ಔಟ್ ಅಂಡ್ ಔಟ್ ಕಾಮಿಡಿ ಜೊತೆಗೆ ವಿಭಿನ್ನ ಕಥೆಯ ಮೂಲಕ ಬರ್ತಿದ್ದಾರೆ ನಟ ಕೋಮಲ್
ಬೆಂಗಳೂರು: ನಟ ಕೋಮಲ್ ಕುಮಾರ್ ಹೊಸ ಸಿನಿಮಾವೊಂದರ ಮೂಲಕ ಮತ್ತೆ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಸಿನಿಮಾಗಳ ಆಯ್ಕೆ ವಿಚಾರದಲ್ಲಿ ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಚ್ಯೂಸಿ ಆಗಿರುವ ಕೋಮಲ್, ಬಂದ ಎಲ್ಲ ಕಥೆಗಳಿಗೆ ಸಹಿ ಹಾಕದೆ, ವಿಭಿನ್ನವಾಗಿ ಕಾಣಿಸುವ ಹಾಗೂ ಇಂದಿನ ಕಾಲಘಟ್ಟಕ್ಕೆ ಹೊಂದಿಕೊಳ್ಳುವ ಕಥೆಗಳನ್ನಷ್ಟೇ ಆಯ್ಕೆ ಮಾಡುತ್ತಿದ್ದಾರೆ. ಅದೇ ಸಾಲಿನಲ್ಲಿ ಸದ್ಯ ಘೋಷಣೆಯಾಗಿರುವ ಸಿನಿಮಾ ‘ತೆನಾಲಿ ಡಿ ಎ ಎಲ್ ಎಲ್ ಬಿ’.
ಚಿತ್ರದ ಶೀರ್ಷಿಕೆ ಸೂಚಿಸುವಂತೆಯೇ, ಈ ಸಿನಿಮಾದಲ್ಲಿ ಕೋಮಲ್ ಕುಮಾರ್ ವಕೀಲನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಪೋಸ್ಟರ್‌ನಲ್ಲಿ ಕೋಮಲ್ ಲಾಯರ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ಅವರ ಪಾತ್ರದ ಬಗ್ಗೆ ಕುತೂಹಲ ಮೂಡಿಸಿದೆ. ಇದೇ ಮೊದಲ ಬಾರಿಗೆ ಅವರು ಪೂರ್ಣಾವಧಿ ವಕೀಲನ ಪಾತ್ರದಲ್ಲಿ ಅಭಿನಯಿಸುತ್ತಿರುವುದು ಈ ಚಿತ್ರದ ವಿಶೇಷತೆ.
ಇದನ್ನೂ ಓದಿ: AI ಲೋಕದಲ್ಲಿ ‘ದೇವರ’ ದರ್ಶನ : ಕ್ರೇಜಿ ಸ್ಟಾರ್ ಒನ್ ಮ್ಯಾನ್ ಶೋ
‘ತೆನಾಲಿ ಡಿ ಎ ಎಲ್ ಎಲ್ ಬಿ’ ಸಿನಿಮಾವನ್ನು ಸಿದ್ದ್ರುವ್ ಸಿದ್ದು ನಿರ್ದೇಶಿಸುತ್ತಿದ್ದು, ಕಥೆ ಹಾಗೂ ಚಿತ್ರಕಥೆಯನ್ನೂ ಅವರೇ ಬರೆದಿದ್ದಾರೆ. ಈ ಹಿಂದೆ ವಿಜಯರಾಘವೇಂದ್ರ ಅಭಿನಯದ ‘ಮರೀಚಿ’ ಸಿನಿಮಾವನ್ನು ನಿರ್ದೇಶಿಸಿದ್ದ ಸಿದ್ದ್ರುವ್ ಸಿದ್ದು, ಆ ಚಿತ್ರ ವಿಮರ್ಶಾತ್ಮಕವಾಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. ‘ಮರೀಚಿ’ ಬಳಿಕ ಸಿದ್ದ್ರುವ್ ಸಿದ್ದು, ಕೋಮಲ್ ಅವರಿಗಾಗಿ ವಿಭಿನ್ನ ಹಾಗೂ ಸಮಕಾಲೀನ ವಿಷಯವನ್ನು ಆಧರಿಸಿದ ಕಥೆಯನ್ನು ರೂಪಿಸಿರುವುದಾಗಿ ಚಿತ್ರತಂಡ ತಿಳಿಸಿದೆ.
