ಚೊಚ್ಚಲ ಸಿನಿಮಾಗೆ ‘ಅನಂತ ಪದ್ಮನಾಭ’ ಟೈಟಲ್ ರಿವೀಲ್
ಬೆಂಗಳೂರು: ಅಧ್ಯಕ್ಷ, ವಿಕ್ಟರಿ, ರನ್ನ, ಪೊಗರು, ತೀರ್ಥರೂಪ ತಂದೆಯವರಿಗೆ ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳಿಗೆ ಸಖತ್ ಡೈಲಾಗ್ ಬರೆದು ಸಿನಿರಸಿಕರ ಮನಗೆದ್ದಿರುವ ಖ್ಯಾತ ರೈಟರ್ ಪ್ರಶಾಂತ್ ರಾಜಪ್ಪ ಇದೀಗ ಮೊದಲ ಬಾರಿಗೆ ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಅವರ ನಿರ್ದೇಶನದ ಚೊಚ್ಚಲ ಸಿನಿಮಾದ ಟೈಟಲ್ ಇದೀಗ ಅಧಿಕೃತವಾಗಿ ಬಹಿರಂಗಗೊಂಡಿದ್ದು, ಸಿನಿಮಾಗೆ ‘ಅನಂತ ಪದ್ಮನಾಭ’ ಎಂದು ಹೆಸರಿಡಲಾಗಿದೆ.
ಟೈಟಲ್ ರಿವೀಲ್ ಮಾಡುವ ಮುನ್ನವೇ ವಿಡಿಯೋ ಕಂಟೆಂಟ್ ಬಿಡುಗಡೆ ಮೂಲಕ ಸಿನಿಮಾ ಬಗ್ಗೆ ಸಾಕಷ್ಟು ಕುತೂಹಲ ಮೂಡಿಸಿದ್ದ ಪ್ರಶಾಂತ್ ರಾಜಪ್ಪ, ವಿಭಿನ್ನ ಹಾಗೂ ಆಧ್ಯಾತ್ಮಿಕ ಅರ್ಥ ಹೊಂದಿರುವ ಟೈಟಲ್ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಟೈಟಲ್ ಪೋಸ್ಟರ್ ರಿಲೀಸ್ ಆದ ಕೂಡಲೇ ಸಿನಿಮಾ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ: “ಲ್ಯಾಂಡ್ ಲಾರ್ಡ್” ದರ್ಶನಕ್ಕೆ ಸಿದ್ದರಾಮಯ್ಯ ಸಿದ್ದ
‘ಅನಂತ ಪದ್ಮನಾಭ’ ಸಿನಿಮಾದಲ್ಲಿ ರಿಷಿ ನಾಯಕನಾಗಿ ಕಾಣಿಸಿಕೊಂಡಿದ್ದು, ಹಿರಿಯ ನಟ ಪ್ರಕಾಶ್ ಬೆಳವಾಡಿ ಅವರು ಪ್ರಮುಖ ಹಾಗೂ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಎರಡು ವಿಭಿನ್ನ ಜನರೇಷನ್‌ಗಳನ್ನು ಸಂಪರ್ಕಿಸುವ ಕಥಾವಸ್ತು ಹೊಂದಿರುವ ಈ ಸಿನಿಮಾದಲ್ಲಿ, ಜೀವನದ ಮೌಲ್ಯಗಳು, ಸಂಬಂಧಗಳ ಆಳ ಮತ್ತು ಮಾನವೀಯತೆಯ ಅರ್ಥವನ್ನು ಹಾಸ್ಯ ಹಾಗೂ ಭಾವನಾತ್ಮಕ ಅಂಶಗಳೊಂದಿಗೆ ತೆರೆದಿಟ್ಟಿದ್ದಾರೆ ಎಂದು ನಿರ್ದೇಶಕರು ತಿಳಿಸಿದ್ದಾರೆ.
ನಾಯಕಿಯಾಗಿ ಅಂಜಲಿ ಅನೀಶ್ ಅಭಿನಯಿಸಿದ್ದು, ಕಾಮಿಡಿ ಡ್ರಾಮ ಶೈಲಿಯಲ್ಲಿ ಕಥೆಯನ್ನು ಹೇಳುವ ಪ್ರಯತ್ನವನ್ನು ತಂಡ ಮಾಡಿದೆ. ಕಥೆ, ಸಂಭಾಷಣೆ ಮತ್ತು ನಿರೂಪಣೆಯಲ್ಲಿ ಹೊಸತನ ನೀಡುವ ಗುರಿಯೊಂದಿಗೆ ಪ್ರಶಾಂತ್ ರಾಜಪ್ಪ ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ.
ಇದನ್ನೂ ಓದಿ: Movie Review: ಹೊಸ ಯುಗದ ಪ್ರೇಮ್ ಕಹಾನಿ
ಈ ಸಿನಿಮಾವನ್ನು ಅಮ್ರೇಜ್ ಸೂರ್ಯವಂಶಿ ನಿರ್ಮಾಣ ಮಾಡಿದ್ದು, ಬೆಂಗಳೂರು, ಸಾಗರ ಹಾಗೂ ತೀರ್ಥಹಳ್ಳಿ ಸುತ್ತಮುತ್ತ ಚಿತ್ರೀಕರಣ ನಡೆದಿದೆ. ಸದ್ಯ ಎರಡು ಹಾಡುಗಳ ಚಿತ್ರೀಕರಣ ಬಾಕಿ ಉಳಿದಿದ್ದು, ಶೀಘ್ರದಲ್ಲೇ ಅವುಗಳನ್ನೂ ಪೂರ್ಣಗೊಳಿಸುವ ಯೋಜನೆಯಲ್ಲಿ ತಂಡವಿದೆ.
‘ಅನಂತ ಪದ್ಮನಾಭ’ ಸಿನಿಮಾಗೆ ಅಶ್ವಿನ್ ಪಿ ಕುಮಾರ್ ಸಂಗೀತ ನೀಡಿದ್ದು, ವೀನಸ್ ನಾಗರಾಜ್ ಮೂರ್ತಿ ಛಾಯಾಗ್ರಹಣದ ಜವಾಬ್ದಾರಿ ವಹಿಸಿದ್ದಾರೆ. ಟೈಟಲ್ ಮೂಲಕವೇ ಸದ್ದು ಮಾಡುತ್ತಿರುವ ಈ ಸಿನಿಮಾ, ಬಿಡುಗಡೆಗೂ ಮುನ್ನವೇ ಸಿನಿಪ್ರೇಕ್ಷಕರ ಗಮನ ಸೆಳೆದಿದ್ದು, ಶೀಘ್ರದಲ್ಲೇ ಚಿತ್ರಮಂದಿರಗಳಲ್ಲಿ ತೆರೆಕಾಣುವ ನಿರೀಕ್ಷೆಯಿದೆ.























