ಹರೇರ್ ನಾಮ ಹರೇರ್ ನಾಮ
ಹರೇರ್ ನಾಮೈವ ಕೇವಲಂ
ಕಲೌ ನಾಸ್ತಿ ಏವ ನಾಸ್ತಿ ಏವ
ನಾಸ್ತಿ ಏವ ಗತಿರ್ ಅನ್ಯಥಾ
ಶ್ರೀಮದ್ಭಾಗವತದಲ್ಲಿ ತಿಳಿಸಿದಂತೆ ನವವಿಧ ಭಕ್ತಿಯಲ್ಲಿ ಎರಡನೆಯದಾಗಿ ಬರುವದೇ, ಕೀರ್ತನಾ ಭಕ್ತಿ. ಕಲಿಯುಗದಲ್ಲಿ ಹರಿನಾಮ ಕೀರ್ತನೆಯಿಂದ ಮಾತ್ರ ಸದ್ಗತಿ ಬೇರೆ ಯಾವುದೇ ರೀತಿಯಿಂದ ಮುಕ್ತಿಯನ್ನು ಪಡೆಯಲು ಅಸಾಧ್ಯ ಎಂದು ಮೇಲಿನ ಶ್ಲೋಕ ನಮಗೆ ತಿಳಿಸಿಕೊಡುತ್ತದೆ.
ದೇವರನಾಮ, ಕೀರ್ತನೆಗಳು ಹುಟ್ಟಿದ್ದು ಹರಿನಾಮ ಸ್ತುತಿಸುವುದಕ್ಕಾಗಿ. ಭಗವಾನ್ ವಿಷ್ಣುವಿನ ಮಹಿಮೆಗಳನ್ನು ಮತ್ತೆ ಮತ್ತೆ ನೆನಸಿಕೊಂಡು ದೇವರ ಪಾರಮ್ಯ ಹಾಗು ಕಾರುಣ್ಯದಿಂದ ಪುಳಕಿತನಾಗುವವ, ದಾಸನಾಗಿ ಹರಿಭಕ್ತಿಯ ಪ್ರವಾಹದಲ್ಲಿ ಈಸ ಬಯಸುತ್ತಾನೆ. ಇಹದ ಜಂಜಡ, ನಶ್ವರತೆಯನ್ನು, ಸಂಸಾರಸಾಗರದಲ್ಲಿ ಬರುವ ಎಲ್ಲಾ ತೊಂದರೆಗಳನ್ನು ಮರೆತು, ಶ್ರೀಹರಿಯ ಪರಿಪೂರ್ಣತೆಯನ್ನು, ಸರ್ವ ವ್ಯಾಪಕತ್ವವನ್ನು, ಸರ್ವೋತ್ತಮತ್ವವನ್ನು ಒಪ್ಪಿ, ಶ್ರೀಹರಿಯಲ್ಲಿಯೇ ಮನಸ್ಸನ್ನಿಟ್ಟು ತನ್ನನ್ನು ತಾನು ಅರ್ಪಿಸಿಕೊಳ್ಳುವ ಭಾವತೀವ್ರತೆ, ಹರಿನಾಮ ಕೀರ್ತನೆಯ ಪ್ರಧಾನ ಲಕ್ಷಣ.
ಹರಿದಾಸ ಪರಂಪರೆ ಅನಾದಿಕಾಲದಿಂದ ಇದ್ದರೂ, ದಾಸಪರಂಪರೆ ಅದರಲ್ಲೂ ಕನ್ನಡದಲ್ಲಿ ಹರಿನಾಮ ಸಂಕೀರ್ತನೆ ಶ್ರೀಮನ್ಮಧ್ವಾಚಾರ್ಯರ ನಾಲ್ಕು ಪ್ರಮುಖ ಶಿಷ್ಯರಲ್ಲಿ ಒಬ್ಬರಾದ ನರಹರಿ ತೀರ್ಥರಿಂದ ಮುಂದುವರೆಯಿತು. ನಂತರದಲ್ಲಿ ಶ್ರೀಪಾದರಾಜರು ದೇವರನಾವವನ್ನು ಸ್ವತಃ ರಚಿಸಿ ತಮ್ಮ ಶಿಷ್ಯರಾದ ವ್ಯಾಸರಾಜರಿಗೆ ಮಾರ್ಗದರ್ಶಕರಾದರೆ, ವ್ಯಾಸರಾಜರು ಪುರಂದರದಾಸರು, ಕನಕದಾಸರಿಗೆ ದಾಸದೀಕ್ಷೆ ನೀಡಿ, ಕನ್ನಡದಲ್ಲಿ ಹರಿದಾಸ ಕೀರ್ತನೆ ರಚಿಸುವ ಪರಂಪರೆಯನ್ನು ಪೋಷಿಸಿ ಬೆಳೆಸಿದರು. ಕೇವಲ ಹರಿನಾಮ, ದೇವರನಾಮ, ಕೀರ್ತನೆ ರಚನೆ ಮಾತ್ರವಲ್ಲದೆ, ಕೈಯಲ್ಲಿ ತಾಳ ತಂಬೂರಿ ಹಿಡಿದು, ಹರಿನಾಮ ಕೀರ್ತನೆಯನ್ನು ರಚಿಸಿ, ರಾಗ ಸಂಯೋಜಿಸಿ, ಹಾಡಿ, ಹಾಡಿಸಿ, ಹರಿನಾಮ ಸಂಕೀರ್ತಯ ಮಹತ್ವವನ್ನು ಸಾರುತ್ತಾ, ವಿಶೇಷ ಆಂದೋಲನವನ್ನೇ ಸೃಷ್ಟಿಸಿದರು.
