ಒಳ್ಳೆಯ ಹವ್ಯಾಸಗಳು ಪಾರು ಮಾಡುತ್ತವೆ

0
6

ಚಿಕ್ಕವಯಸ್ಸಿನಿಂದಲೇ ಒಳ್ಳೆಯ ಹವ್ಯಾಸಗಳನ್ನು ಮಕ್ಕಳಿಗೆ ರೂಢಿಸಬೇಕು. ಇದು ಅವರನ್ನು ಮುಂದಿನ ವಯಸ್ಸಿನಲ್ಲಿ ಅನೇಕ ಅನಾಹುತಗಳಿಂದ ಪಾರುಮಾಡುತ್ತದೆ. ಚಿಕ್ಕವಯಸ್ಸಿನಲ್ಲಿ ಒಳ್ಳೆಯ ಹವ್ಯಾಸಗಳ ರೂಢಿಯಿಲ್ಲದ ವ್ಯಕ್ತಿಗಳೇ ಬಹುತೇಕ ಆತ್ಮಹತ್ಯೆಗೆ ಒಳಗಾಗುತ್ತಾರೆ.
ಮನುಷ್ಯನಿಗೆ ಪ್ರಕೃತಿ ಸಹಜವಾಗಿ ಅಂಟಿಕೊಳ್ಳುವ ಸ್ವಭಾವವಿದೆ. ಒಳ್ಳೆಯದಕ್ಕೆ ಅವನನ್ನು ಅಂಟಿಸದಿದ್ದರೆ ಸುಲಭವಾಗಿ ಅವನು ಕೆಟ್ಟದ್ದಕ್ಕೆ ಅಂಟಿಕೊಂಡು ಬಿಡುತ್ತಾನೆ. ‘ತನಗೆ ಇದನ್ನು ಬಿಟ್ಟರೆ ಬದುಕಲು ಸಾಧ್ಯವೇ ಇಲ್ಲ’ ಎಂಬ ಭಾವನೆಯಿಂದ ಯಾವ ಕ್ರಿಯೆಗೆ ಅಂಟಿಕೊಳ್ಳುತ್ತಾನೋ ಆ ಎಲ್ಲ ಕ್ರಿಯೆಯು ಹವ್ಯಾಸ ಎನಿಸುತ್ತದೆ. ತಂಬಾಕು ಸೇವನೆಯ ಹವ್ಯಾಸವುಳ್ಳವನಿಗೆ ಅದನ್ನು ಬಿಟ್ಟರೆ ಏನನ್ನೋ ಕಳೆದುಕೊಂಡ ಹಾಗೆ ಚಡಪಡಿಕೆಯಾಗುತ್ತದೆ. ಇದು ಹವ್ಯಾಸವಾಗಿ ರೂಢಿಯಾಗಿರುವುದರ ಲಕ್ಷಣ. ಹಾಗೆಯೇ ಪ್ರತಿದಿನ ಬೆಳಿಗ್ಗೆ-ಸಂಜೆ ಪೂಜೆ ಮಾಡುವ ಹವ್ಯಾಸ ಇದ್ದವನಿಗೆ ಪೂಜೆ ತಪ್ಪಿ ಹೋದಾಗ ಚಡಪಡಿಕೆಯುಂಟಾಗುತ್ತದೆ. ತಂಬಾಕುಕೆಟ್ಟ ಹವ್ಯಾಸವಾದರೆ ಪೂಜೆ ಒಳ್ಳೆ ಹವ್ಯಾಸ.
