ಪೋಸ್ಟ್ ಟ್ರಾಮ್ಯಾಟಿಕ್ ಸ್ಟ್ರೆಸ್ ಡಿಸಾರ್ಡರ್ (PTSD) ಎಂಬ ಗಂಭೀರ ಮಾನಸಿಕ ಸಮಸ್ಯೆಯನ್ನು ಕೇಂದ್ರಬಿಂದುವಾಗಿ ಇಟ್ಟುಕೊಂಡು, ಭ್ರಮೆ ಮತ್ತು ವಾಸ್ತವದ ನಡುವಿನ ಸೂಕ್ಷ್ಮ ರೇಖೆಯನ್ನು ಚಿತ್ರರೂಪದಲ್ಲಿ ಅನಾವರಣಗೊಳಿಸುವ ಪ್ರಯತ್ನವೇ ‘ವಿಕಲ್ಪ’. ಮನಸ್ಸಿನೊಳಗೆ ನಡೆಯುವ ಸಂಘರ್ಷ, ಭಯ, ಆತಂಕ ಮತ್ತು ಅದರಿಂದ ಉದ್ಭವಿಸುವ ಜೀವನದ ವ್ಯಥೆಯನ್ನು ಸೈಕಾಲಜಿಕಲ್-ಥ್ರಿಲ್ಲರ್ ಶೈಲಿಯಲ್ಲಿ ಚಿತ್ರ ಕಟ್ಟಿಕೊಡುತ್ತದೆ.
ಪೃಥ್ವಿ ಎಂಬ ಯುವಕನ ಬಾಲ್ಯದಲ್ಲಿ ಸಂಭವಿಸಿದ ಒಂದು ಭಯಾನಕ ಹಾಗೂ ನಿಗೂಢ ಘಟನೆ, ಅವನ ಬದುಕನ್ನು ನಿರಂತರವಾಗಿ ಹಿಂಬಾಲಿಸುತ್ತಿರುತ್ತದೆ. ಆ ಘಟನೆ ಏನು? ಅದರ ಹಿಂದಿರುವ ಸತ್ಯವೇನು? ಪೃಥ್ವಿ ತನ್ನ ಮನೋಭ್ರಮೆಯಿಂದ ಪಾರಾಗುತ್ತಾನಾ, ಅಥವಾ ಅದೇ ಭಯಕ್ಕೆ ಬಲಿಯಾಗುತ್ತಾನಾ? ಎಂಬ ಕುತೂಹಲವೇ ಚಿತ್ರದ ಕಥಾವಸ್ತುವಿನ ಹೃದಯಭಾಗ.
ಇದನ್ನೂ ಓದಿ: Movie Review ‘ಸೀಟ್ ಎಡ್ಜ್’: ಯೂಟ್ಯೂಬರ್ ಭೂತಲೋಕ
ನಿರ್ದೇಶಕ ಪೃಥ್ವಿರಾಜ್ ಪಾಟೀಲ್ ವಾಸ್ತವ ಮತ್ತು ಭ್ರಮೆಯ ನಡುವಿನ ಗೊಂದಲದಲ್ಲಿ ಸಿಲುಕಿರುವ ವ್ಯಕ್ತಿಯ ಮನಸ್ಥಿತಿಯನ್ನು ಸಮರ್ಥವಾಗಿ ಕಟ್ಟಿಕೊಟ್ಟಿದ್ದಾರೆ. ನಿರ್ದೇಶನದ ಜೊತೆಗೆ ಅವರು ತಾವೇ ನಾಯಕನ ಪಾತ್ರವನ್ನು ನಿರ್ವಹಿಸಿರುವುದು ಪಾತ್ರದ ಆಳವನ್ನು ಇನ್ನಷ್ಟು ಗಟ್ಟಿ ಮಾಡಿದೆ. ಥ್ರಿಲ್ಲರ್ ಹಾಗೂ ಸಸ್ಪೆನ್ಸ್ ಅಂಶಗಳ ಜೊತೆಗೆ, ಪ್ರೇಮ, ಹಾಸ್ಯ ಮತ್ತು ಭಾವನಾತ್ಮಕ ದೃಶ್ಯಗಳನ್ನು ಸಮತೋಲನದಿಂದ ಸೇರಿಸಿ ಚಿತ್ರವನ್ನು ಪ್ರೇಕ್ಷಕರೊಂದಿಗೆ ಸಾಗಿಸುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ.
