ಬಾಲಿವುಡ್ ನಟಿ ತಮನ್ನಾ ಭಾಟಿಯಾ ತಮ್ಮ ವಿಭಿನ್ನ ಫ್ಯಾಷನ್ ಶೈಲಿಯಿಂದ ಸದಾ ಅಭಿಮಾನಿಗಳ ಗಮನ ಸೆಳೆಯುತ್ತಾರೆ. ಪಾಶ್ಚಿಮಾತ್ಯ ಉಡುಗೆಯಲ್ಲಿ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುವ ಅವರು, ಸಾಂಪ್ರದಾಯಿಕ ಸೀರೆಯಲ್ಲೂ ತಮ್ಮ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುತ್ತಾರೆ. ಇದೀಗ ಆಧ್ಯಾತ್ಮಿಕ ಗುರು ಸದ್ಗುರು ಅವರನ್ನು ಭೇಟಿಯಾದ ಸಂದರ್ಭದಲ್ಲಿ ತೊಟ್ಟಿದ್ದ ದುಬಾರಿ ಸೀರೆಯಿಂದ ನಟಿ ಸುದ್ದಿಯಲ್ಲಿದ್ದಾರೆ.
ಮುಂಬೈನ ಫೇರ್ಮಾಂಟ್ ಹೋಟೆಲ್ನಲ್ಲಿ ಸದ್ಗುರು ಅವರ ಫೋಟೋ ಪುಸ್ತಕ ‘ಡಿಸಅಪಿಯರಿಂಗ್ ಫೇಸಸ್’ ಕುರಿತು ವಿಶೇಷ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ನಟಿ ತಮನ್ನಾ ಭಾಟಿಯಾ ಹಾಗೂ ಖ್ಯಾತ ಚಿತ್ರ ನಿರ್ದೇಶಕ ವಿಶಾಲ್ ಭಾರದ್ವಾಜ್ ಭಾಗವಹಿಸಿದ್ದರು.
ಸದ್ಗುರು ಅವರ ಕಳೆದ 50 ವರ್ಷಗಳ ಪ್ರವಾಸದ ಅನುಭವಗಳು ಮತ್ತು ಛಾಯಾಚಿತ್ರಗಳ ಸಂಗ್ರಹವೇ ಈ ಪುಸ್ತಕದ ವಿಶೇಷತೆ. ಹಿಮಾಲಯ, ಟಿಬೆಟ್ ಹಾಗೂ ನೇಪಾಳದ ಪ್ರವಾಸದ ವೇಳೆ ಸೆರೆಹಿಡಿದ ಹಲವು ಅಪರೂಪದ ಚಿತ್ರಗಳು ಪುಸ್ತಕದಲ್ಲಿವೆ.
ಈ ಭೇಟಿಯ ಫೋಟೋಗಳನ್ನು ತಮನ್ನಾ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿಯೂ ಹಂಚಿಕೊಂಡಿದ್ದಾರೆ. ಕೆಲವು ಸಂಭಾಷಣೆಗಳು ಮುಗಿದ ನಂತರವೂ ದೀರ್ಘಕಾಲ ನೆನಪಿನಲ್ಲಿ ಉಳಿಯುತ್ತವೆ ಎಂದು ಬರೆದುಕೊಂಡಿದ್ದಾರೆ. ಸದ್ಗುರು ಹಾಗೂ ವಿಶಾಲ್ ಭಾರದ್ವಾಜ್ ಅವರೊಂದಿಗಿನ ಭಾನುವಾರದ ಭೇಟಿಯನ್ನು ಸ್ಮರಣೀಯ ಕ್ಷಣ ಎಂದು ವಿವರಿಸಿದ್ದಾರೆ.
65,500 ರೂ. ಬೆಲೆಯ ಹೂವಿನ ಸೀರೆ!
ಈ ಕಾರ್ಯಕ್ರಮಕ್ಕಾಗಿ ತಮನ್ನಾ ಖ್ಯಾತ ಫ್ಯಾಷನ್ ಬ್ರ್ಯಾಂಡ್ ಪಿಚಿಕಾ (Picchika) ವಿನ್ಯಾಸದ ಸೀರೆಯನ್ನು ಆಯ್ಕೆ ಮಾಡಿಕೊಂಡಿದ್ದರು. ತಿಳಿ ಗುಲಾಬಿ ಬಣ್ಣದ ಈ ಸೀರೆಯಲ್ಲಿ ಲಿಲಿ ಮತ್ತು ಪಾರಿಜಾತ ಹೂವುಗಳ ಸುಂದರವಾದ ಹ್ಯಾಂಡ್ಪ್ರಿಂಟಿಂಗ್ ಮಾಡಲಾಗಿತ್ತು.
ಇಟಾಲಿಯನ್ ಪ್ಯೂರ್ ಸಿಲ್ಕ್ ಆರ್ಗೆಂಜಾ ಬಟ್ಟೆಯಿಂದ ಸಿದ್ಧಪಡಿಸಲಾದ ಈ ಸೀರೆಯ ಹೂವುಗಳು ಹಾಗೂ ಕಾಂಡಗಳಿಗೆ ಗೋಲ್ಡ್ ಗೋಟಾ ವರ್ಕ್ ಮಾಡಲಾಗಿದೆ. ಅಂಚಿನಲ್ಲಿ ಮುತ್ತುಗಳ ಸೂಕ್ಷ್ಮ ವಿನ್ಯಾಸ ನೀಡಲಾಗಿದ್ದು, ಸೀರೆಯ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ.
