ಬೆಂಗಳೂರು: ತುಳು ಭಾಷೆಯನ್ನು ಕರ್ನಾಟಕ ರಾಜ್ಯದ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಘೋಷಣೆ ಮಾಡುವ ಉದ್ದೇಶದಿಂದ ರೂಪಿಸಬೇಕಾದ ಕಾನೂನು ಪ್ರಕ್ರಿಯೆಗಳು ಹಾಗೂ ಅನುಷ್ಠಾನದ ವಿಧಿವಿಧಾನಗಳ ಬಗ್ಗೆ ಅಧ್ಯಯನ ನಡೆಸಲು ರಾಜ್ಯ ಸರ್ಕಾರ ನೇಮಿಸಿದ್ದ ಅಧ್ಯಯನ ಸಮಿತಿಯು ಆಂಧ್ರ ಪ್ರದೇಶಕ್ಕೆ ಭೇಟಿ ನೀಡಿ, ಎರಡು ದಿನಗಳ ಕಾಲ ಅಲ್ಲಿನ ಸರಕಾರದ ವಿವಿಧ ಇಲಾಖೆಗಳೊಂದಿಗೆ ಸಮಾಲೋಚನೆ ನಡೆಸಿ ಮಾಹಿತಿ ಸಂಗ್ರಹಿಸಿದೆ.
ಅಧ್ಯಯನ ಸಮಿತಿಯ ನೇತೃತ್ವ: ಈ ಅಧ್ಯಯನ ಸಮಿತಿಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ರಾಜ್ಯ ನಿರ್ದೇಶಕಿ ಕೆ.ಎಂ. ಗಾಯತ್ರಿ ಅವರ ಅಧ್ಯಕ್ಷತೆಯಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಅವರ ಉಪಸ್ಥಿತಿಯಲ್ಲಿ ಒಟ್ಟು ಏಳು ಸದಸ್ಯರ ಸಮಿತಿಯಾಗಿ ಕಾರ್ಯನಿರ್ವಹಿಸಿದೆ.
ಇದನ್ನೂ ಓದಿ: ಸಂಸದ ಬಿವೈ ರಾಘವೇಂದ್ರ ಪ್ರಯಾಣಿಸುತ್ತಿದ್ದ ಕಾರು ಅಪಘಾತ
ಆಂಧ್ರ ಪ್ರದೇಶ ಪ್ರವಾಸದ ವಿವರ: ಅಧ್ಯಯನ ಸಮಿತಿಯು ಜನವರಿ 19 ಮತ್ತು 20ರಂದು ಆಂಧ್ರ ಪ್ರದೇಶದ ರಾಜಧಾನಿ ಅಮರಾವತಿ ಎನ್.ಟಿ.ಆರ್ ಜಿಲ್ಲೆಯ ವಿವಿಧ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿತು.
ಮೊದಲ ದಿನದ ಸಮಾಲೋಚನೆಗಳು: ಅಧ್ಯಯನ ತಂಡವು ಮೊದಲ ದಿನ, ಆಂಧ್ರ ಪ್ರದೇಶ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯಾನಂದ ಅವರನ್ನು ಸಚಿವಾಲಯದಲ್ಲಿ ಭೇಟಿ ಮಾಡಿ ಸಮಾಲೋಚನೆ ನಡೆಸಿತು. ಈ ವೇಳೆ ವಿಜಯಾನಂದ ಅವರು ಮಾತನಾಡಿ, “ಆಂಧ್ರ ಪ್ರದೇಶದಲ್ಲಿ ಉರ್ದು ಭಾಷೆಯನ್ನು ರಾಜ್ಯದ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಘೋಷಣೆ ಮಾಡಿದ ಬಳಿಕ, ಉರ್ದು ಭಾಷೆಯ ಅಭಿವೃದ್ಧಿಗೆ ಸಹಕಾರ ದೊರಕಿದೆ. ಕರ್ನಾಟಕದಲ್ಲಿ ತುಳು ಭಾಷೆಯನ್ನು ಹೆಚ್ಚುವರಿ ಅಧಿಕೃತ ಭಾಷೆಯಾಗಿ ಘೋಷಿಸಲು ಉದ್ದೇಶಿಸಿರುವ ರಾಜ್ಯ ಸರ್ಕಾರದ ನಿಲುವು ಅತ್ಯಂತ ಶ್ಲಾಘನೀಯವಾಗಿದೆ” ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ: ಪ್ರಯಾಗ್‌ರಾಜ್: ಭಾರತೀಯ ವಾಯುಪಡೆ ತರಬೇತಿ ವಿಮಾನ ಪತನ
ಇದೇ ದಿನ ಅಧ್ಯಯನ ತಂಡವು ವಿಧಾನ ಮಂಡಲದ ಸ್ಪೀಕರ್ ಕಚೇರಿ ವಿವಿಧ ಸಚಿವಾಲಯಗಳು ಆಡಳಿತಾತ್ಮಕ ಕಚೇರಿಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿತು.
