ಗುವಾಹಟಿ: ಅಸ್ಸಾಂ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಐದು ಗ್ಯಾರಂಟಿಗಳನ್ನು ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಘೋಷಿಸಿದ್ದಾರೆ.
ನೌಬೋಯಿಚಾದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅವರು, ಪಂಚ ಗ್ಯಾರಂಟಿ ನೀಡುವುದಾಗಿ ಭರವಸೆಯನ್ನು ನೀಡಿದರು. ಅಲ್ಲದೇ ಅಧಿಕಾರಕ್ಕೆ ಬಂದ 100 ದಿನಗಳಲ್ಲಿ ಜುಬೀನ್ ಗರ್ಗ್ ಸಾವಿನ ಪ್ರಕರಣದಲ್ಲಿ ನ್ಯಾಯ ದೊರಕಿಸಿಕೊಡುವುದಾಗಿ ಪ್ರತಿಜ್ಞೆ ಮಾಡುತ್ತೇವೆ ಎಂದರು.
ಐದು ಪ್ರಮುಖ ಗ್ಯಾರಂಟಿಗಳಲ್ಲಿ ಮಹಿಳಾ ಸಬಲೀಕರಣಕ್ಕಾಗಿ ರಾಜ್ಯದ ಮಹಿಳೆಯರಿಗೆ ಪ್ರತಿ ತಿಂಗಳು ಮಾಸಿಕ ನಗದು ವರ್ಗಾವಣೆ. ಸ್ವಂತ ಉದ್ಯಮ ಆರಂಭಿಸಲು ಅಥವಾ ವಿಸ್ತರಿಸಲು 50,000 ರೂ. ಹೆಚ್ಚುವರಿ ಸಹಾಯಧನ ನೀಡಲಾಗುವುದು ಎಂದರು.
ಜನರ ಆರೋಗ್ಯಕ್ಕಾಗಿ ಪ್ರತಿ ಕುಟುಂಬಕ್ಕೆ 25 ಲಕ್ಷ ರೂ. ವರೆಗಿನ ನಗದು ರಹಿತ ಆರೋಗ್ಯ ವಿಮೆ ಸೌಲಭ್ಯ ಜಾರಿ ಮಾಡಲಾಗುವುದು. ರಾಜ್ಯದ ಮೂಲ ನಿವಾಸಿಗಳಿಗೆ ಭೂ ಪಟ್ಟಾಗಳ ವಿತರಣೆ ಮಾಡಲಾಗುವುದು. ಹಿರಿಯ ನಾಗರಿಕರಿಗಾಗಿ ಪ್ರತಿ ತಿಂಗಳು 1,250 ರೂ. ಮಾಶಾಸನ ನೀಡಲಾಗುವುದು ಎಂದು ತಿಳಿಸಿದರು.






















