SK Home Ad
Home ಸುದ್ದಿ ರಾಜ್ಯ ಕಲಬುರಗಿಗೆ ಬಂದು ತಾಕತ್ತು ತೋರಿಸಿ: ಎಚ್‌ಡಿಕೆಗೆ ಪ್ರಿಯಾಂಕ್ ಖರ್ಗೆ ಸವಾಲು

ಕಲಬುರಗಿಗೆ ಬಂದು ತಾಕತ್ತು ತೋರಿಸಿ: ಎಚ್‌ಡಿಕೆಗೆ ಪ್ರಿಯಾಂಕ್ ಖರ್ಗೆ ಸವಾಲು

0
44

ಕಲಬುರಗಿ: ತಾಕತ್, ದಮ್ಮು ಇದ್ದರೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಕಲ್ಯಾಣ ಕರ್ನಾಟಕದ ಕಲಬುರಗಿಯಲ್ಲಾಗಲಿ ಅಥವಾ ಕರಾವಳಿ ಭಾಗದಲ್ಲಿ ಯಾವುದಾದರೂ ಕ್ಷೇತ್ರಕ್ಕೆ ಬಂದು ಸ್ಪರ್ಧಿಸಲಿ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪಂಥಾಹ್ವಾನ ನೀಡಿದರು.

ಕುಮಾರಸ್ವಾಮಿ ಅವರು ತಮ್ಮ ಸ್ವಹಿತಾಸಕ್ತಿಗಾಗಿ ಪಾದಯಾತ್ರೆ ಕೈಗೊಂಡಿದ್ದಾರೆಯೆ ಹೊರತು ರೈತರು, ಮಹಿಳೆಯರು ಮತ್ತು ಯುವಕರಿಗಾಗಿ ಒಂದು ದಿನವಾದರೂ ಪಾದಯಾತ್ರೆ ಮಾಡಿದ್ದಾರಾ? ಎಂದು ಪ್ರಶ್ನಿಸಿದ ಪ್ರಿಯಾಂಕ್, ಮಾಧ್ಯಮಗಳ ಮುಂದೆ ನನ್ನ ಪಕ್ಕದಲ್ಲಿ ಬಂದು ಕುಳಿತು ಚರ್ಚೆಗೆ ಬರಲಿ ಎಂದು ಬಹಿರಂಗ ಸವಾಲು ಹಾಕಿದರು.

ದಕ್ಷಿಣ ಭಾರತದಲ್ಲೇ ಅತಿದೊಡ್ಡದಾದ, ಏಕೈಕ ಬುದ್ಧವಿಹಾರ ನಿರ್ಮಿಸಿದ್ದು ಕಲಬುರಗಿಯಲ್ಲಿ. ಈ ಬಗ್ಗೆ ಕುಮಾರಸ್ವಾಮಿಗೆ ಏಕೆ ಅಸೂಯೆ, ಐಟಿ-ಇಡಿ ಎಲ್ಲ ನಿಮ್ಮ ಕಡೆಯಿದ್ದು ದಾಳಿ ಮಾಡಿಸಿ ಎಂದು ಸವಾಲು ಹಾಕಿದರು.

ದಲಿತರು ಬಲಿತರಾದರೆ ಇವರಿಗೇಕೆ ನೋವು?, ದಲಿತನೊಬ್ಬ ಗೃಹ ಮಂತ್ರಿಯಾಗಿದ್ದು, ಐಟಿ-ಬಿಟಿಯಂಥ ಪ್ರಮುಖ ಇಲಾಖೆಗಳು ಸಿಕ್ಕಿದ್ದು, ಇಂಗ್ಲಿಷ್‌ನಲ್ಲಿ ಮಾತನಾಡೋದು ಅವರಿಗೆ ಸಹಿಸಿಕೊಳ್ಳಲಾಗುತ್ತಿಲ್ಲ. ಅವರಿನ್ನೂ ಯಾವ ಕಾಲದಲ್ಲಿದ್ದಾರೆ ಎಂದು ಪ್ರಿಯಾಂಕ್ ಗುಡುಗಿದರು.