ಉರ್ದು ಭಾಷೆಯ ಅನುಷ್ಠಾನ ಪ್ರಕ್ರಿಯೆಗಳ ಅಧ್ಯಯನ: ಅಧ್ಯಯನ ಸಮಿತಿಯು ಮುಂದುವರಿದು, ಆಂಧ್ರ ಪ್ರದೇಶ ಅಲ್ಪಸಂಖ್ಯಾತ ಇಲಾಖೆಯ ಕಾರ್ಯದರ್ಶಿ. ಆಂಧ್ರ ಪ್ರದೇಶ ಉರ್ದು ಅಕಾಡೆಮಿಯ ಅಧ್ಯಕ್ಷ. ಆಂಧ್ರ ಉರ್ದು ಭಾಷಾ ಅಭಿವೃದ್ಧಿ ಮಂಡಳಿಯ ನಿರ್ದೇಶಕರು ಇವರೊಂದಿಗೆ ಮಾತುಕತೆ ನಡೆಸಿ, ಉರ್ದು ಭಾಷೆಯನ್ನು ಹೆಚ್ಚುವರಿ ಅಧಿಕೃತ ಭಾಷೆಯಾಗಿ ಘೋಷಣೆ ಮಾಡಿದ ಬಳಿಕ ಅನುಸರಿಸಲಾದ ಅನುಷ್ಠಾನ ಕ್ರಮಗಳ ಬಗ್ಗೆ ವಿವರವಾದ ಮಾಹಿತಿ ಪಡೆದುಕೊಂಡಿತು.
ಎರಡನೇ ದಿನದ ಕ್ಷೇತ್ರ ಮಟ್ಟದ ಅಧ್ಯಯನ: ಅಧ್ಯಯನ ಸಮಿತಿಯು ಎರಡನೇ ದಿನ, ಅಮರಾವತಿ ಮಹಾನಗರ ಪಾಲಿಕೆಯ ವಲಯ ಆಯುಕ್ತ ಸ್ಥಳೀಯ ಪೊಲೀಸ್ ಠಾಣೆ. ಉರ್ದು ಮಾಧ್ಯಮ ಶಾಲೆ. ಆಂಗ್ಲ ಮಾಧ್ಯಮ ಶಾಲೆ. ಆಂಧ್ರ ಪ್ರದೇಶ ತೆಲುಗು ಭಾಷಾ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ. ಎನ್.ಟಿ.ಆರ್ ಜಿಲ್ಲೆಯ ಜಿಲ್ಲಾಧಿಕಾರಿ ಡಾ. ಜಿ. ಲಕ್ಷ್ಮೀಶ. ಅವರನ್ನು ಭೇಟಿ ಮಾಡಿ ಭಾಷಾ ಅನುಷ್ಠಾನವು ಆಡಳಿತ, ಶಿಕ್ಷಣ ಹಾಗೂ ಸಾರ್ವಜನಿಕ ಸೇವೆಗಳ ಮೇಲೆ ಹೇಗೆ ಪರಿಣಾಮ ಬೀರಿದೆ ಎಂಬುದರ ಬಗ್ಗೆ ಮಾಹಿತಿ ಸಂಗ್ರಹಿಸಿತು.