ಇದರೊಂದಿಗೆ ಹೊಂದಿಕೆಯಾಗುವ ಕೋಟಾ ಸಿಲ್ಕ್ನ ಸೈಡ್ ದುಪಟ್ಟಾವನ್ನೂ ತಮನ್ನಾ ಧರಿಸಿದ್ದರು. ಅದರ ಮೇಲೂ ಲಿಲಿ ಮತ್ತು ಪಾರಿಜಾತ ಹೂವುಗಳ ಹ್ಯಾಂಡ್ಪ್ರಿಂಟಿಂಗ್ ಮಾಡಲಾಗಿತ್ತು. ಬ್ರ್ಯಾಂಡ್ನ ಅಧಿಕೃತ ವೆಬ್ಸೈಟ್ನಲ್ಲಿರುವ ಮಾಹಿತಿಯ ಪ್ರಕಾರ ಈ ಸೀರೆಯ ಬೆಲೆ ಬರೋಬ್ಬರಿ 65,500 ರೂಪಾಯಿ.
ಆಭರಣ, ಮೇಕಪ್ನಲ್ಲೂ ವಿಶೇಷ ಗಮನ
ಸೀರೆಯ ಸೌಂದರ್ಯಕ್ಕೆ ಹೊಂದುವಂತೆ ತಮನ್ನಾ ತಮ್ಮದೇ ಬ್ರ್ಯಾಂಡ್ ‘ತಮನ್ನಾ ಫೈನ್ ಜ್ಯುವೆಲ್ಲರಿ’ಯ ನೆಕ್ಲೆಸ್, ಕಿವಿಯೋಲೆಗಳು ಹಾಗೂ ಚಿನ್ನದ ಬಳೆಗಳನ್ನು ಧರಿಸಿದ್ದರು. ಸರಳವಾದ ಮೇಕಪ್, ತುಟಿಗಳಿಗೆ ಹಗುರವಾದ ಬಣ್ಣ ಹಾಗೂ ಹಣೆಯ ಮೇಲಿನ ಪುಟ್ಟ ಕೆಂಪು ಬಿಂದಿ ಅವರ ಸಾಂಪ್ರದಾಯಿಕ ಲುಕ್ಗೆ ಮೆರುಗು ನೀಡಿತ್ತು.
ವಿಭಿನ್ನ ಲುಕ್ನಲ್ಲಿ ಸದ್ಗುರು, ಸರಳ ಉಡುಗೆಯಲ್ಲಿ ವಿಶಾಲ್
ಸಾಮಾನ್ಯವಾಗಿ ಬಿಳಿ ಬಣ್ಣದ ಕುರ್ತಾ ಮತ್ತು ಧೋತಿಯಲ್ಲಿ ಕಾಣಿಸಿಕೊಳ್ಳುವ ಸದ್ಗುರು ಈ ಬಾರಿ ಗಾಢ ಕಿತ್ತಳೆ ಬಣ್ಣದ ಕುರ್ತಾ ಹಾಗೂ ಬಿಳಿ ಧೋತಿ ಧರಿಸಿದ್ದರು. ಭುಜದ ಮೇಲೆ ಸಾಂಪ್ರದಾಯಿಕ ವಿನ್ಯಾಸದ ಶಾಲು, ಕುತ್ತಿಗೆಯಲ್ಲಿ ಮುತ್ತಿನ ಹಾರ ಮತ್ತು ತಲೆಯ ಮೇಲಿನ ಬಣ್ಣಬಣ್ಣದ ಕ್ಯಾಪ್ ಅವರ ಲುಕ್ಗೆ ವಿಶೇಷ ಮೆರುಗು ನೀಡಿತ್ತು.
ಇನ್ನು ಚಿತ್ರ ನಿರ್ದೇಶಕ ವಿಶಾಲ್ ಭಾರದ್ವಾಜ್ ಆಫ್ವೈಟ್ ಬಣ್ಣದ ಕುರ್ತಾ ಹಾಗೂ ಹೊಂದಿಕೆಯಾಗುವ ಬಾಟಮ್ ಧರಿಸಿದ್ದರು. ಸರಳ ಉಡುಗೆ, ಕಪ್ಪು ಫ್ರೇಮ್ನ ಕನ್ನಡಕ ಮತ್ತು ಕೈಗಡಿಯಾರದೊಂದಿಗೆ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು.
ಒಟ್ಟಿನಲ್ಲಿ, ಸದ್ಗುರು ಅವರ ಪುಸ್ತಕದ ಕುರಿತ ವಿಶೇಷ ಸಂವಾದ ಕಾರ್ಯಕ್ರಮದಲ್ಲಿ ತಮನ್ನಾ ಅವರ ಉಪಸ್ಥಿತಿ ಮಾತ್ರವಲ್ಲದೆ, 65,500 ರೂಪಾಯಿ ಬೆಲೆಯ ಹೂವಿನ ಸೀರೆಯೂ ವಿಶೇಷ ಆಕರ್ಷಣೆಯಾಗಿತ್ತು.




















