ವಲವಾರ ನಮ್ಮ ಹೆಮ್ಮೆಯ ಸಿನಿಮಾವಾಗುವ ತಾಕತ್ತಿದೆ: ಕವಿರಾಜ್
ಬೆಂಗಳೂರು: ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಸುತನ್ ಗೌಡ ಅವರ ‘ವಲವಾರ’ ಚಿತ್ರಕ್ಕೆ ಇಡೀ ಕನ್ನಡ ಚಿತ್ರರಂಗದಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಶಿವರಾಜ್‌ಕುಮಾರ್, ರಿಷಬ್ ಶೆಟ್ಟಿ ಸೇರಿದಂತೆ ಅನೇಕ ಸ್ಯಾಂಡಲ್‌ವುಡ್ ಸ್ಟಾರ್‌ಗಳು ಈ ಚಿತ್ರವನ್ನು ಮೆಚ್ಚಿಕೊಂಡಿದ್ದು, ಇದೀಗ ಖ್ಯಾತ ಚಿತ್ರ ಸಾಹಿತಿ ಕವಿರಾಜ್ ಕೂಡ ಚಿತ್ರಕ್ಕೆ ಬಹಿರಂಗವಾಗಿ ಬೆಂಬಲ ಘೋಷಿಸಿದ್ದಾರೆ.
ಬೆಂಗಳೂರಿನ ರೇಣುಕಾ ಸ್ಟುಡಿಯೋದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕವಿರಾಜ್, ‘ವಲವಾರ’ ಸಿನಿಮಾ ಕುರಿತು ತಮ್ಮ ಮನದಾಳದ ಅಭಿಪ್ರಾಯ ಹಂಚಿಕೊಂಡರು.
ಇದನ್ನೂ ಓದಿ: ಉತ್ತರಕರ್ನಾಟಕದ ಮೊದಲ WebSeries – OTTಯಲ್ಲಿ ಹೊಸ ಮಿಂಚು
“ಸಿನಿಮಾ ನನಗೆ ಜೀವನ ಕೊಟ್ಟಿದೆ” – ಕವಿರಾಜ್: “ನಾನು ಈ ಚಿತ್ರದಲ್ಲಿ ಕೆಲಸ ಮಾಡಿಲ್ಲ. ಆದರೆ ನನಗೆ ಸಿನಿಮಾ ಋಣ ಇದೆ. ಇಪ್ಪತ್ತೈದು ವರ್ಷಗಳಿಂದ ನಾನು ತಿನ್ನುವ ಅನ್ನ, ಹಾಕುವ ಬಟ್ಟೆ, ಓಡಾಡುವ ಕಾರು ಎಲ್ಲವನ್ನೂ ಸಿನಿಮಾ ಕೊಟ್ಟಿದೆ. ಹೀಗಾಗಿ ಸಿನಿಮಾ ಋಣ ನನ್ನ ಮೇಲಿದೆ. ನಿರ್ದೇಶಕರು ಒಮ್ಮೆ ಸಿಕ್ಕಿ ಸಿನಿಮಾ ನೋಡಿ ಎಂದಾಗ ನೋಡಿದೆ. ತುಂಬಾ ಖುಷಿ ಆಯ್ತು. ಬಹಳ ದಿನಗಳ ನಂತರ ರಿಲ್ಯಾಕ್ಸ್ ಆಗುವ ಸಿನಿಮಾ ಎನಿಸಿತು,” ಎಂದು ಕವಿರಾಜ್ ಹೇಳಿದರು.
“ಈ ಚಿತ್ರ ನೋಡಿದ ನಂತರ ನಿಮ್ಮೊಳಗೆ ಪ್ರೀತಿ, ಮಾನವೀಯತೆ ಮತ್ತು ಬದುಕಿನ ಪ್ರೀತಿ ಹೆಚ್ಚಾಗುತ್ತದೆ. ನನ್ನ ಕಡೆಯಿಂದ ಏನು ಸಹಾಯ ಬೇಕಾದರೂ ಮಾಡಲು ನಾನು ಸಿದ್ಧ. ಒಂದು ಶೋ ಸ್ಪಾನ್ಸರ್ ಮಾಡುತ್ತೇನೆ ಎಂದೆ. ಆದರೆ ಚಿತ್ರೋತ್ಸವ ಸಮಾರೋಪ ಸಮಾರಂಭದ ಕಾರಣ ಮುಂದೂಡಲಾಯಿತು. ಈ ಚಿತ್ರದಲ್ಲಿ ಎಲ್ಲಿಯೂ ತಪ್ಪು ಕಾಣಿಸಲಿಲ್ಲ. ಮಲೆನಾಡಿನ ನದಿ ಹರಿಯುವಂತೆ ಕಥೆ ಸಾಗುತ್ತದೆ. ಸುತನ್ ಗೌಡ ಭವಿಷ್ಯದ ಭರವಸೆ ನಿರ್ದೇಶಕರು. ಇದು ನಮ್ಮ ಹೆಮ್ಮೆಯ ಸಿನಿಮಾ ಆಗುವ ಶಕ್ತಿ ಹೊಂದಿದೆ,” ಎಂದು ಪ್ರಶಂಸಿಸಿದರು.
ಇದನ್ನೂ ಓದಿ: ಬಾಲಕನ ನೃತ್ಯಕ್ಕೆ ‘ಮೋನಿಕಾ’ ಫಿದಾ: ವಿಡಿಯೋ ವೈರಲ್
“ಕಮರ್ಷಿಯಲ್ ಜೊತೆಗೆ ಒಳ್ಳೆ ಕಥೆ” – ಸುತನ್ ಗೌಡ: ನಿರ್ದೇಶಕ ಸುತನ್ ಗೌಡ ಮಾತನಾಡಿ, “ನಮ್ಮ ಸಿನಿಮಾಗೆ ಉತ್ತಮ ವಿಮರ್ಶೆ ಮತ್ತು ಇಂಡಸ್ಟ್ರಿಯಿಂದ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಅಪ್ಪು ಸರ್ ಕಥೆ ಕೇಳಿ ಇಷ್ಟಪಟ್ಟು PRK ಪ್ರೊಡಕ್ಷನ್ ಮೂಲಕ ಈ ಸಿನಿಮಾ ಮಾಡಲು ಸಿದ್ಧರಾಗಿದ್ದರು. ಅವರ ನಂತರ ಹೊಸ ನಿರ್ಮಾಪಕರು ಮುಂದೆ ಬಂದರು. ಅವರಿಗೆ ನಾನು ಸದಾ ಋಣಿ,” ಎಂದರು.
“ಇದು 2022ರಲ್ಲಿ ಆರಂಭವಾದ ಜರ್ನಿ. ಕವಿರಾಜ್ ಸರ್ ಬೆಂಬಲ ನನಗೆ ದೊಡ್ಡ ಶಕ್ತಿ. ನಾನು ಈ ಸಿನಿಮಾಗೆ ಸಂಭಾವನೆ ಪಡೆದಿಲ್ಲ. ಒಳ್ಳೆ ಕಥೆ ಹೇಳಬೇಕು ಎಂಬುದೇ ನಮ್ಮ ಉದ್ದೇಶ. ಇದು ಕಮರ್ಷಿಯಲ್ ಸಿನಿಮಾನೇ,” ಎಂದು ಹೇಳಿದರು.
ಇದನ್ನೂ ಓದಿ: ʼರಕ್ಕಸಪುರದೋಳ್ʼ: ರಕ್ಕಸನ ಜಾಡು ಹಿಡಿದು…
ನಟವರ್ಗ ಮತ್ತು ತಾಂತ್ರಿಕ ತಂಡ: ಮಾರ್ಫ್ ಪ್ರೊಡಕ್ಷನ್ ಅಡಿ ನಿರ್ಮಾಣಗೊಂಡಿರುವ ‘ವಲವಾರ’ ಸಿನಿಮಾದಲ್ಲಿ ಮಾಸ್ಟರ್ ವೇದಿಕ್ ಕೌಶಲ್, ಮಾಸ್ಟರ್ ಶಯನ್, ಮಾಲತೇಶ್, ಹರ್ಷಿತಾ ಗೌಡ ಮತ್ತು ಅಭಯ್ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ಸಂಗೀತ: ಕದ್ರಿ ಮಣಿಕಾಂತ್, ಸಾಹಿತ್ಯ: ಪ್ರಮೋದ್ ಮರವಂತೆ, ಛಾಯಾಗ್ರಹಣ: ಬಾಲರಾಜ್ ಗೌಡ, ಸಂಕಲನ: ಶ್ರೀಕಾಂತ್ ಎಸ್.ಹೆಚ್, ಶಬ್ಧ ವಿನ್ಯಾಸ: ವಿ.ಜಿ.ರಾಜನ್, ಇವರು ತಾಂತ್ರಿಕವಾಗಿ ಚಿತ್ರಕ್ಕೆ ಬಲ ತುಂಬಿದ್ದಾರೆ.
ಪ್ರೇಕ್ಷಕರ ಮೆಚ್ಚುಗೆ: ಜನವರಿ 30ರಂದು ಬಿಡುಗಡೆಯಾದ ‘ವಲವಾರ’ ಸಿನಿಮಾ ಈಗಾಗಲೇ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಭಾವನಾತ್ಮಕ ಕಥಾವಸ್ತು, ಮಾನವೀಯ ಮೌಲ್ಯಗಳು ಮತ್ತು ಸರಳ ನಿರೂಪಣೆಯಿಂದ ಚಿತ್ರವು ಜನಮನ ಗೆಲ್ಲುತ್ತಿದೆ. ಒಟ್ಟಾರೆ, ‘ವಲವಾರ’ ಸಿನಿಮಾ ಹೊಸ ತಲೆಮಾರಿನ ನಿರ್ದೇಶಕರಿಂದ ಬಂದ ಗುಣಮಟ್ಟದ ಪ್ರಯತ್ನವಾಗಿ ಗುರುತಿಸಿಕೊಂಡಿದ್ದು, ಕನ್ನಡ ಚಿತ್ರರಂಗದ ಹೆಮ್ಮೆಯ ಚಿತ್ರವಾಗಿ ಮೂಡಿಬರುತ್ತಿದೆ.























