ಶಿವಣ್ಣನ ಅಸಲಿ ಪ್ರತಿಭೆ ಈ ಚಿತ್ರದಲ್ಲಿ ಹೊರಬರಲಿದೆ: ‘45’ ಬಗ್ಗೆ ಉಪೇಂದ್ರ ಭರವಸೆ

0
7

ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಮತ್ತು ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ ಕುಮಾರ್ ಅವರ ಕಾಂಬಿನೇಷನ್ ಎಂದರೆ ಕನ್ನಡ ಸಿನಿರಸಿಕರಿಗೆ ಸದಾ ವಿಶೇಷ. ಇಬ್ಬರೂ ಒಟ್ಟಾಗಿ ಕಾಣಿಸಿಕೊಂಡ ಪ್ರತಿಯೊಂದು ಸಂದರ್ಭವೂ ವಿಭಿನ್ನ ಅನುಭವ ನೀಡಿದೆ. ಇದೀಗ ‘45’ ಚಿತ್ರದ ಕಾರ್ಯಕ್ರಮದಲ್ಲಿ ಮಾತನಾಡಿದ ಉಪೇಂದ್ರ, ಈ ಸಿನಿಮಾ ಮೂಲಕ ಶಿವಣ್ಣನ ಅಸಲಿ ಪ್ರತಿಭೆ ಮತ್ತೊಮ್ಮೆ ಎಲ್ಲರಿಗೂ ಸ್ಪಷ್ಟವಾಗಿ ಕಾಣಿಸಿಕೊಳ್ಳಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಉಪೇಂದ್ರ, “ನಾನು ‘ಓಂ’ ಸಿನಿಮಾ ನೋಡಿದಾಗ ಶಿವಣ್ಣನ ಅಭಿನಯ ನೋಡಿ ಬೆಚ್ಚಿಬಿದ್ದಿದ್ದೆ. ಅದೇ ರೀತಿಯಲ್ಲಿ ‘45’ ಸಿನಿಮಾದಲ್ಲೂ ಅವರು ತಮ್ಮ ಅಭಿನಯದ ಮೂಲಕ ಪ್ರೇಕ್ಷಕರನ್ನು ಅಚ್ಚರಿ ಪಡಿಸಲಿದ್ದಾರೆ” ಎಂದು ಹೇಳಿದರು. ಈ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಸಂಪೂರ್ಣ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಹೆಣ್ಣು ವೇಷದಲ್ಲಿನ ಅವರ ಅಭಿನಯ ಈಗಾಗಲೇ ಸಾಕಷ್ಟು ಕುತೂಹಲ ಮೂಡಿಸಿದೆ. ಆದರೆ ಅದು ಮಾತ್ರವಲ್ಲ, ಈ ಚಿತ್ರದಲ್ಲಿ ಅವರು ತೋರಿಸಿರುವ ಇನ್ನೂ ಹಲವು ಅಂಶಗಳು ಸಿನಿಮಾ ನೋಡಿದ ನಂತರವೇ ಪ್ರೇಕ್ಷಕರಿಗೆ ಅರ್ಥವಾಗುತ್ತದೆ ಎಂದು ಉಪೇಂದ್ರ ಹೇಳಿದರು.

ಇದನ್ನೂ ಓದಿ: ಅದ್ದೂರಿಯಾಗಿ ಅನಾವರಣಗೊಂಡ ‘45’ ಟ್ರೇಲರ್ ಟ್ರೆಂಡಿಂಗ್‌ನಲ್ಲಿ

‘45’ ಸಿನಿಮಾವನ್ನು ಅರ್ಜುನ್ ಜನ್ಮ ನಿರ್ದೇಶನ ಮಾಡಿದ್ದು, ಡಿಸೆಂಬರ್ 25ರಂದು ಚಿತ್ರ ತೆರೆಗೆ ಬರಲಿದೆ. ಈಗಾಗಲೇ ಬಿಡುಗಡೆಯಾದ ಟ್ರೇಲರ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸಿನಿಮಾ ಮೇಲಿನ ನಿರೀಕ್ಷೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಚಿತ್ರದಲ್ಲಿ ಉಪೇಂದ್ರ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ತಮ್ಮ ಪಾತ್ರಕ್ಕಿಂತಲೂ ಶಿವಣ್ಣನ ಪಾತ್ರವೇ ಚಿತ್ರದ ನಿಜವಾದ ಹೈಲೈಟ್ ಎಂದು ಅವರು ಸ್ಪಷ್ಟಪಡಿಸಿದ್ದಾರೆ. “ಈ ಚಿತ್ರದಲ್ಲಿ ನಾವು ಎಲ್ಲರೂ ಶಿವಣ್ಣನ ಜೊತೆ ಇದ್ದೇವೆ. ನಿಜವಾದ ಹೀರೋ ಅವರೇ” ಎಂಬ ಮಾತುಗಳು ಅಭಿಮಾನಿಗಳಲ್ಲಿ ಮತ್ತಷ್ಟು ಉತ್ಸಾಹ ಹುಟ್ಟಿಸಿವೆ.

ಇದನ್ನೂ ಓದಿ: ಅಭಿಮಾನಿಗಳಿಗೆ ಗುಡ್ ನ್ಯೂಸ್: ನಿಮಗಾಗಿ ಕಾದಿವೆ ’45’ ಸೀಟುಗಳು..!

ಚಿತ್ರದ ಸಂಗೀತ ನಿರ್ದೇಶನ ಮಾಡಿರುವ ಅರ್ಜುನ್ ಜನ್ಯ ಅವರು ಈ ಚಿತ್ರಕ್ಕಾಗಿ ಸುಮಾರು ಮೂರು ವರ್ಷಗಳ ಕಾಲ ಶ್ರಮ ಪಟ್ಟಿದ್ದಾರೆ ಎಂದು ಉಪೇಂದ್ರ ಶ್ಲಾಘಿಸಿದ್ದಾರೆ. ದೊಡ್ಡ ಕನಸು, ವಿಭಿನ್ನ ಕಥೆ ಮತ್ತು ಪ್ರಬಲ ಪಾತ್ರಗಳೊಂದಿಗೆ ರೂಪುಗೊಂಡಿರುವ ‘45’ ಚಿತ್ರದಲ್ಲಿ ಶಿವರಾಜ್ ಕುಮಾರ್ ಅವರ ಪಾತ್ರವೇ ಕಥೆಯ ಹೃದಯವಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಹೀಗಾಗಿ ಡಿಸೆಂಬರ್ 25ರಂದು ಬಿಡುಗಡೆಯಾಗಲಿರುವ ‘45’ ಸಿನಿಮಾ ಕನ್ನಡ ಸಿನಿಪ್ರೇಮಿಗಳ ನಿರೀಕ್ಷೆಯನ್ನು ಗಗನಕ್ಕೇರಿಸಿದೆ.

Previous articleರಾಮ್ ಜಿ ಯೋಜನೆ ತಂದು ಬಡ ಜನರನ್ನು ಗುಲಾಮಗಿರಿಗೆ ತಳ್ಳುವುದು ಮೋದಿ ಹುನ್ನಾರ : ಖರ್ಗೆ ಆರೋಪ