ಪಶ್ಚಿಮ ಬಂಗಾಳದ ಭಬಾನಿಪುರದಲ್ಲಿ ಶನಿವಾರ ರಾಜಕೀಯ ಸಂಘರ್ಷ ತಾರಕಕ್ಕೇರಿದೆ. ತೃಣಮೂಲ ಕಾಂಗ್ರೆಸ್ (TMC) ಮತ್ತು ಬಿಜೆಪಿ ಬೆಂಬಲಿಗರ ನಡುವೆ ನಡೆದ ಘರ್ಷಣೆಯಿಂದಾಗಿ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮ ಭಾಷಣವನ್ನು ಅರ್ಧಕ್ಕೆ ನಿಲ್ಲಿಸಿ ವೇದಿಕೆಯಿಂದ ನಿರ್ಗಮಿಸಿದ ಘಟನೆ ನಡೆದಿದೆ.
ಭಬಾನಿಪುರದಲ್ಲಿ ಮಮತಾ ಬ್ಯಾನರ್ಜಿ ಮತ್ತು ಬಿಜೆಪಿ ನಾಯಕ ಸುವೇಂದು ಅಧಿಕಾರಿ ರ್ಯಾಲಿಗಳು ಕೇವಲ 100 ಮೀಟರ್ ಅಂತರದಲ್ಲಿ ಆಯೋಜಿತವಾಗಿದ್ದವು. ಅಧಿಕಾರಿ ಮಾತನಾಡಬೇಕಿದ್ದ ವೇದಿಕೆಯಲ್ಲಿ ಅಳವಡಿಸಲಾಗಿದ್ದ ಬಿಜೆಪಿ ಧ್ವನಿವರ್ಧಕಗಳ ಭಾರಿ ಶಬ್ದವು ತನ್ನ ಸಾರ್ವಜನಿಕ ಸಭೆಗೆ ಅಡ್ಡಿಪಡಿಸುತ್ತಿದೆ ಎಂದು ಮಮತಾ ಬ್ಯಾನರ್ಜಿ ಆಕ್ರೋಶ ವ್ಯಕ್ತಪಡಿಸಿದರು. ಗದ್ದಲದಿಂದ ಹತಾಶೆಗೊಂಡು, “ಬಿಜೆಪಿ ಉದ್ದೇಶಪೂರ್ವಕವಾಗಿ ಅಡ್ಡಿಪಡಿಸುತ್ತಿದೆ” ಎಂದು ಆರೋಪಿಸಿ, ಜನಸಮೂಹಕ್ಕೆ ಕ್ಷಮೆಯಾಚಿಸಿ ಅರ್ಧದಲ್ಲೇ ಭಾಷಣ ಮೊಟಕುಗೊಳಿಸಿ ಹೊರನಡೆದರು.
ಬೆಂಬಲಿಗರ ನಡುವೆ ಮಾರಾಮಾರಿ: ಬ್ಯಾನರ್ಜಿ ನಿರ್ಗಮನದಿಂದ ಕೆರಳಿದ ಟಿಎಂಸಿ ಕಾರ್ಯಕರ್ತರು ಅಧಿಕಾರಿ ರ್ಯಾಲಿ ನಡೆಯುತ್ತಿದ್ದ ಸ್ಥಳದತ್ತ ಮೆರವಣಿಗೆ ನಡೆಸಿದರು. ಈ ವೇಳೆ ಉಭಯ ಪಕ್ಷಗಳ ಬೆಂಬಲಿಗರ ನಡುವೆ ತೀವ್ರ ಘೋಷಣೆಗಳು ಕೇಳಿ ಬರುತ್ತಿದ್ದವು. ಇದೇ ವೇಳೆ ಭೌತಿಕ ಘರ್ಷಣೆಗಳು ಸಂಭವಿಸಿದವು. ಪರಿಸ್ಥಿತಿ ನಿಯಂತ್ರಣ ತಪ್ಪುತ್ತಿದ್ದಂತೆ ಮಧ್ಯಪ್ರವೇಶಿಸಿದ ಭದ್ರತಾ ಪಡೆಗಳು, ಲಾಠಿ ಪ್ರಹಾರದ ಮೂಲಕ ಗುಂಪನ್ನು ಚದುರಿಸಿ ಸುವ್ಯವಸ್ಥೆಯನ್ನು ಮರುಸ್ಥಾಪಿಸಿದ್ದಾರೆ.
ಸುವೇಂದು ಅಧಿಕಾರಿ: ಘಟನೆ ನಡೆದಾಗ ಇನ್ನೂ ಸ್ಥಳಕ್ಕೆ ಆಗಮಿಸದ ಅಧಿಕಾರಿ, “ಅವ್ಯವಸ್ಥೆಗೆ ಮಮತಾ ಬ್ಯಾನರ್ಜಿ ನೇರ ಹೊಣೆಯಾಗುತ್ತಾರೆ. ಬಿಜೆಪಿಯನ್ನು ‘ಗೂಂಡಾ ರಾಜ್’ ಎಂದು ಕರೆದಿದ್ದಕ್ಕೆ ಜನರೇ ಸೂಕ್ತ ಉತ್ತರ ನೀಡಲಿದ್ದಾರೆ,” ಎಂದು ಸುವೇಂದು ತಿರುಗೇಟು ನೀಡಿದ್ದಾರೆ.
ಅಮಿತ್ ಮಾಳವೀಯ: ಬಿಜೆಪಿ ನಾಯಕ ಅಮಿತ್ ಮಾಳವೀಯ ಘಟನೆಯ ವೀಡಿಯೊ ಹಂಚಿಕೊಂಡು, “ಸೋಲಿನ ಭಯದಿಂದ ಮಮತಾ ಬ್ಯಾನರ್ಜಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ,” ಎಂದು ವ್ಯಂಗ್ಯದ ರೂಪದಲ್ಲಿ ಹೇಳಿದ್ದಾರೆ.
ಸದ್ಯ ಟಿಎಂಸಿಯ ಭದ್ರಕೋಟೆಯಾಗಿರುವ ಭಬಾನಿಪುರದಲ್ಲಿ ಏಪ್ರಿಲ್ 29 ರಂದು ಮತದಾನ ನಡೆಯಲಿದ್ದು, 2011 ರಿಂದಲೂ ಬ್ಯಾನರ್ಜಿ ಈ ಕ್ಷೇತ್ರದಲ್ಲಿ ಸತತ ಮೂರು ಬಾರಿ ಗೆಲುವು ಸಾಧಿಸಿದ್ದಾರೆ. ಒಟ್ಟಾರೆ.. ಬಂಗಾಳದ ಹೈವೋಲ್ಟೇಜ್ ಚುನಾವಣಾ ಕಣದಲ್ಲಿ ಈ ಘಟನೆಯು ರಾಜಕೀಯ ಸಂಘರ್ಷವನ್ನು ಮತ್ತಷ್ಟು ಕಾವೇರಿಸಿದೆ.