ಒಳ್ಳೆಯ ಹವ್ಯಾಸಗಳು ಮನುಷ್ಯನನ್ನು ಯೌವ್ವನದಲ್ಲಿ ವಿಷಯಾಕರ್ಷಣೆಯಿಂದ ಪಾರುಮಾಡುತ್ತವೆ, ವೃದ್ಧಾಪ್ಯದಲ್ಲಿ ಚಿಂತೆಯಿಂದ ಪಾರುಮಾಡುತ್ತವೆ. ಯೌವ್ವನದ ವಿಷಯಾಕರ್ಷಣೆ ಎಷ್ಟು ತೀವ್ರವಾಗಿರುತ್ತವೆಯೆಂದರೆ ಒಳ್ಳೆಯ ಹವ್ಯಾಸವಿಲ್ಲದ ಯುವಕ ಯುವತಿಯರು ದಾರಿತಪ್ಪಿ ಮದ್ಯಪಾನ, ಮಾದಕವಸ್ತು ಸೇವನೆ ಮುಂತಾದವುಗಳಗೆ ಒಳಗಾಗಿ ಬಿಡುತ್ತಾರೆ. ಹಾಗೆಯೇ ವೃದ್ಧಾಪ್ಯದಲ್ಲಿ ಚಿಂತೆಯ ತೀವ್ರತೆಯಿರುತ್ತದೆ. ಶ್ರೀ ಶಂಕರಾಚಾರ್ಯರ ಪ್ರಸಿದ್ಧವಾದ ಮಾತು- “ಬಾಲಸ್ತಾವತ್‌ಕ್ರೀಡಾಸಕ್ತಃತರುಣಸ್ತಾವತ್‌ತರುಣೀರಕ್ತಃ | ವೃದ್ಧಸ್ತಾವತ್‌ಚಿಂತಾಸಕ್ತಃ ಪರೇ ಬ್ರಹ್ಮಣಿ ಕೋಽಪಿ ನ ಸಕ್ತ: ||” ಇಲ್ಲಿತರುಣನ ವಿಷಯಾಸಕ್ತಿ ಮತ್ತು ವೃದ್ಧನಚಿಂತಾಸಕ್ತಿಯಜೊತೆಗೆ ಬಾಲಕನ ಕ್ರೀಡಾಸಕ್ತಿಯನ್ನೂ ಹೇಳಿದ್ದಾರೆ. ಆದರೆ ಬಾಲಕನ ಕ್ರೀಡಾಸಕ್ತಿ ಜಾಸ್ತಿಯಾದರೆ ಅಪಾಯವೇನಿಲ್ಲ. ಆದರೆ ವಿಷಯಾಸಕ್ತಿ ಮತ್ತು ಚಿಂತಾಸಕ್ತಿಗಳು ಜಾಸ್ತಿಯಾದರೆ ರೋಗಗಳು, ಆತ್ಮಹತ್ಯೆ ಮುಂತಾದ ಅಪಾಯಗಳಿವೆ. ಅಪಾಯದ ಮಟ್ಟಕ್ಕೆ ವಿಷಯಾಸಕ್ತಿ ಮತ್ತು ಚಿಂತೆ ಬೆಳೆಯದಂತೆ ಮಾಡಿಕೊಳ್ಳಲು ಒಳ್ಳೆಯ ಹವ್ಯಾಸಗಳು ತುಂಬಾ ಸಹಕಾರಿ.
ಒಳ್ಳೆಯ ಹವ್ಯಾಸಗಳು ವಿಷಯಾಸಕ್ತಿಯಿಂದ ಮತ್ತು ಚಿಂತೆಯಿಂದ ಹೇಗೆ ಪಾರುಮಾಡುತ್ತವೆ? ಯಾವುದೇ ಹವ್ಯಾಸ ಮನಸ್ಸಿಗಷ್ಟೇ ಅಲ್ಲದೇ ಶರೀರೇಂದ್ರಿಯಗಳಿಗೆ ರೂಢಿಯಾಗಿರುತ್ತವೆ. ವಿಷಯಗಳ ಆಸಕ್ತಿ ಅಥವಾ ಚಿಂತೆ ತೀವ್ರವಾಗಿರುವಾಗ ಮನಸ್ಸನ್ನು ಬುದ್ಧಿಯ ಕಡಿವಾಣದಿಂದ ನಿಯಂತ್ರಿಸಲು ಕಷ್ಟವಾಗುತ್ತದೆ, ನಿಯಂತ್ರಿಸಬೇಕೆಂಬ ಸಂಕಲ್ಪವಿದ್ದರೂ ಕಷ್ಟವಾಗುತ್ತದೆ. ಆಗ ಆ ಹವ್ಯಾಸವು ಮನಸ್ಸಿನ ಸಂಕಲ್ಪಕ್ಕೆ ಶರೀರೇಂದ್ರಿಯಗಳ ಸಹಕಾರ ಸಿಗುವಂತೆ ಮಾಡುತ್ತದೆ. ಪೂಜೆಯ ಉದಾಹರಣೆಯನ್ನು ತೆಗೆದುಕೊಳ್ಳೋಣ. ಪ್ರತಿದಿನ ಪೂಜೆ ಮಾಡುವ ರೂಢಿಯುಳ್ಳವನಿಗೆ ಪೂಜೆಯ ವೇಳೆ ಬಂದಾಗ ಪೂಜೆಗೆ ಕುಳಿತರೆ ಮನಸ್ಸು ಎಲ್ಲಿ ಸುಳಿಯುತ್ತಿದ್ದರೂ ಕೈಗಳು ಪೂಜೆ ಮಾಡುತ್ತವೆ, ಬಾಯಿ ಮಂತ್ರ ಅಥವಾ ಸ್ತೋತ್ರವನ್ನು ಹೇಳುತ್ತದೆ. ಇದೇ ಅಭ್ಯಾಸ ಬಲ. ಹೀಗೆ ತೊಡಗಿಕೊಂಡಿರುವ ಕೈ ಮತ್ತು ಬಾಯಿಗಳ ಜೊತೆಗೆ ಮನಸ್ಸನ್ನು ಸೇರಿಸುವ ಪ್ರಯತ್ನ ಪ್ರಾಮಾಣಿಕವಾಗಿ ಆಗಬೇಕು. ವಿಷಯಾಕರ್ಷಣೆಯಿಂದ ಅಥವಾ ಚಿಂತೆಯಿಂದ ವಿಕ್ಷಿಪ್ತಗೊಂಡ ಮನಸ್ಸು ಅಷ್ಟು ಸುಲಭವಾಗಿ ಸೇರುವುದಿಲ್ಲ. ಪ್ರಾಮಾಣಿಕ ಪ್ರಯತ್ನವಿದ್ದರೆ ಕೆಲವೇ ಸಮಯದಲ್ಲಿ ಮನಸ್ಸು ಅವುಗಳ ಜೊತೆ ಸೇರತೊಡಗುತ್ತದೆ. ಕ್ರಮೇಣ ಮುಂದುವರಿದರೆ ಪೂರ್ತಿಯಾಗಿ ಸೇರುತ್ತದೆ. ಯಾವುದೇ ಹವ್ಯಾಸವಿದ್ದರೂ ಹಿಗೆಯೇ ಆಗುತ್ತದೆ. ಮೊದಲು ಶರೀರೇಂದ್ರಿಯಗಳು ಅಭ್ಯಾಸ ಬಲದಿಂದ ತೊಡಗುತ್ತವೆ, ಕ್ರಮೇಣ ಚಿಂತೆ ಮತ್ತು ವಿಷಯಾಕರ್ಷಣೆ ಬಿಟ್ಟುಹೋಗುತ್ತದೆ.
ಈ ತಂತ್ರ ಗೊತ್ತಿದ್ದವನು ಜೀವನದ ಗಂಭೀರಸಂದರ್ಭಗಳನ್ನು ಎದುರಿಸಲು ಸಮರ್ಥನಾಗುತ್ತಾನೆ. ಇದು ಗೊತ್ತಿಲ್ಲದವನು ಆತ್ಮಹತ್ಯೆಯ ಅಥವಾ ರೋಗದ ಕೂಪದಲ್ಲಿ ಬೀಳುತ್ತಾನೆ. ಅದಕ್ಕಾಗಿ ಒಳ್ಳೆಯ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು, ಮಕ್ಕಳಿಗೆ ವಿಶೇಷವಾಗಿ ರೂಢಿಯಾಗುವಂತೆ ಮಾಡಬೇಕು.

Previous articleವೃತ್ತಿ ಶಿಕ್ಷಣ ವಂತಿಗೆ ಶುಲ್ಕ ಗಗನಕ್ಕೆ
Next articleವಿದ್ಯಾಭ್ಯಾಸದಲ್ಲಿ ರಾಜಕೀಯ ಚೆಲ್ಲಾಟ ಬೇಡ