾರ ಹಾಕುವ ಮೂಲಕ ಪಾಕಿಸ್ತಾನ ಆಡಲು ನಿರಾಕರಿಸಿದ್ದರಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಒಟ್ಟು 1470 ಕೋಟಿ ನಷ್ಟ ಅನುಭವಿಸಬೇಕಿತ್ತು ಎಂದು ವರದಿಗಳಾಗಿವೆ. ಇದಕ್ಕಾಗಿಯೇ ಐಸಿಸಿ ಪಾಕ್ ಕ್ರಿಕೆಟ್ ಮಂಡಳಿ(ಪಿಸಿಬಿ) ಮನವೊಲಿಸಲು ಮುಂದಾಗಿ ಮನವೊಲಿಸಿದೆ ಎಂಬ ಮಾಹಿತಿಗಳು ಬಂದಿವೆ.

ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಅಧ್ಯಕ್ಷರನ್ನು ಒಳಗೊಂಡಂತೆ ಐಸಿಸಿಯೊಂದಿಗಿನ ಸಭೆಯ ನಂತರ, ಪಾಕಿಸ್ತಾನ ಸರ್ಕಾರ ಸೋಮವಾರ ತನ್ನ ಆಟಗಾರರಿಗೆ ಫೆಬ್ರವರಿ 15 ರಂದು ಕೊಲಂಬೊದಲ್ಲಿ ಭಾರತದ ವಿರುದ್ಧ ಮೈದಾನಕ್ಕೆ ಇಳಿಯುವಂತೆ ಸೂಚಿಸಿದೆ. ಇದರಿಂದ, ಐಸಿಸಿಗೆ ಬರೋಬ್ಬರಿ 1470 ಕೋಟಿ ಮೊತ್ತ ಉಳಿದುಕೊಂಡಿದ್ದು, ನಷ್ಟದಿಂದ ಪಾರಾಗುವಂತೆ ಮಾಡಿದೆ.

ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಕೂಡ ಬಾಂಗ್ಲಾ ಸರ್ಕಾರ ಅಣತಿಯಂತೆ ಟಿ20 ವಿಶ್ವಕಪ್ ಪಂದ್ಯಗಳನ್ನು ಆಡಲು ಹಿಂದೇಟು ಹಾಕಿತ್ತು. ಹಲವು ಬಾರಿ ಎಚ್ಚರಿಕೆಗಳ ನಂತರ, ಐಸಿಸಿ ಬಾಂಗ್ಲಾ ತಂಡವನ್ನು ಕೈ ಬಿಟ್ಟು, ಸ್ಕಾಟ್ಲೆಂಡ್ ತಂಡಕ್ಕೆ ವಿಶ್ವಕಪ್ ಆಡುವ ಭಾಗ್ಯ ಕಲ್ಪಿಸಿತ್ತು. ಇದರಿಂದ, ಪಾಕ್ ಭಾರತದ ಎದುರು ಆಟವಾಡಲು ನಿರಾಕರಿಸಿತ್ತು.

ಪಾಕ್ ಈ ಮೊಂಡಾಟದಿಂದ ಐಸಿಸಿಯ ಆದಾಯಕ್ಕೆ ಪೆಟ್ಟು ಬಿದ್ದ ಕಾರಣ, ಚರ್ಚೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ಐಸಿಸಿ ಮುಂದಾಗಿ, ಕಳೆದ ಫೆಬ್ರವರಿ 8ರಂದು ಲಾಹೋರ್‌ನಲ್ಲಿ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಸೇರಿದಂತೆ ಐಸಿಸಿ ಅಧಿಕಾರಿಗಳು ಸುದೀರ್ಘ ಚರ್ಚೆ ನಡೆಸಿತ್ತು.

