ಎಲೋನ್ ಮಸ್ಕ್ ಅವರ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅಥವಾ AI ಚಾಟ್‌ಬಾಟ್ ‘ಗ್ರಾಕ್’. ಸಾಮಾನ್ಯವಾಗಿ ಇಂತಹ ತಂತ್ರಜ್ಞಾನಗಳು ರಾಜಕೀಯ ವಿಚಾರದಲ್ಲಿ ತಟಸ್ಥವಾಗಿರುತ್ತವೆ. ಆದರೆ ಗ್ರಾಕ್ ಇತ್ತೀಚೆಗೆ ಭಾರತದ ಪ್ರಧಾನಿ ಬಗ್ಗೆ ನೀಡಿದ ಉತ್ತರ ಈಗ ಸೋಶಿಯಲ್ ಮೀಡಿಯಾದಲ್ಲಿ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ.
ಟ್ವಿಟ್ಟರ್‌ನಲ್ಲಿ ಬಳಕೆದಾರರೊಬ್ಬರು “ನೀವು ಒಂದು ವೇಳೆ ಭಾರತದ ಪ್ರಜೆ ಆಗಿದ್ದರೆ, ಪ್ರಧಾನಿ ಸ್ಥಾನಕ್ಕೆ ಯಾರನ್ನು ಬೆಂಬಲಿಸುತ್ತೀರಿ?” ಎಂದು ಕೇಳಿದ ಕಾಲ್ಪನಿಕ ಪ್ರಶ್ನೆಗೆ ಗ್ರಾಕ್ ನೇರವಾಗಿ ನರೇಂದ್ರ ಮೋದಿ ಅವರ ಹೆಸರನ್ನು ಹೇಳಿದೆ. ಕೇವಲ ಹೆಸರನ್ನು ಹೇಳುವುದು ಮಾತ್ರವಲ್ಲದೆ, ಅದಕ್ಕೆ ಬಲವಾದ ಕಾರಣಗಳನ್ನೂ ಸಹ ನೀಡಿದೆ. 2014ರಿಂದ ಭಾರತದ ಮೂಲಸೌಕರ್ಯದಲ್ಲಿ ಆಗಿರುವ ಅಭಿವೃದ್ಧಿ, ‘ಡಿಜಿಟಲ್ ಇಂಡಿಯಾ’ ಯೋಜನೆ ಮತ್ತು ಯುಪಿಐ ಮೂಲಕ ಆದ ಕ್ರಾಂತಿ ಗ್ರಾಕ್‌ನ ಈ ನಿರ್ಧಾರಕ್ಕೆ ಮುಖ್ಯ ಕಾರಣವಂತೆ. ಅಲ್ಲದೆ, ಭಾರತವು ಜಗತ್ತಿನ ಐದನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿರುವುದನ್ನು ಗ್ರಾಕ್ ಶ್ಲಾಘಿಸಿದೆ.
ಇದನ್ನು ಓದಿ: http://ಪಂಚಮಸಾಲಿ ಟ್ರಸ್ಟ್‌ನಿಂದ ಉಮಾಪತಿ, ಪೂಜಾರ್, ಪ್ರಕಾಶ್ ಉಚ್ಚಾಟನೆ
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಬಗ್ಗೆಯೂ ಪ್ರಸ್ತಾಪಿಸಿರುವ ಗ್ರಾಕ್, ರಾಹುಲ್ ಗಾಂಧಿಯವರು ಕೇವಲ ಕಲ್ಯಾಣ ಯೋಜನೆಗಳ ಟೀಕೆಗಳ ಮೇಲೆ ಗಮನ ಹರಿಸುತ್ತಾರೆ. ಆದರೆ ದೇಶದ ಉದ್ಯೋಗ ಸೃಷ್ಟಿ, ತಾಂತ್ರಿಕ ಪ್ರಗತಿ ಮತ್ತು ಜಾಗತಿಕ ಮಟ್ಟದಲ್ಲಿ ಭಾರತದ ಸ್ಥಾನಮಾನವನ್ನು ಗಮನಿಸಿದರೆ ಮೋದಿ ಅವರ ಸಾಧನೆಗಳು ಹೆಚ್ಚು ಪರಿಣಾಮಕಾರಿಯಾಗಿವೆ ಎಂದು ಅಭಿಪ್ರಾಯಪಟ್ಟಿದೆ. ಕೊನೆಯಲ್ಲಿ “ದತ್ತಾಂಶವು ರಾಜವಂಶಕ್ಕಿಂತ ಮಿಗಿಲು” (Data over dynasties) ಎಂಬ ಮಾರ್ಮಿಕ ನುಡಿಯೊಂದಿಗೆ ತನ್ನ ಉತ್ತರವನ್ನು ಮುಕ್ತಾಯಗೊಳಿಸಿದೆ.
ಗ್ರಾಕ್‌ನ ಈ ಉತ್ತರ ಹೊರಬೀಳುತ್ತಿದ್ದಂತೆ ಅಂತರಜಾಲದಲ್ಲಿ ಪ್ರತಿಕ್ರಿಯೆಗಳ ಮಹಾಪೂರವೇ ಹರಿಯಿತು. ಕೆಲವರು “ಗ್ರಾಕ್ ಕೂಡ ಬಿಜೆಪಿ ಬೆಂಬಲಿಗನಾಗಿಬಿಟ್ಟ” ಎಂದು ತಮಾಷೆ ಮಾಡಿದರೆ, ಇನ್ನೂ ಕೆಲವರು “ಯುವಜನತೆ ಮತ್ತು ಹೊಸ ತಲೆಮಾರಿನ ನಂತರ ಈಗ AI ಕೂಡ ವಿರೋಧ ಪಕ್ಷಗಳನ್ನು ಕೈಬಿಡುತ್ತಿದೆ” ಎಂದು ಲೇವಡಿ ಮಾಡುತ್ತಿದ್ದಾರೆ. ಒಟ್ಟಿನಲ್ಲಿ, ಮನುಷ್ಯರ ನಡುವೆ ನಡೆಯುತ್ತಿದ್ದ ರಾಜಕೀಯ ವಾದಗಳು ಈಗ ಯಂತ್ರಗಳ ಲೋಕಕ್ಕೂ ಕಾಲಿಟ್ಟಿರುವುದು ನಿಜಕ್ಕೂ ಅಚ್ಚರಿಯ ಸಂಗತಿ. ಇದೇ ವೇಳೆ ಮಸ್ಕ್ ಅವರು ಗ್ರಾಕ್‌ನ ಮುಂದಿನ ಆವೃತ್ತಿಗಳಲ್ಲಿ ವಿಡಿಯೋ ಮತ್ತು ಚಿತ್ರಗಳ ಗುಣಮಟ್ಟವನ್ನು ಮತ್ತಷ್ಟು ಹೆಚ್ಚಿಸಲು ಸಿದ್ಧತೆ ನಡೆಸುತ್ತಿದ್ದಾರೆ. ತಂತ್ರಜ್ಞಾನ ಮತ್ತು ರಾಜಕೀಯದ ಈ ಜುಗಲ್ಬಂದಿ ಮುಂದೆ ಎಲ್ಲಿಗೆ ಹೋಗಿ ನಿಲ್ಲುತ್ತದೋ ಕಾದು ನೋಡಬೇಕು.





