ಸದ್ಯ ಪೋಸ್ಟರ್ ಹಾಗೂ ಪ್ರಚಾರಾತ್ಮಕ ಕಂಟೆಂಟ್ ಬಿಡುಗಡೆ ಮಾಡಿರುವ ಚಿತ್ರತಂಡ, ಮೇ ತಿಂಗಳಲ್ಲಿ ಚಿತ್ರೀಕರಣ ಪ್ರಾರಂಭಿಸುವ ಯೋಜನೆ ಹೊಂದಿದೆ. ಸಿನಿಮಾದ ಕಥೆ, ಪಾತ್ರಗಳು ಹಾಗೂ ಇತರೆ ವಿವರಗಳನ್ನು ಹಂತ ಹಂತವಾಗಿ ಬಹಿರಂಗಪಡಿಸಲಾಗುವುದು ಎಂದು ತಿಳಿಸಲಾಗಿದೆ.
ಇದನ್ನೂ ಓದಿ: Movie Review: ಸಮಾಜಮುಖಿ ಭಾರತಿ: ಶಿಕ್ಷಣ ಕ್ರಾಂತಿಗೆ ಸ್ಫೂರ್ತಿ
ಗಮನಾರ್ಹ ಅಂಶವೆಂದರೆ, ಸಿನಿಮಾದಲ್ಲಷ್ಟೇ ಅಲ್ಲದೆ ನಿಜ ಜೀವನದಲ್ಲಿಯೂ ಕೋಮಲ್ ಎಲ್‌ಎಲ್‌ಬಿ ಪದವಿಧರರಾಗಿದ್ದಾರೆ. ಅನೇಕ ವರ್ಷಗಳ ಬಳಿಕ ಈಗ ತೆರೆ ಮೇಲೆ ವಕೀಲನಾಗಿ ಮಿಂಚಲು ಅವರು ಸಿದ್ಧರಾಗಿದ್ದು, ಈ ಪಾತ್ರ ಅವರಿಗೆ ಮತ್ತಷ್ಟು ವಿಶೇಷತೆ ತಂದಿದೆ.
ಈ ಸಿನಿಮಾಗೆ ಸಿದ್ದ್ರುವ್ ಸಿದ್ದು, ಸಂತೋಷ್ ಮಾಯಪ್ಪ, ಪ್ರದೀಪ್ ಕುಮಾರ್ ಮಹಾಲಿಂಗಯ್ಯ ಹಾಗೂ ರೇಣುಕಾ ಪ್ರಸಾದ್ ಬಂಡವಾಳ ಹಾಕಿದ್ದಾರೆ. ರಿತ್ವಿಕ್ ಮುರಳಿಧರನ್ ಸಂಗೀತ ನಿರ್ದೇಶನ ಮಾಡುತ್ತಿದ್ದು, ಉದಯ್ ಲೀಲಾ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಪೋಸ್ಟರ್ ಬಿಡುಗಡೆ ಮೂಲಕ ಅಧಿಕೃತವಾಗಿ ಚಾಲನೆ ಪಡೆದಿರುವ ‘ತೆನಾಲಿ ಡಿ ಎ ಎಲ್ ಎಲ್ ಬಿ’ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಚಿತ್ರತಂಡ ಸದ್ಯದಲ್ಲೇ ಬಹಿರಂಗಪಡಿಸುವುದಾಗಿ ತಿಳಿಸಿದೆ.