ಕೆಲ ಮಾಹಿತಿಗಳ ಪ್ರಕಾರ ಐಸಿಸಿಗೆ ಪಂದ್ಯಗಳ ಅಧಿಕೃತ ಪ್ರಸಾರಕರು, ಟಿಕೆಟ್ ಮಾರಾಟ ಹಾಗೂ ಪ್ರಾಯೋಜಕರಿಂದ ಸಿಗಬೇಕಾದ ಆದಾಯಕ್ಕೆ ತಡೆ ನೀಡಿತ್ತು. ಇದರ ಮೊತ್ತವೇ ಒಟ್ಟು 175 ಮೊಲಿಯನ್ ಡಾಲರ್ ಎನ್ನಿಸಿಕೊಂಡಿದ್ದು, ಭಾರತೀಯ ಕರೆನ್ಸಿಗೆ ವರ್ಗಾಯಿಸಿದ್ರೆ, ಅದು ಒಟ್ಟು 1470 ಕೋಟಿ ಎನ್ನಿಸಿಕೊಂಡಿದೆ.

ಸದ್ಯ ಪಾಕಿಸ್ತಾನ ಸರ್ಕಾರವೇ ಭಾರತದ ಜೊತೆ ಟಿ20 ವಿಶ್ವಕಪ್ ಪಂದ್ಯವನ್ನಾಡಲು ಅನುಮತಿ ನೀಡಿದ್ದರಿಂದ, ಐಸಿಸಿಗೆ ಸಿಗಬೇಕಿದ್ದ ಆದಾಯಕ್ಕೆ ಯಾವುದೇ ತಡೆ ಇರದಂತಾಗಿದೆ.

ಐಸಿಸಿ ಕ್ರಮಕ್ಕೆ ವಿರೋಧ: ಇನ್ನು ಐಸಿಸಿ ಪಾಕ್ ಕ್ರಿಕೆಟ್ ಜೊತೆ ಚರ್ಚಿಸಿ, ಮನವೊಲಿಸಿರುವುಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. ಪಾಕ್ ತಂಡವನ್ನು ವಿಶ್ವಕಪ್‌ನಿಂದಲೇ ಬದಿಗಿಡ ಬೇಕಾಗಿತ್ತು ಎಂದು ಭಾರತದ ಕೆಲ ಮಾಜಿ ಕ್ರಿಕೆಟರ್ ಗಳು ಕಿಡಿಕಾರಿದ್ದಾರೆ. ಈ ಪಂದ್ಯ ಅವಶ್ಯಕತೆಯೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದು, ಈಗ ಐಸಿಸಿಯೇ ಪಾಕ್ ಎದುರು ಶರಣಾದಂತೆ ಬಿಂಬಿತಗೊಳ್ಳುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಆಸೀಮ್ ಮುನೀರ್ ಎಳೆತಂದ ಅಧ್ಯಕ್ಷ ನಖ್ವಿ: ಸುದ್ದಿಗೋಷ್ಠಿಯಲ್ಲಿ ಮೊಹ್ಸಿನ್ ನಖ್ವಿ ಈ ವಿಚಾರದಲ್ಲಿ ಪಾಕ್ ಫೀಲ್ಡ್ ಮಾರ್ಷಲ್ ಆಸೀಮ್ ಮುನೀರ್ ಬಗ್ಗೆ ಎಳೆದು ತಂದಿದ್ದಾರೆ. `ಭಾರತ ಮತ್ತು ಐಸಿಸಿಯಿಂದ ಬರುವ ಬೆದರಿಕೆಗಳಿಗೆ ನಾನು ಹೆದರುವುದಿಲ್ಲ, ಪಾಕಿಸ್ತಾನ ಸರ್ಕಾರವೂ ಹೆದರುವುದಿಲ್ಲ. ಫೀಲ್ಡ್ ಮಾರ್ಷಲ್ ಸೈಯದ್ ಅಸಿಮ್ ಮುನೀರ್ ಬಗ್ಗೆ ಹೇಳುವುದಾದರೆ, ನಿಮಗೆ ಅವರ ಬಗ್ಗೆ ಈಗಾಗಲೇ ತಿಳಿದಿದೆ.’ ಎಂದು ತಿಳಿಸಿದ್ದಾರೆ.

Previous articleಮದ್ಯ ಸೇವಿಸಬೇಡ ಎಂದಿದ್ದಕ್ಕೆ ಮಗಳ ಕತ್ತು ಹಿಸುಕಿ ಕೊಲೆಗೈದ ತಾಯಿ
Next articleವಿಧಾನಸೌಧದಲ್ಲೇ 300 ಗ್ರಾಂ ಚಿನ್ನಾಭರಣ, 1.5 ಲಕ್ಷ ನಗದು ಕಳವು