ಮನುಷ್ಯ ಜನ್ಮ ದುರ್ಲಭ, ಇದನ್ನು ಹಾಳುಮಾಡಿಕೊಳ್ಳಬೇಡಿ ಹುಚ್ಚಪ್ಪಗಳಿರಾ ಎಂದು ತಿಳಿಸಿದ ದಾಸರು, ಕಣ್ಣು ಕೈಕಾಲು ಕಿವಿ ನಾಲಿಗೆ ಇರುವುದು ತತ್ವಜ್ಞಾನ ಸಾಧನೆಗಾಗಿ, ಹರಿನಾಮ ಕೀರ್ತನೆಗಾಗಿ ಅದು ಬಿಟ್ಟು ಹೆಣ್ಣು, ಹೊನ್ನು, ಮಣ್ಣಿಗಾಗಿ ಹೊಡದಾಡಬೇಡಿ ಎಂದು ತಿಳಿ ಹೇಳಿದ್ದಾರೆ. ನಾವು ಗಳಿಸಿದ ಎಲ್ಲವನ್ನು ಇಲ್ಲೇ ಬಿಟ್ಟು ಹೋಗುವಾಗ ಕೇವಲ ಹರಿನಾಮ ಕೀರ್ತನೆಯ ಫಲ ನಮ್ಮ ಹಿಂದೆ ಬರುತ್ತದೆ. ಅದಕ್ಕಾಗಿ ಹರಿನಾಮ ಕೀರ್ತನೆ ನಿತ್ಯದಲ್ಲೂ ತಪ್ಪದೆ ಮಾಡಿ ಮಾಡಿಸಿ ದೇವರನ್ನು ಒಲಿಸಿಕೊಳ್ಳಿ ಎಂಬ ಬೋಧನೆ, ನಮ್ಮಲ್ಲಿ ಹರಿನಾಮ ಕೀರ್ತನೆಗೆ ಪ್ರೇರೇಪಣೆಯಾಗಬೇಕು.
ಶ್ರೀಹರಿನಾಮ ಕೀರ್ತನೆಯಿಂದ ಪ್ರಹ್ಲಾದ ಹಿರಣ್ಯ ಕಶ್ಯಪು ಕೊಟ್ಟ ಎಲ್ಲಾ ಅಗ್ನಿಪರೀಕ್ಷೆಗಳಿಂದ ಜಯಸಿದ. ಹರಿನಾಮ ಉಚ್ಛಾರದಿಂದ ಅಜಾಮಿಳನಿಗೆ ಕ್ಷೇಮ ನೀಡಿದ, ಶ್ರೀಹರಿಯನ್ನು ತದೇಕಚಿತ್ತದಿಂದ ಸ್ತುತಿಸಿದ ಕರಿ (ಆನೆ)ಯನ್ನು ಮೊಸಳೆಯಿಂದ ರಕ್ಷಿಸಿದ, ಕೃಷ್ಣಾ ಎಂದು ಕರೆದ ದ್ರೌಪದಿಯ ಮಾನವನು ಕಾಪಾಡಿದ, ಮರ ಮರ ಎಂದು ಜಪಿಸಿದರೂ ವೇಗದಲ್ಲಿ ರಾಮನಾಮ ಕೇಳಿಸಿದಾಗ, ಆ ಕೀರ್ತನೆ ಮಾಡಿದ ಋಷಿ ವಾಲ್ಮೀಕಿಗೆ ಜ್ಞಾನ ದಯಪಾಲಿಸಿದ, ಇಂಥ ಹರಿನಾಮ ಕೀರ್ತನೆ ಅವಶ್ಯವಾಗಿ ಎಲ್ಲರೂ ಮಾಡಬೇಕು. ಅದು ಇಂದಿನ ವೇಗದ ಯುಗದಲ್ಲಿ, ಕಠಿಣ ತಪಸ್ಸು, ಸದಾ ದೇವರ ಧ್ಯಾನ, ಸದಾ ದೇವರ ಅರಾಧನೆ ಮಾಡಲು ಸಮಯದ ಅಭಾವವಿರುವ ಈ ಕಲಿಯುಗದಲ್ಲಿ ಸ್ವಲ್ಪ ಸಮಯವಾದರೂ ಹರಿನಾಮ ಕೀರ್ತನೆ, ಸಂಕೀರ್ತನೆ ಮಾಡಿದರೆ ಮುಕ್ತಿಗೆ ಅದೇ ಸೋಪಾನ.