ಇದನ್ನೂ ಓದಿ: Deepfake video ವಿರುದ್ಧ ಸಾರ್ವಜನಿಕರಿಗೆ ಸುಧಾಮೂರ್ತಿ ಎಚ್ಚರಿಕೆ
ಈ ಸಂದರ್ಭದಲ್ಲಿ ತೆಲುಗು ಭಾಷಾ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತ್ರಿವಿಕ್ರಮ್ ರಾವ್ ಅವರು, “ಉರ್ದು ಭಾಷೆಯನ್ನು ಹೆಚ್ಚುವರಿ ಅಧಿಕೃತ ಭಾಷೆಯಾಗಿ ಘೋಷಣೆ ಮಾಡಿರುವುದರಿಂದ ತೆಲುಗು ಭಾಷೆಯ ಅಭಿವೃದ್ಧಿಗೆ ಯಾವುದೇ ತೊಡಕು ಉಂಟಾಗಿಲ್ಲ” ಎಂದು ಸ್ಪಷ್ಟಪಡಿಸಿದರು.
ತುಳು ಭಾಷೆಯ ಇತಿಹಾಸ ಮತ್ತು ಪರಂಪರೆಯ ಪರಿಚಯ: ವಿಭಿನ್ನ ಇಲಾಖೆಗಳ ಭೇಟಿಯ ವೇಳೆ, ತುಳು ಭಾಷೆಯ ಚಾರಿತ್ರಿಕ ಹಿನ್ನೆಲೆ. ಸಾಹಿತ್ಯಿಕ ಶ್ರೀಮಂತಿಕೆ. ಪರಂಪರೆ ಮತ್ತು ಸಂಸ್ಕೃತಿ. ಇವುಗಳ ಬಗ್ಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಅವರು ಅಧಿಕಾರಿಗಳಿಗೆ ವಿವರವಾಗಿ ಮಾಹಿತಿ ನೀಡಿದರು.
ಇದನ್ನೂ ಓದಿ: Smart Energyಯ ಪ್ರಮುಖ ಕೇಂದ್ರವಾಗಿ ಕರ್ನಾಟಕ ರೂಪುಗೊಳ್ಳಲಿದೆ
ಅಧ್ಯಯನ ಸಮಿತಿಯ ಸದಸ್ಯರು: ಈ ಅಧ್ಯಯನ ಸಮಿತಿಯಲ್ಲಿ ಕಾನೂನು ಇಲಾಖೆಯ ಉಪಕಾರ್ಯದರ್ಶಿ – ವನಿತ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಉಪಕಾರ್ಯದರ್ಶಿ – ಮೂರ್ತಿ ಕೆ.ಎನ್., ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪಕಾರ್ಯದರ್ಶಿ – ಶುಭಶ್ರಿ ಕೆ.ಎಂ. ಕರ್ನಾಟಕ ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ – ಕರಿಯಪ್ಪ ಎನ್. ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ – ಸುಧಾಕರ ಶೆಟ್ಟಿ. ಉಸ್ಮಾನಿಯಾ ವಿಶ್ವವಿದ್ಯಾಲಯದ ಕಲಾ ನಿಕಾಯದ ಡೀನ್ – ಪ್ರೊ. ಲಿಂಗಪ್ಪ ಗೋನಾಳ್ ಪಾಲ್ಗೊಂಡಿದ್ದರು.
ವರದಿ ಸಲ್ಲಿಕೆ ಶೀಘ್ರ: ಅಧ್ಯಯನ ಸಮಿತಿಯು ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ ಸಿದ್ಧಪಡಿಸಲಾದ ಅಧ್ಯಯನ ವರದಿಯನ್ನು ಕೆಲವೇ ದಿನಗಳಲ್ಲಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಲಾಗಿದೆ.






















