ಬೆಂಗಳೂರು: ಕಚೇರಿಯಲ್ಲಿಯೇ ಮಹಿಳಾ ಸಿಬ್ಬಂದಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ರಾಜ್ಯ ಸರ್ಕಾರದಿಂದ ಅಮಾನತುಗೊಂಡಿರುವ ಹಿರಿಯ ಐಪಿಎಸ್ ಅಧಿಕಾರಿ, ಡಿಜಿಪಿ ರಾಮಚಂದ್ರ ರಾವ್ ಅವರು ವಿಡಿಯೋ ವೈರಲ್ ಆದ ಬಳಿಕ ಇದೇ ಮೊದಲ ಬಾರಿಗೆ ಮಾಧ್ಯಮಗಳ ಮುಂದೆ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ತಮ್ಮ ಮೇಲಿನ ಆರೋಪಗಳ ಕುರಿತು ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ.
ಸೋಮವಾರ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸರ್ಕಾರಿ ನಿವಾಸಕ್ಕೆ ಭೇಟಿ ನೀಡಿದ ರಾಮಚಂದ್ರ ರಾವ್, ಸಚಿವರೊಂದಿಗೆ ಕೆಲಕಾಲ ರಹಸ್ಯ ಮಾತುಕತೆ ನಡೆಸಿದರು. ತಮ್ಮ ಅಮಾನತು ಆದೇಶದ ಕುರಿತಾಗಿಯೇ ಅವರು ಗೃಹ ಸಚಿವರೊಂದಿಗೆ ಚರ್ಚಿಸಲು ಆಗಮಿಸಿದ್ದರು ಎನ್ನಲಾಗಿದೆ.
“ನಾನು ಈಗಾಗಲೇ ಸಾಕಷ್ಟು ಅನುಭವಿಸಿದ್ದೇನೆ”: ಸಚಿವರ ಭೇಟಿಯ ಬಳಿಕ ಹೊರಬಂದ ರಾಮಚಂದ್ರ ರಾವ್ ಅವರನ್ನು ಮಾಧ್ಯಮಗಳು ಸುತ್ತುವರಿದಾಗ ಪ್ರತಿಕ್ರಿಯಿಸಿದ ಅವರು, “ಗೃಹ ಸಚಿವರನ್ನು ಭೇಟಿಯಾಗಿ ನನ್ನ ಸಸ್ಪೆಂಡ್ ಬಗ್ಗೆ ಚರ್ಚೆ ಮಾಡಿದ್ದೇನೆ. ಪ್ರಕರಣದ ತನಿಖೆ ನಡೆಯುತ್ತಿರುವುದರಿಂದ ನಾನು ಈ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಆದರೆ, ನನ್ನ ಮೇಲೆ ಯಾವುದೇ ಕೇಸು ದಾಖಲಾಗಿಲ್ಲ. ಈ ವಿಚಾರದಲ್ಲಿ ನಾನು ಈಗಾಗಲೇ ಸಾಕಷ್ಟು ಸಫರ್ ಆಗಿದ್ದೇನೆ. ದಯವಿಟ್ಟು ನನ್ನನ್ನು ಬಿಟ್ಟುಬಿಡಿ” ಎಂದು ಹೇಳುತ್ತಾ ಕಾರು ಹತ್ತಿ ತೆರಳಿದರು.
ಬಯಲಾಗಿತ್ತು ‘ಎಐ’ ಸುಳ್ಳು!: ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಡಿಜಿಪಿ ಆಗಿದ್ದಾಗ ಕಚೇರಿಯಲ್ಲೇ ನಡೆದಿದೆ ಎನ್ನಲಾದ ಈ ರಾಸಲೀಲೆ ವಿಡಿಯೋ ರಾಜ್ಯಾದ್ಯಂತ ಭಾರಿ ಸಂಚಲನ ಮೂಡಿಸಿತ್ತು. ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತಿದ್ದ ರಾಮಚಂದ್ರ ರಾವ್, “ಇದು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಬಳಸಿ ಸೃಷ್ಟಿಸಿದ ನಕಲಿ ವಿಡಿಯೋ. ನನ್ನ ತೇಜೋವಧೆ ಮಾಡಲು ಈ ರೀತಿ ಮಾಡಲಾಗಿದೆ” ಎಂದು ವಾದಿಸಿದ್ದರು.
ಆದರೆ, ಎಡಿಜಿಪಿ ಆರ್. ಹಿತೇಂದ್ರ ನೇತೃತ್ವದ ತನಿಖಾ ಸಮಿತಿ ಹಾಗೂ ವಿಧಿ ವಿಜ್ಞಾನ ಪ್ರಯೋಗಾಲಯ (FSL) ತಜ್ಞರು ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ 100ಕ್ಕೂ ಹೆಚ್ಚು ಪುಟಗಳ ವರದಿಯಲ್ಲಿ ಆ ವಿಡಿಯೋ ನಕಲಿಯಲ್ಲ, ಅದು ‘ಅಸಲಿ ವಿಡಿಯೋ’ ಎಂಬ ಸ್ಫೋಟಕ ಸತ್ಯವನ್ನು ಬಯಲು ಮಾಡಿದ್ದರು. ಎಫ್ಎಸ್ಎಲ್ ವರದಿ ಅಸಲಿ ಎಂದಿದ್ದರೂ, ಇದೀಗ ಡಿಜಿಪಿ ಅವರು “ನನ್ನ ಮೇಲೆ ಯಾವ ಕೇಸೂ ಇಲ್ಲ” ಎಂದಿರುವುದು ತೀವ್ರ ಕುತೂಹಲ ಕೆರಳಿಸಿದೆ.