ಚಿತ್ರದ ಬಹುಭಾಗ ಮಲೆನಾಡು ಮತ್ತು ಕರಾವಳಿ ಪ್ರದೇಶಗಳಲ್ಲಿ ಚಿತ್ರೀಕರಿಸಲ್ಪಟ್ಟಿದ್ದು, ಅಲ್ಲಿನ ನೈಸರ್ಗಿಕ ಸೌಂದರ್ಯ, ಸ್ಥಳೀಯ ಭಾಷೆ, ಸಂಸ್ಕೃತಿ ಮತ್ತು ಬದುಕಿನ ಛಾಯೆಗಳು ಕಥೆಗೆ ಜೀವ ತುಂಬುತ್ತವೆ. ಈ ಹಿನ್ನೆಲೆ ಸಿನಿಮಾಕ್ಕೆ ವಿಭಿನ್ನ ಸ್ವರೂಪ ನೀಡಿದೆ.
ಇದನ್ನೂ ಓದಿ: https://samyuktakarnataka.in/entertainment/amruta-anjan-kannada-movie-review-family-comedy/ಕಾಮಿಡಿ ಕಥನ ಬೇಸರದ ಮನಸಿಗೆ ಅಮೃತ ಸಿಂಚನ
ಹಿರಿಯ ನಟಿ ಹರಿಣಿ ಶ್ರೀಕಾಂತ್ ಅವರನ್ನು ಹೊರತುಪಡಿಸಿ, ಚಿತ್ರದಲ್ಲಿ ಬಹುತೇಕ ಹೊಸ ಪ್ರತಿಭೆಗಳೇ ಕಾಣಿಸಿಕೊಂಡಿದ್ದಾರೆ. ಪೃಥ್ವಿರಾಜ್ ಪಾಟೀಲ್, ನಾಗಶ್ರೀ ಹೆಬ್ಬಾರ್, ಸಂಧ್ಯಾ ವಿನಾಯಕ್, ಗಣಪತಿ ವಡ್ಡಿನಗದ್ದೆ, ಸ್ವರೂಪ್ ಬಚ್ಚ್, ಪೂಜಾ ಬಚ್ಚ್, ಜಯಂತ್ ಡೇವಿಡ್, ಡಾ. ಪ್ರಕೃತಿ, ಮಾಸ್ಟರ್ ಆಯುಷ್ ಸಂತೋಷ್, ಗಿರೀಶ್ ಮೊದಲಾದವರು ತಮ್ಮ ಪಾತ್ರಗಳಿಗೆ ತಕ್ಕಂತೆ ಅಭಿನಯಿಸಿದ್ದಾರೆ.
ನಾಗಶ್ರೀ ಹೆಬ್ಬಾರ್ ಅವರ ಸಹಜ ಅಭಿನಯ ಗಮನ ಸೆಳೆಯುತ್ತದೆ. ಉತ್ತರ ಕನ್ನಡದ ನೆಲಮಟ್ಟದ ಹಾಸ್ಯವನ್ನು ಗಣಪತಿ ಹೆಗಡೆ ತಮ್ಮ ಲೀಲಾಜಾಲ ಅಭಿನಯದ ಮೂಲಕ ಜೀವಂತಗೊಳಿಸಿದ್ದಾರೆ. ಛಾಯಾಗ್ರಾಹಕ ಅಭಿರಾಮ್ ಗೌಡ ಅವರ ಕ್ಯಾಮೆರಾ ಕಣ್ಣು ಕರಾವಳಿ ಹಾಗೂ ಮಲೆನಾಡಿನ ಸೊಬಗನ್ನು ಸುಂದರವಾಗಿ ಸೆರೆಹಿಡಿದಿದೆ. ಸುರೇಶ್ ಆರ್ಮುಗಂ ಅವರ ಸಂಕಲನ ಚಿತ್ರಕ್ಕೆ ಅಗತ್ಯವಾದ ವೇಗ ಮತ್ತು ತೀವ್ರತೆಯನ್ನು ನೀಡುತ್ತದೆ.
ಇದನ್ನೂ ಓದಿ: ತಂದೆ–ಮಗನ ಸಂಬಂಧದ ಭಾವುಕ ಕಥನದ ‘ಚೌಕಿದಾರ್’ ವಿಮರ್ಶೆ
ಒಟ್ಟಿನಲ್ಲಿ, ‘ವಿಕಲ್ಪ’ ಮಾನಸಿಕ ಆರೋಗ್ಯದಂತಹ ಸೂಕ್ಷ್ಮ ವಿಷಯವನ್ನು ಮನರಂಜನೆಯೊಂದಿಗೆ ಹೇಳುವ ಪ್ರಯತ್ನವಾಗಿದ್ದು, ಹೊಸಬರ ತಂಡದ ಸಿಂಸಿಯರ್ ಪ್ರಯತ್ನವಾಗಿ ಗಮನ ಸೆಳೆಯುತ್ತದೆ.























